ಮನೋ ಶಿಕ್ಷಣ ಕುರಿತು ಜನಜಾಗೃತಿ ಅಗತ್ಯ
ಕಪ್ರ ವಾರ್ತೆ, ದಾವಣಗೆರೆ, ಮಾ.16
ಸಾಮಾನ್ಯವಾಗಿ ಕಾಡುತ್ತಿರುವ 10 ಪ್ರಮುಖ ಕೊಲೆಗಡುಕ ಕಾಯಿಲೆಗಳಲ್ಲಿ ಖಿನ್ನತೆ, ಆತ್ಮಹತ್ಯೆಯೂ ಒಂದಾಗಿದ್ದು, ಜನ ಸಾಮಾನ್ಯರಿಗೆ ಮನೋ ಶಿಕ್ಷಣದ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಜನಾರಿವು ಮೂಡಿಸಲು ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆ ಅನೇಕ ಕಾರ್ಯಕ್ರಮ ರೂಪಿಸಿದೆ ಎಂದು ಕಾರ್ಯಪಡೆ ಅಧ್ಯಕ್ಷ ಡಾ. ಅಶೋಕ ಪೈ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜನ ಸಾಮಾನ್ಯರಿಗೆ ಮನೋಶಿಕ್ಷಣದ ಮೂಲಕ ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿ, ಸಮಾಜದ ಎಲ್ಲಾ ಸಾಮಾಜಿಕ ಸಮಸ್ಯೆ ದೂರ ಮಾಡಿ, ಕರ್ನಾಟಕವನ್ನು ಮಾದರಿ ರಾಜ್ಯವಾಗಿಸಲು ಹಲವಾರು ಯೋಜನೆ ರೂಪಿಸಿದ್ದೇವೆ ಎಂದರು.
ಮನೋವೈದ್ಯರ ಕೊರತೆ: ಮಾನಸಿಕ ಖಿನ್ನತೆ, ಆತ್ಮಹತ್ಯೆ, ಮಾದಕ ದ್ರವ್ಯಗಳ ವ್ಯಸನ, ಬಹು ಅಂಗಗಳ ವೈಕಲ್ಯತೆ ಸೇರಿದಂತೆ ಇನ್ನೂ ಹಲವಾರು ಕಾಯಿಲೆಗಳು ಜಗತ್ತಿನ ಪ್ರಮುಖ ಹತ್ತು ಕೊಲೆಗಡುಕ ಕಾಯಿಲೆಗಳಾಗಿ ಕಾಡುತ್ತಿವೆ. ಜಾಗತಿಕವಾಗಿ ಪ್ರತಿ 1.10 ಲಕ್ಷ ಜನಕ್ಕೆ ಒಬ್ಬ ಮನೋವೈದ್ಯ, ಓರ್ವ ಮನೋವಿಜ್ಞಾನ, ಒಬ್ಬ ಮನೋ ಸಾಮಾಜಿಕ ಕಾರ್ಯಕರ್ತ, ಓರ್ವ ಮನೋರೋಗಿ ಶುಶ್ರೂಷಕಿ ಅವಶ್ಯಕತೆ ಇದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಇವರ್ಯಾರೂ ಇಲ್ಲ ಎಂದು ಅವರು ಹೇಳಿದರು.
ಸಂಪನ್ಮೂಲ ಸಂಖ್ಯೆಯೂ ಕಡಿಮೆ: ನಮ್ಮ ದೇಶದಲ್ಲಿ ಲಭ್ಯ ಸಂಪನ್ಮೂಲ ಸಂಖ್ಯೆಯೂ ಅತ್ಯಂತ ಕಡಿಮೆ ಇದೆ. ಇಡೀ ದೇಶದಲ್ಲಿ 4 ಸಾವಿರ ಮನೋವೈದ್ಯರು, 2 ಸಾವಿರ ಮನೋ ಚಿಕಿತ್ಸಕರು, 2 ಸಾವಿರ ಮನೋ ಸಾಮಾಜಿಕ ಕಾರ್ಯಕರ್ತರಿದ್ದಾರೆ. 110 ಕೋಟಿ ಜನಸಂಖ್ಯೆಯ ದೇಶದಲ್ಲಿ 14 ಕೋಟಿ ಜನರಿಗೆ ಮಾತ್ರ ಮಾನಸಿಕ ಆರೋಗ್ಯ ಚಿಕಿತ್ಸೆಯ ಅವಶ್ಯಕತೆ ಇದೆ. 15 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಜಿಲ್ಲಾಸ್ಪತ್ರೆಗಳ ಪೈಕಿ ಬಹುತೇಕ ಆಸ್ಪತ್ರೆಗಳಲ್ಲಿ ಮಾನಸಿಕ ವೈದ್ಯರೇ ಇಲ್ಲ ಎಂದು ಅವರು ವಿಷಾದಿಸಿದರು.
ಮನೋವೈದ್ಯರ ತರಬೇತಿ: ರಾಜ್ಯದಲ್ಲಿ ಪ್ರತಿ ವರ್ಷ 40 ಮನೋವೈದ್ಯರನ್ನು ತರಬೇತಿಗೊಳಿಸಲಾಗುವುದು. ಈ ಪೈಕಿ ಶೇ.50 ವೈದ್ಯರು ವೈದ್ಯಕೀಯ ಪದವಿ, ಉನ್ನತ ಪದವಿ ನಂತರ ವಿದೇಶಗಳಿಗೆ ವಲಸೆ ಹೋಗುತ್ತಾರೆ. ಸದ್ಯ ಕರ್ನಾಟಕದಲ್ಲಿ ಮನೋ ವೈದ್ಯರ ಸಂಖ್ಯೆ 180 ಇದ್ದು, ಸಮಸ್ಯೆ ಸರಿಪಡಿಸುವ ಸಲುವಾಗಿ ಮಾನಸಿಕ ಆರೋಗ್ಯ ಕಾರ್ಯ ಪಡೆ ಸ್ಥಾಪಿಸಲಾಗಿದೆ. ಸಮಾಜದಲ್ಲಿ ಮಾನಸಿಕ ಸ್ವಾಸ್ಥ್ಯ ನಿರ್ಮಾಣಕ್ಕೆ ಪೂರಕವಾಗಿ ಮನೆಯಂಗಳದಲ್ಲಿ ಮಾನಸಿಕ ಸ್ವಾಸ್ಥ್ಯ ಶಿಬಿರ, ಜಿಲ್ಲಾಸ್ಪತ್ರೆಯಲ್ಲಿ ಮನೋ ವೈದ್ಯಕೀಯ ವಿಭಾಗ ಸ್ಥಾಪಿಸಲು ಒತ್ತು ನೀಡಲಾಗುವುದು ಎಂದು ಅವರು ತಿಳಿಸಿದರು.
18ರಂದು ಸಭೆ: ಬೆಂಗಳೂರಿನಲ್ಲಿ ಮಾ.18ರಂದು ನಡೆಯುವ ಮಾನಸಿಕ ಆರೋಗ್ಯ ಕಾರ್ಯಪಡೆ ಸಭೆಯಲ್ಲಿ ಇಂತಹ ಹಲವಾರು ವಿಚಾರ, ಯೋಜನೆಗಳ ಬಗ್ಗೆ ಚರ್ಚಿಸಿ, ಅವುಗಳನ್ನು ಅನುಷ್ಟಾನಕ್ಕೆ ತರಲು ಶಿಫಾರಸ್ಸು ಮಾಡಲಾಗುವುದು. ಅನೇಕ ಯೋಜನೆಗಳನ್ನು ರೂಪಿಸಿದ್ದು, ಮತ್ತಷ್ಟು ಯೋಜನೆ ಬಗ್ಗೆ ಚಿಂತನೆ ನಡೆಸಿದೆ. ಇವುಗಳನ್ನು ಶೀಘ್ರವೇ ಕಾರ್ಯ ರೂಪಕ್ಕೆ ತರಲು ಕಾರ್ಯಪಡೆ ಶಕ್ತಿಮೀರಿ ಶ್ರಮಿಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ಎಲ್. ನಾರಾಯಣಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ.ಆರ್. ಸುಮಿತ್ರಾದೇವಿ, ಜಿಲ್ಲಾ ಆಸ್ಪತ್ರೆ ಅಧೀಕ್ಷಕ ಡಾ. ಟಿ. ಪರಶುರಾಮಪ್ಪ ಇತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.