ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಸಿ: ಪ್ರಾಚಾರ್ಯ ಪ್ರೊ. ಡಿ. ಬಸವರಾಜ ಸಲಹೆ
ಕ.ಪ್ರ.ವಾರ್ತೆ, ದಾವಣಗೆರೆ, ಮಾ.16
ಮಕ್ಕಳಿಗೆ ಪಾಠ, ಪಠ್ಯ ಬೋಧಿಸುವುದಷ್ಟೇ ಮುಖ್ಯವಲ್ಲ, ಓದಿನ ಜೊತೆಗೆ ಸಂಶೋಧನಾ ಮನೋಭಾವವನ್ನು ವಿದ್ಯಾರ್ಥಿ- ವಿದ್ಯಾರ್ಥಿನಿಯರಲ್ಲಿ ಬಿತ್ತುವ ಕೆಲಸ ಗುರುಗಳಿಂದಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಪ್ರೊ. ಡಿ. ಬಸವರಾಜ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಶನಿವಾರ ಸಮಾಜಶಾಸ್ತ್ರ ವೇದಿಕೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯಿಂದ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿಗಳ ಸಂಶೋಧನಾ ಕಿರು ಪ್ರಬಂಧ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಓದಿನ ಜೊತೆಗೆ ಸಂಶೋಧನಾಸಕ್ತಿಯನ್ನು ವಿದ್ಯಾರ್ಥಿಗಳಲ್ಲಿ ತುಂಬುವ ಕೆಲಸವಾದಾಗ ಮಾತ್ರ ಶಿಕ್ಷಕರ ಶ್ರಮ ಸಾರ್ಥಕತೆ ಪಡೆಯುತ್ತದೆ ಎಂದರು.
ಸಂಶೋಧನೆಗೆ ಒತ್ತು: ಅರೆಕಾಲಿಕ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಸಂಶೋಧನೆ ಮಾಡಿ, ವಿದ್ಯಾರ್ಥಿಗಳು ಪ್ರಬಂಧವನ್ನು ರಚಿಸಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಕೇವಲ ಇಬ್ಬರು, ಮೂವರು ವಿದ್ಯಾರ್ಥಿಗಳು ಈ ರೀತಿ ಪ್ರಯತ್ನ, ಆಸಕ್ತಿ ತೋರಿದರಷ್ಟೇ ಸಾಲದು. ಪ್ರತಿಯೊಬ್ಬ ವಿದ್ಯಾರ್ಥಿ- ವಿದ್ಯಾರ್ಥಿನಿಯರಲ್ಲೂ ಸಂಶೋಧನೆ ಮಾಡುವ, ವಿಚಾರದ ಮೇಲೆ ಬೆಳಕು ಚೆಲ್ಲುವ, ವಾಸ್ತವ ಸಂಗತಿಯನ್ನು ಒರೆಗೆ ಹಚ್ಚುವ ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಂಶೋಧನಾ ಮನೋಭಾವ ಬೆಳೆದಲ್ಲಿ, ಮುಂದಿನ ದಿನಗಳಲ್ಲಿ ಡಾಕ್ಟರೇಟ್ ಸೇರಿದಂತೆ ಉನ್ನತ ಸ್ಥಾನಮಾನ ಗಳಿಸುವುದು ಕಷ್ಟಸಾಧ್ಯವೇನಲ್ಲ. ಮಕ್ಕಳು ತಮ್ಮ ಓದಿನ ಜೊತೆ ಸಂಶೋಧನೆ ಮಾಡುವುದರಿಂದಲೂ ಜ್ಞಾನಾರ್ಜನೆ ಜೊತೆ ಅನುಭವ ಹೆಚ್ಚಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಪ್ರಾಯೋಗಿಕ ಬೋಧನೆ: ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಲತಾ ಮಾತನಾಡಿ, ಬೋಧಕರು ಸೈದ್ಧಾಂತಿಕವಾಗಿ ಬೋಧಿಸುವುದನ್ನು ಬಿಟ್ಟು, ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ಬೋಧಿಸುವುದನ್ನು ಕರಗತ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವವನ್ನು ಬೆಳೆಸುವ ಜೊತೆಗೆ ಉತ್ತಮ ಭವಿಷ್ಯವನ್ನು ರೂಪಿಸುವ ಕೆಲಸವೂ ಆದ್ಯತೆಯ ಮೇಲಾದಾಗ ಮಾತ್ರ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು ಎಂದರು.
ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಆರ್. ತಿಪ್ಪಾರೆಡ್ಡಿ, ಡಾ. ಗಂಗಾಧರಯ್ಯ ಹಿರೇಮಠ, ಭೀಮಣ್ಣ ಸುಣಗಾರ, ಮಲ್ಲಿಕಾರ್ಜುನ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.