ಕ.ಪ್ರ. ವಾರ್ತೆ ಹರಿಹರ ಮಾ.29
ನಗರದ 18ನೇ ವಾರ್ಡ್‌ನಲ್ಲಿ ಒಳ ಚರಂಡಿ (ಯುಜಿಡಿ) ಯೋಜನೆಯಲ್ಲಿ ಕೊಳವೆ ಅಳಡಿಸಲು ತೆಗೆದ ಸುಮಾರು 12 ಅಡಿ ಆಳದ ಗುಂಡಿ ಕುಸಿದು ಕೂದಲೆಳೆಯ ಅಂತರದಲ್ಲಿ ನಾಲ್ಕು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ಸಂಜೆ ನಡೆದಿದೆ.
18ನೇ ವಾರ್ಡ್‌ನ ಎಚ್.ಪಿ. ಚಿನ್ನಪ್ಪ ಕಾಂಪೌಂಡ್‌ನಲ್ಲಿ ಒಳಚರಂಡಿಗಾಗಿ ಹಿಟಾಚಿಯಿಂದ ಗುಂಡಿ ತೆಗೆದಿದ್ದರು. ಗುರುವಾರ ಗುಂಡಿಯಲ್ಲಿ ನಾಲ್ವರು ಕಾರ್ಮಿಕರು ಪೈಪ್ ಜೋಡಿಸುತ್ತಿದ್ದರು. ಕಾಮಗಾರಿ ವೀಕ್ಷಿಸಿದ ಸ್ಥಳೀಯರು ಕಾಮಗಾರಿ ಕಳಪೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಮಿಕರು ಕಾಮಗಾರಿ ಸ್ಥಗಿತಗೊಳಿಸದ ಕಾರಣ ವಾರ್ಡ್ ಸದಸ್ಯ ಜಿ. ಸುರೇಶಗೌಡ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
ತಪ್ಪಿದ ಅನಾಹುತ: ಕಾಮಗಾರಿ ಸ್ಥಳಕ್ಕೆ ಆಗಮಿಸಿದ ಸುರೇಶಗೌಡ ಕಾರ್ಮಿಕರಿಗೆ ಕಾಮಗಾರಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಕಾರ್ಮಿಕರು ಗುಂಡಿಯಿಂದ ಮೇಲೆ ಬರುತ್ತಿದ್ದಂತೆ ಒಂದು ಬದಿ ಕುಸಿದು ಬಿತ್ತು. ಗುಂಡಿಯಿಂದ ಹೊರಬಂದು ಕ್ಷಣಾರ್ಧದಲ್ಲಿ ಪ್ರಾಣಾಪಾಯದಿಂದ ಪಾರಾದ ಕಾರ್ಮಿಕರು ನಿಟ್ಟುಸಿರು ಬಿಟ್ಟರು. ನಂತರ ತಡರಾತ್ರಿ ಒಳಚರಂಡಿ ಗುಂಡಿ ಸಂಪೂರ್ಣವಾಗಿ ಕುಸಿದಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 100ಕ್ಕೂ ಹೆಚ್ಚು ಮನೆಗಳಿದ್ದು, ಮನೆಯಿಂದ ಹೊರಕ್ಕೆ ಬಾರದಂತೆ ರಸ್ತೆ ಕುಸಿದಿದೆ. ಮನೆಗಳ ಕಾಂಪೌಂಡ್ ಬಿರುಕು ಕಾಣಿಸಿದೆ.
ಇಲ್ಲಿ ಹಾಕು ಮಣ್ಣು ಹಾಗೂ ಸುಣ್ಣದ ಬುರ್ಲಿಯ ಮಣ್ಣಿನ ಪದರವಿದೆ. ಇದು ತುಂಬ ಸಡಿಲವಾಗಿರುವ ಕಾರಣ ಕುಸಿದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.