ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆಗೆ ಪ್ರಾಧಾನ್ಯತೆ ನೀಡಿ
ಕ.ಪ್ರ.ವಾರ್ತೆ,ಹರಪನಹಳ್ಳಿ, ಮಾ.8
ಗ್ರಾಮೀಣ ಭಾಗದಲ್ಲೂ ವಿದ್ಯಾರ್ಥಿಗಳು ಬುದ್ಧಿವಂತಿಕೆಯಲ್ಲಿ ಶ್ರೀಮಂತಿಕೆ ಮೆರೆದಿದ್ದಾರೆ ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿಗಳು ತಿಳಿಸಿದರು.
ತಾಲೂಕಿನ ಚಿಗಟೇರಿ ಕ್ರಾಸ್ ನಜೀರ್ ನಗರದಲ್ಲಿರುವ ನಿಸರ್ಗ ಪದವಿ ಪೂರ್ವ ಕಲೇಜು, ಶಾಂತಿನಿಕೇತನ ಪ್ರೌಢಶಾಲೆ, ನಿಸರ್ಗ ಐಟಿಐ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ಬೀಳ್ಕೊಡಿಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಜ್ಞಾನ ಸಂಪಾದನೆ: ಗ್ರಾಮೀಣ ಪ್ರದೇಶದಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಲ್ಲಿಯೂ ಬುದ್ಧಿವಂತರಿದ್ದಾರೆ. ಕ್ರಿಯಾಶೀಲತೆ, ಏಕಾಗ್ರತೆಯಿಂದ ಅಂದಿನ ಪಾಠವನ್ನು ಅಂದೇ ಗ್ರಹಿಸಿಕೊಂಡು ಉತ್ತಮ ಜ್ಞಾನ ಸಂಪಾದಿಸಿಕೊಳ್ಳಬೇಕು, ಪ್ರಸಾದ ಸಿದ್ಧಪಡಿಸುವ ಆಹಾರ ಧಾನ್ಯಗಳಾಗಬೇಕೇ ಹೊರತು, ಪ್ರಸಾದ ಕೆಡಿಸುವ ಹರಳು ಆಗಬಾರದು ಎಂದರು.
ಪದವಿ ಪೂರ್ವ ಹಾಗೂ ವೃತ್ತಿ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೆ.ಎನ್. ರಂಗನಾಥ ಮಾತನಾಡಿದರು. ಅಕ್ಷರ ಸೀಡ್ಸ್ ಮತ್ತು ಸರ್ವೀಸ್ ಸಂಸ್ಥೆ ನಿರ್ದೇಶಕ ಎನ್. ಕೊಟ್ರೇಶ್ ಮಾತನಾಡಿ, ಜಾಗತೀಕರಣದ ಸಂದರ್ಭದಲ್ಲಿ ವಿದ್ಯಾರ್ಥಿಗಳು ದೂರದರ್ಶನ ಹಾಗೂ ಮೊಬೈಲ್ ದಾಸರಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಮೊಬೈಲ್ ದಾಸರಾಗಿ ಪುಸ್ತಕಗಳಿಂದ ದೂರ ಉಳಿಯದೇ, ಪುಸ್ತಕಗಳನ್ನೂ ಪ್ರೀತಿಸಿ ಅಭ್ಯಾಸ ಮಾಡಿದರೆ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಸಾಧ್ಯ ಎಂದರು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿ ಪಡೆದ ಕಾಲೇಜಿನ ವಿದ್ಯಾರ್ಥಿನಿ ಸಿ. ನಿರಂಜನಿ, ಐಟಿಐ ಫಿಟ್ಟರ್ ವಿಭಾಗದಲ್ಲಿ ಪ್ರಭು, ಎಲೆಕ್ಟ್ರೀಷನ್ ವಿಭಾಗದಲ್ಲಿ ಎಚ್.ಎಂ. ನಾಗರಾಜ, ಪಿಯುಸಿ ಕನ್ನಡ ವಿಭಾಗದಲ್ಲಿ ಕನ್ನಡ ಕುವರ ಪ್ರಶಸ್ತಿಗೆ ಭಾಜನರಾದ ಪಿ. ವಿರೇಶ ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಣ ಸಂಸ್ಥೆ ಸಂಸ್ಥಾಪಕ ಗುಂಡಗತ್ತಿ ಕೊಟ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಶೃತಿರಾಜು, ಬಿಜೆಪಿ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ಎಚ್. ಶಿವಪ್ಪ, ವ್ಯವಸ್ಥಾಪಕ ರಾಜು ಎಲಿಗಾರ, ಸಂಸ್ಥೆಯ ಕಾರ್ಯದರ್ಶಿ ಕೊಟ್ರಮ್ಮ, ಪ್ರಾಚಾರ್ಯ ಆರ್.ಕೆ. ಕಲ್ಯಾಣಧರ್, ಬಿ. ಶಾಂತಕುಮಾರ್ ಉಪನ್ಯಾಸ ವೆಂಕಟೇಶ, ಎ. ಮಂಜುನಾಥ, ಸಹಶಿಕ್ಷಕ ಎಚ್. ಬಸವರಾಜ, ಧಾನೇಶ, ಎಚ್. ಪರಶುರಾಮ, ಗ್ರಾಪಂ ಅಧ್ಯಕ್ಷ ಅಂಡಿ ಹನುಮಂತಪ್ಪ, ಇತರರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.