ಕಾಂಗ್ರೆಸ್ ಜಯಭೇರಿ: ಮಲ್ಲಿಕಾರ್ಜುನ ವಿಶ್ವಾಸ
ಕ.ಪ್ರ.ವಾರ್ತೆ ದಾವಣಗೆರೆ ಮಾ.7
ದಾವಣಗೆರೆಯ 41 ವಾರ್ಡ್ಗಳಲ್ಲೂ ಜಯಭೇರಿ ಭಾರಿಸುವ ಮೂಲಕ ಕಾಂಗ್ರೆಸ್ ಪಕ್ಷ ಪಾಲಿಕೆಯಲ್ಲಿ ಆಡಳಿತಕ್ಕೆ ಬರಲಿದೆ ಎಂಬ ವಿಶ್ವಾಸವನ್ನು ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಸ್ಸೆಸ್ ಮಲ್ಲಿಕಾರ್ಜುನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ 26ನೇ ವಾರ್ಡ್ ಕೆ.ಟಿ.ಜೆ. ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ದುರಾಡಳಿತ, ಭ್ರಷ್ಟಾಚಾರದಿಂದ ಜನತೆ ಬೇಸತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಹಿಂದೆ ಮಾಡಿದ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ, ಇದೀಗ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಆಶೀರ್ವದಿಸಲಿದ್ದಾರೆ ಎಂದರು.
ಈಗಾಗಲೇ ದಾವಣಗೆರೆ ಪಾಲಿಕೆ ಸೇರಿದಂತೆ ಜಿಲ್ಲಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿಂದೆ ನಗರಸಭೆ ಇದ್ದಾಗ 35 ಸ್ಥಾನಕ್ಕೆ 31ಕ್ಕೂ ಹೆಚ್ಚು ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಗೆದ್ದಿತ್ತು. ಅದೇ ಫಲಿತಾಂಶ ಮತ್ತಷ್ಟು ಸುಧಾರಣೆಯೊಂದಿಗೆ ಪಾಲಿಕೆ ಚುನಾವಣೆಯಲ್ಲೂ ಪುನರಾವರ್ತನೆಯಾಗಲಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಅಲೆ: ಎಲ್ಲೆಡೆ ಕಾಂಗ್ರೆಸ್ ಪಕ್ಷದ ಪರ ಅಲೆ ಇದೆ. ಹೊಸ ಮತದಾರರಿಂದ ವಯೋವೃದ್ಧರವರೆಗೆ ಕಾಂಗ್ರೆಸ್ ಸಾಧನೆಗಳನ್ನು, ಜನಪರ ಕಳಕಳಿಯನ್ನು ಮೆಚ್ಚಿ, ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಈ ಚುನಾವಣೆ ಮೂಲಕ ಮತ್ತೆ ಕಾಂಗ್ರೆಸ್ ಪಕ್ಷವು ತನ್ನ ಹಳೆಯ ಲಯ ಕಂಡುಕೊಳ್ಳುವ ಮೂಲಕ ನಗರ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಕೈಗಾರಿಕೋದ್ಯಮಿ ಎಸ್ಸೆಸ್ ಗಣೇಶ್ ಸಹ ವಾರ್ಡ್ಗೆ ಭೇಟಿ ನೀಡಿದ್ದರು. ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದ್ದು, 26ನೇ ವಾರ್ಡ್ ಸೇರಿದಂತೆ ಎಲ್ಲಾ 41 ವಾರ್ಡ್ನಲ್ಲೂ ಅಭಿವೃದ್ಧಿ ಕಾರ್ಯ ಕೈಗೊಳ್ಳಲಿದೆ. ಯುವ ಉತ್ಸಾಹಿ ಯುವಕರೆ ಹೆಚ್ಚಿನ ಸಂಖ್ಯೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದು, ಉತ್ತಮ ಕೆಲಸ ಮಾಡುವ ಕಳಕಳಿ ಹೊಂದಿರುವ ಉತ್ಸಾಹಿಗಳಿಗೆ ಯುವಕರಿಗೆ ಜನತೆ ಆಶೀರ್ವದಿಸುವರೆಂದು ತಿಳಿಸಿದರು.
ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜ, ಕೆಪಿಸಿಸಿ ಎಸ್ಸಿ ಘಟಕದ ಸದಸ್ಯ ಸೋಮಲಾಪುರ ಹನುಮಂತಪ್ಪ, ಶ್ರೀನಿವಾಸ ಶಿವಗಂಗಾ, ಚೈತನ್ಯಕುಮಾರ ಮೇಸ್ತ್ರಿ, ಮಂಜುನಾಥ ರೊಳ್ಳಿ, ದಿನೇಶ, ರಂಗನಾಥ, ರಾಜು ರೇಡಿಯಂ, ಎನ್ಎಸ್ಯುಐ ರಮೇಶ, ಕಾರ್ತಿಕ್, ಜಯಪ್ರಕಾಶ ಗೌಡ ಸೇರಿದಂತೆ ಆನೇಕರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.