ಚಿಗಟೇರಿ ಆಸ್ಪತ್ರೆಯಿಂದ ರೋಗಿ ನಾಪತ್ತೆ
ಕ.ಪ್ರ ವಾರ್ತೆ, ಹೂವಿನಹಡಗಲಿ, ಮಾ. 8
ದಾವಣಗೆರೆಯ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಕರೆ ತರಲಾಗಿದ್ದ ರೋಗಿಯೊಬ್ಬ ಮಾ. 6ರಂದು ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೀರಾಕೂರ್ನಹಳ್ಳಿಯ 68 ಇಳಿ ವಯಸ್ಸಿನ ಬಾರಿಕ ಹಾಲನಗೌಡ ನಾಪತ್ತೆಯಾಗಿರುವ ರೋಗಿ.
ಹಾಲನಗೌಡ ಕಳೆದ 6 ತಿಂಗಳಿನಿಂದ ದಮ್ಮು, ನರದೌರ್ಬಲ್ಯದಿಂದ ಬಳಲುತ್ತಿದ್ದರು. ಈಗಾಗಲೇ ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಫಲಕಾರಿಯಾಗದ ಕಾರಣ ದಾವಣಗೆರೆ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ಮಾ. 5ರಂದು 72ನೇ ವಾರ್ಡಿನ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಿದ ಬಳಿಕ ಮೂರನೇ ಮಹಡಿಯ 205ನೇ ವಾರ್ಡ್ಗೆ ರವಾನೆ ಮಾಡಲಾಗಿತ್ತು.
ಆದರೆ, ತಡರಾತ್ರಿ ಮಾ. 6ರಂದು 12ಗಂಟೆ ವರೆಗೂ ಹಾಲನಗೌಡನ ಪತ್ನಿ ಜಯಮ್ಮ ತನ್ನ ಗಂಡನ ಹತ್ತಿರವೇ ಮಲಗಿಕೊಂಡಿದ್ದು, ರಾತ್ರಿ 1 ಗಂಟೆ ಸುಮಾರಿಗೆ ಪತ್ನಿ ಎದ್ದು ನೋಡಿದಾಗ ಗಂಡ ಹಾಲನಗೌಡ ಅಲ್ಲಿರಲಿಲ್ಲ.
ಈ ವಿಷಯವನ್ನು ಜಯಮ್ಮ ತನ್ನ ಮಗ ಚಂದ್ರಗೌಡ ಹಾಗೂ ಕುಟುಂಬದವರಿಗೆ ತಿಳಿಸಿದ ಕೂಡಲೇ ದಾವಣಗೆರೆ ಸುತ್ತಮುತ್ತ ಎಲ್ಲ ಕಡೆಗೂ ಹುಡುಕಾಟ ನಡೆಸಿದರೂ ಯಾವ ಪ್ರಯೋಜನವಾಗಲಿಲ್ಲ. ಈ ವಿಷಯ ತಿಳಿದ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ಸಿಬ್ಬಂದಿ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರೋಗಿಯ ಸಂಬಂಧಿಕರೂ ಈ ಕುರಿತು ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ರೋಗಿಯ ಚಹರೆ: ಹಾಲನಗೌಡ ತಂದೆ ಕೊಟ್ರಗೌಡ, 68 ವರ್ಷ, ಬಾರಿಕ ಜನಾಂಗದವನಾಗಿದ್ದು, ಸುಮಾರು 5.5 ಅಡಿ ಎತ್ತರ ಇದ್ದು, ಸಾಧಾರಣ ಮೈ ಕಟ್ಟು ಹೊಂದಿದ್ದಾನೆ. ತಲೆಯಲ್ಲಿ ಕಪ್ಪು-ಬಿಳಿ ಮಿಶ್ರಿತ ಕೂದಲಿವೆ. ತೊದಲುತ್ತಾ ಕನ್ನಡ ಭಾಷೆ ಮಾತನಾಡುತ್ತಾರೆ. ಹೋಗುವಾಗ ನೀಲಿ ಬಣ್ಣದ ಅಂಗಿ ಬಿಳಿ ಪಂಜೆ ಹಾಗೂ ಮಾಸಲು ಬಣ್ಣದ ಶಾಲು ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.