'ಬಿಎಸ್ವೈ ಸಾಧನೆ ಕೆಜೆಪಿಗೆ ವರ'
ದಾವಣಗೆರೆ: ಗ್ರಾಪಂನಿಂದ ಪಾಲಿಕೆವರೆಗೆ ಬಿ.ಎಸ್. ಯಡಿಯೂರಪ್ಪ ಅವದಿಯಲ್ಲಿ ನೀಡಿದ ವಿಶೇಷಾನುದಾನವನ್ನು ನೀಡಿದ್ದು ದೇಶಕ್ಕೆ ಮಾದರಿಯಾಗಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೆಜೆಪಿಗೆ ಇದು ವರವಾಗಿ ಪರಿಣಮಿಸಲಿದೆ ಎಂಬ ವಿಶ್ವಾಸವನ್ನು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಗೋಖಲೆ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಿದ್ದಾಗ ಗ್ರಾಪಂ, ತಾಪಂ, ಜಿಪಂ, ಪಪಂ, ಪುರಸಭೆ, ನಗರಸಭೆ, ಮಹಾ ನಗರ ಪಾಲಿಕೆ ಹೀಗೆ ಸ್ಥಳೀಯ ಸಂಸ್ಥೆಗಳಿಗೆ ವಿಶೇಷಾನುದಾನ ನೀಡುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಮುನ್ನುಡಿ ಬರೆದಿದ್ದು, ಮುಂಬರುವ ಚುನಾವಣೆಗೆ ಇವೆಲ್ಲಾ ಪೂರಕವಾಗಲಿವೆ ಎಂದರು.
ಕೆಜೆಪಿ ಅಧಿಕಾರಕ್ಕೆ: ಧಾರವಾಡ, ದಾವಣಗೆರೆ ಮಹಾ ನಗರ ಪಾಲಿಕೆಯಲ್ಲಿ ಕೆಜೆಪಿ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸ ನಮಗಿದೆ. ರಾಜ್ಯದ ಬಹುತೇಕ ಸ್ಥಳೀಯ ಸಂಸ್ಥೆಗಳನ್ನು ಕೆಜೆಪಿ ತನ್ನ ತೆಕ್ಕೆಗೆ ಪಡೆದುಕೊಳ್ಳಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕೆಜೆಪಿ ಸದಾ ಸಿದ್ಧವಿದೆ. ಆದರೆ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ಗಳೇ ಚುನಾವಣೆಗೆ ಸಿದ್ಧವಿಲ್ಲ. ಸದನದ ಸದಸ್ಯರೂ ವಿಧಾನಸಭೆಯ ಚುನಾವಣೆ ನಂತರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವಂತೆ ಒತ್ತಡ ಹೇರುವ ವ್ಯರ್ಥ ಪ್ರಯತ್ನ ನಡೆಸಿದ್ದಾರೆ ಎಂದು ಅವರು ಟೀಕಿಸಿದರು.
ಸಮಸ್ಯೆಗಳ ಸಮಸ್ಯೆ ಪರಿಹಾರ: ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ಅಂತಹ ಪಕ್ಷಗಳು ಸಿದ್ಧವಿಲ್ಲ ಎಂಬುದು ಸ್ಥಳೀಯ ಸಂಸ್ಥೆ ಚುನಾವಣೆಗೆ ವಿರೋಧಿಸುತ್ತಿರು ವುದರಿಂದಲೇ ಸ್ಪಷ್ಟವಾಗುತ್ತಿದೆ. ಸ್ಥಳೀಯ ಸರ್ಕಾರಗಳು ರಚನೆಯಾಗಿ, ಜನರ ಸಮಸ್ಯೆಗೆ ಸ್ಪಂದಿಸುವಂತಾಗಬೇಕು. ಯೋಗ್ಯರು ಜನ ಪ್ರತಿನಿಧಿಗಳಾಗಿ ಆಯ್ಕೆಯಾಗಬೇಕೆಂಬುದು ನಮ್ಮ ಪಕ್ಷದ ಧ್ಯೇಯ. ಹಾವೇರಿ ಸಮಾವೇಶದ ನಂತರ ಅನೇಕ ಪಕ್ಷಗಳಿಗೆ ಕೆಜೆಪಿ ಭಯ ಕಾಡುತ್ತಿದೆ. ಎಲ್ಲೆಡೆ ಎಲ್ಲಾ ವರ್ಗದ ಜನರು, ಪ್ರಮುಖವಾಗಿ ಮಹಿಳೆಯರು, ಯುವ ಜನಾಂಗದ ಬೆಂಬಲ ಸಿಗುತ್ತಿದೆ ಎಂದು ಅವರು ತಿಳಿಸಿದರು.
ಕೆಜೆಪಿಗೆ ಚಿಹ್ನೆ ಚಿಂತೆ ಇಲ್ಲ: ಕೆಜೆಪಿಗೆ ಚಿಹ್ನೆಯ ಚಿಂತೆ ಇಲ್ಲ. ಯಡಿಯೂರಪ್ಪ ಮಾಡಿರುವ ಅಭಿವೃದ್ಧಿ ಕಾರ್ಯ, ಜನಪರ ಯೋಜನೆಗಳೇ ನಮ್ಮ ಕೈ ಹಿಡಿಯಲಿದೆ. ಚುನಾವಣಾ ಆಯೋಗ ನಿಗದಿಪಡಿಸಿದ ಚಿಹ್ನೆಯನ್ನು ಸ್ಥಳೀಯ ಸಂಸ್ಥೆ, ವಿಧಾನಸಭೆ ಚುನಾವಣೆಗಳಿಗೆ ಒಂದೇ ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಲಿದ್ದೇವೆ. ರಾಜ್ಯದಲ್ಲಿ ನಮಗೆ ಬಿಜೆಪಿಗಿಂತಲೂ ಕಾಂಗ್ರೆಸ್ನಿಂದಲೇ ನೇರ ಸ್ಪರ್ಧೆ ಇದೆ. ಸಿಎಂ ಜಗದೀಶ ಶೆಟ್ಟರ್ ಮಂಡಿಸಿದ ಬಜೆಟ್ ನೋಡಿದರೆ, ಏಪ್ರಿಲ್ನಂತರ ನಾನಂತೂ ಮುಖ್ಯಮಂತ್ರಿ ಆಗಿರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ಅರಿತಂತಿದೆ ಎಂದು ಅವರು ಟೀಕಿಸಿದರು.
ಪಕ್ಷದ ಜಿಲ್ಲಾ ಸಂಚಾಲಕ ಬಿ.ಎಸ್. ಜಗದೀಶ, ಆವರಗೊಳ್ಳ ಬಿ.ಎಂ. ಷಣ್ಮುಖಯ್ಯ, ಕೆ. ಹೇಮಂತಕುಮಾರ, ಕಕ್ಕರಗೊಳ್ಳ ಕೆ.ಪಿ. ಕಲ್ಲಿಂಗಪ್ಪ, ಹರಿಹರ ಬಿ.ಕೆ. ಸೈಯದ್, ಮಲ್ಲಿಕಟ್ಟು ವೀರಭದ್ರ ಸ್ವಾಮಿ, ಸೈಯದ್ ಶಾಹೀನ್, ಡಿ. ಬಸವರಾಜ ಗುಬ್ಬಿ, ಸುರೇಂದ್ರಪ್ಪ ಮೇಷ್ಟ್ರು, ನಿಟುವಳ್ಳಿ ಬಸವರಾಜ ಮತ್ತಿತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.