ಆಯುರ್ವೇದ ವೈದ್ಯ ಪದ್ಧತಿ ಸದ್ಭಳಕೆ ಮಾಡಿ
ಕ.ಪ್ರ ವಾರ್ತೆ, ದಾವಣಗೆರೆ, ಮಾ.8
ಭಾರತದ ಆದಿ ಕಾಲದ ಚಿಕಿತ್ಸಾ ಪದ್ಧತಿಗಳಾದ ಯೋಗ, ಯುನಾನಿ ಇತ್ಯಾದಿಗಳಲ್ಲಿ ಪಂಚಕರ್ಮ ಆಯುರ್ವೇದ ಪದ್ಧತಿಯೂ ಒಂದಾಗಿದೆ. ಈ ಚಿಕಿತ್ಸಾ ಪದ್ಧತಿಯನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ಆಯುರ್ವೇದ ವೈದ್ಯರ ಮೇಲಿದೆ ಎಂದು ಜಿಪಂ ಸಿಇಓ ಎ.ಬಿ. ಹೇಮಚಂದ್ರ ಹೇಳಿದರು.
ನಗರದ ಜಿಲ್ಲಾಸ್ಪತ್ರೆ ಆಯುಷ್ ವಿಭಾಗದಲ್ಲಿ ಶುಕ್ರವಾರ ರಾಜ್ಯ ವಲಯದ ಮಾಹಿತಿ, ಶಿಕ್ಷಣ, ಸಂಪರ್ಕ(ಐಇಸಿ) ಮತ್ತು ತರಬೇತಿ ಕಾರ್ಯಕ್ರಮ ಆರೋಗ್ಯ ಮೇಳದಲ್ಲಿ ಸಸ್ಯಸಿರಿ ಉದ್ಘಾಟಿಸಿ ಮಾತನಾಡಿ, ಜಗತ್ತು ಇಂದು ಆಯುರ್ವೇದದತ್ತ ಮುಖ ಮಾಡುತ್ತಿರುವಾಗ ಇಂತಹ ಪ್ರಾಚೀನ ಚಿಕಿತ್ಸಾ ಪದ್ಧತಿ ಬಗ್ಗೆ ನಾವೂ ಗಮನ ಹರಿಸಬೇಕು ಎಂದರು.
ಆಯುರ್ವೇದಕ್ಕೆ ಮಾರು: ಚೀನಾ, ನೇಪಾಳ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಜನತೆ ನಮ್ಮ ಆಯುರ್ವೇದ ವೈದ್ಯ ಪದ್ಧತಿ ಪ್ರತಿಫಲ ಪಡೆಯುತ್ತಿದ್ದು, ಅಡ್ಡ ಪರಿಣಾಮವಿಲ್ಲದ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಜಗತ್ತು ಮಾರು ಹೋಗುತ್ತಿದೆ. ಈ ಪದ್ಧತಿಯ ತವರಾದ ಭಾರತದಲ್ಲೇ ನಾವು ಇದನ್ನು ಮರೆಯುತ್ತಿರುವುದು ದುರಂತದ ಸಂಗತಿ ಎಂದು ವಿಷಾದಿಸಿದರು.
ಅತಿ ಸರಳ, ಅತ್ಯಂತ ಆರೋಗ್ಯ ಪೂರ್ಣ ಹಾಗೂ ಪರಿಣಾಮಕಾರಿ ವೈದ್ಯ ಪದ್ಧತಿಯಾದ ಆಯುರ್ವೇದದ ಮಹತ್ವ ಅರ್ಥ ಮಾಡಿಕೊಳ್ಳಬೇಕಾಗಿದೆ. ಈ ಅಪರೂಪದ ಚಿಕಿತ್ಸಾ ಪದ್ಧತಿ ಬಗ್ಗೆ ಜನರಿಗೆ ಅರಿವು ಮೂಡಿಸಬೇಕಿದೆ. ಗ್ರಾಮೀಣ ಮಟ್ಟದಿಂದ ನಗರ ಮಟ್ಟದವರೆಗೆ ಪ್ರತಿಯೊಬ್ಬರಿಗೂ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವ ಮೂಲಕ ಅದರ ಮಹತ್ವ ತಿಳಿಸಿಕೊಡಬೇಕಾಗಿದೆ ಎಂದು ಅವರು ಹೇಳಿದರು.
ಆಯುರ್ವೇದ ಒಂದು ಜೀವನದ ರೀತಿಯಾಗಬೇಕಿದೆ. ಮನಸ್ಸಿಗೆ ಬೇಕಾದ ಉಲ್ಲಾಸ, ದೈಹಿಕ ಸದೃಢತೆಗೆ ಅಗತ್ಯ ಚೈತನ್ಯ, ಬದುಕಲು ಬೇಕಾದ ಜೀವನೋತ್ಸಾಹ ತಂದು ಕೊಡುವ ಶಕ್ತಿ ಆಯುರ್ವೇದ ಪದ್ಧತಿ ಹೊಂದಿದೆ. ಆಯುಷ್ ಇಲಾಖೆಯಿಂದ ಇಂತಹ ಚಿಕಿತ್ಸಾ ಪದ್ಧತಿ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ರಾಜ್ಯ ವಲಯದ ಆಯುಷ್ನಿಂದ ಐಇಸಿ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಚಿಕಿತ್ಸಾ ಪದ್ಧತಿಗೆ ಇತಿಹಾಸ: ಆಯುರ್ವೇದ ವೈದ್ಯ ಪದ್ಧತಿ ಉಳಿಸಿ, ಬೆಳೆಸುವ ಹೊಣೆಯನ್ನು ಆಯುರ್ವೇದ ವೈದ್ಯರನ್ನು ನಿರ್ವಹಿಸಬೇಕು. ಇನ್ನೂ ಬೆಳಕಿಗೆ ಬಾರದ ಅನೇಕ ಚಿಕಿತ್ಸಾ ವಿಧಾನ, ಔಷಧಿ ಆಯುರ್ವೇದ ಪದ್ಧತಿಯಲ್ಲಿ ಹಿಂದೆ ಬಳಕೆಯಲ್ಲಿದ್ದವು. ಅವುಗಳ ಬಗ್ಗೆ ವ್ಯಾಪಕ ಸಂಶೋಧನೆಗಳಾಗಬೇಕು. ಜಗತ್ತಿಗೆ ಭಾರತದ ಕೊಡುಗೆಯಾದ ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಸುಮಾರು 5 ಸಾವಿರ ವರ್ಷಗಳ ಇತಿಹಾಸವಿದೆ ಎಂದು ಅವರು ತಿಳಿಸಿದರು.
ಸಮಾರಂಭ ಉದ್ಘಾಟಿಸಿದ ಜಿಲ್ಲಾಧಿಕಾರಿ ಸುಭಾಷ್ ಶಿವಪ್ಪ ಪಟ್ಟಣಶೆಟ್ಟಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಭಾರತದ ಪ್ರಾಚೀನ ಕಾಲದ ವೈದ್ಯ ಪದ್ಧತಿ ವಿಶ್ವಾದ್ಯಂತ ಮಹತ್ವ ಪಡೆಯುತ್ತಿದೆ. ಇಂತಹ ಮೇಳ, ಕಾರ್ಯಕ್ರಮವನ್ನು ಕೇವಲ ಜಿಲ್ಲಾ ಕೇಂದ್ರಕ್ಕೆ ಸೀಮಿತವಾಗದೆ ಗ್ರಾಮೀಣ, ಹೋಬಳಿ ಮಟ್ಟಕ್ಕೂ ತಲುಪಿಸಬೇಕು ಎಂದರು.
ಸಮಸ್ಯೆ ಪರಿಹಾರ: ಆಯುಷ್ ಚಿಕಿತ್ಸಾ ವಿಧಾನದ ಬಗ್ಗೆ ಜನರಲ್ಲಿ ವಿಶ್ವಾಸ ತುಂಬಬೇಕು. ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಹೊಂದಿಕೊಂಡ ಜನರಲ್ಲಿ ನಾನೂ ಒಬ್ಬ. ಪ್ರತಿಯೊಬ್ಬರೂ ನಮ್ಮ ದೇಸೀ ಔಷಧಿ ಪದ್ಧತಿಯ ಬಗ್ಗೆ ಅಭಿಮಾನ ಹೊಂದುವ ಮೂಲಕ ಇದರಿಂದ ನಮ್ಮ ದೈಹಿಕ ಸಮಸ್ಯೆ ಪರಿಹಾರಗೊಳ್ಳುತ್ತವೆ ಎಂಬ ನಂಬಿಕೆ, ವಿಶ್ವಾಸ ತೋರಬೇಕು ಎಂದರು.
ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ.ಟಿ. ಪರಶುರಾಮಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಿ.ಆರ್. ಸುಮಿತ್ರಾದೇವಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಯು. ಸಿದ್ದೇಶ, ಡಾ. ಸುರೇಶ ಬಿರಾದಾರ್, ಆಯುಷ್ ನೋಡಲ್ ಅಧಿಕಾರಿ ಡಾ.ಕೆ.ಎಂ. ಪ್ರಭುದೇವ, ಡಾ. ಶಂಕರಗೌಡ, ಡಾ. ವಿನಾಯಕರ ಅಂಬರಕರ್ ಇತರರು ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.