ದುರ್ಗಾಂಬಿಕ ದೇವಿ ಮಹೋತ್ಸವ
ಚನ್ನಗಿರಿ: ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ಶ್ರೀ ದುರ್ಗಾಂಬಿಕ ದೇವಿಯ ದೇವಸ್ಥಾನದ ಉದ್ಘಾಟನಾ ಮಹೋತ್ಸವವು ಫೆ.15ರಿಂದ19ರ ವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
15ರಂದು ಬಸವಾಪಟ್ಟಣದಿಂದ ದೇವಿಯ ಕಳಸವನ್ನು ಕಾಲ್ನಡಿಗೆಯಿಂದ ಗ್ರಾಮಕ್ಕೆ ಪ್ರವೇಶ, 17ರಂದು ನಂದಿ ಧ್ವಜಾರೋಹಣ, 18ರಂದು ಪೂರ್ಣ ಕುಂಭ ಮೆರವಣಿಗೆ ನಡೆಯಲಿದ್ದು, ಮೆರವಣಿಗೆ ಉದ್ಘಾಟನೆಯನ್ನು ಚಿತ್ರದುರ್ಗ ಉಪ ಅರಣ್ಯ ಸಂರಕ್ಷಕ ರತ್ನಮಾಲ ನೆರವೇರಿಸಲಿದ್ದಾರೆ.
19ರಂದು ಪಂಚ ಕಳಸ ಪೂಜೆಯೊಂದಿಗೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯಲಿದೆ. ದೇವಾಲಯದ ಉದ್ಘಾಟನೆಯನ್ನು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ನೆರವೇರಿಸುವರು. ಅಂದು ನಡೆಯುವ ಧರ್ಮ ಸಭೆಯಲ್ಲಿ ಹೊನ್ನಾಳಿ ತಾಲೂಕಿನ ಹೊಟ್ಯಾಪುರ ಹಿರೇಮಠದ ಶ್ರೀ ಗಿರಿ ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಪಾಂಡೋಮಟ್ಟಿ ವಿರಕ್ತ ಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಶಾಸಕರಾದ ಮಹಿಮಾ ಜೆ ಪಟೇಲ್, ವಡ್ನಾಳ್ ರಾಜಣ್ಣ, ಹೊದಿಗೆರೆ ರಮೇಶ್, ಯೋಗೀಶ್ ಭಾಗವಹಿಸಲಿದ್ದಾರೆ.