ಕಾಂಗ್ರೆಸ್ ಹಗರಣ ಜನರಿಗೆ ಗೊತ್ತಿದೆ
ಕನ್ನಡಪ್ರಭ ವಾರ್ತೆ, ನರಗುಂದ, ಏ. 29
ಕೇಂದ್ರ ಸರ್ಕಾರದ ಹಗರಣಗಳು ಎಷ್ಟಿವೆ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲವೆಂದು ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡರ ಹೇಳಿದರು.
ಅವರು ಭಾನುವಾರ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ ಬಿಜೆಪಿ ಯಾವ ರೀತಿ ಅಭಿವೃದ್ಧಿ ಮಾಡಿದೆ ಎಂಬುವುದನ್ನು ದಾಖಲೆ ಮೂಲಕ ತೋರಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಹಿಂದಿನ ಅವಧಿಯಲ್ಲಿ ರಾಜ್ಯದಲ್ಲಿ ಯಾವ ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎನ್ನುವುದನ್ನು ಕಾಂಗ್ರೆಸ್ ನಾಯಕರಿಗೆ ಶಕ್ತಿ ಇದ್ದರೆ ದಾಖಲೆ ಮೂಲಕ ತೋರಿಸಲಿ ಎಂದು ಸವಾಲು ಹಾಕಿದರು.
ನಮ್ಮ ಪಕ್ಷದಲ್ಲಿ ಕೆಲವು ತಪ್ಪುಗಳನ್ನು ಮಾಡಿದವರು ಈಗ ಪಕ್ಷ ಬಿಟ್ಟು ಹೋಗಿದ್ದಾರೆ. ಬಿಜೆಪಿ ಈಗ ಪರಿಶುದ್ಧ ಪಕ್ಷ. ಮುಂದಿನ ದಿನದಲ್ಲಿ ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹವಿಲ್ಲ ಎಂದರು. ರೋಣ, ನರಗುಂದ, ಶಿರಹಟ್ಟಿ, ಗದಗ ಕ್ಷೇತ್ರಗಳ ಶಾಸಕರು ತಮ್ಮ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಜನತೆ ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ, ವಾಸು ಜೋಗಣ್ಣವರ, ಪ್ರಕಾಶ ಪಟ್ಟಣಶಟ್ಟಿ, ಶಂಕರಗೌಡ ಪಾಟೀಲ, ಎಂ.ಎಂ. ಖಾಜಿ, ಉಮೇಶ ಯಳ್ಳೂರ, ಅಜ್ಜು ಪಾಟೀಲ ಮುಂತಾದವರು ಇದ್ದರು.
ಎಚ್ಕೆ ಪರ ಮಹಿಳೆಯರ ಪ್ರಚಾರ
ಗದಗ: ನಗರದ 22 ಹಾಗೂ 27ನೇ ವಾರ್ಡ್ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ. ಪಾಟೀಲ ಪರವಾಗಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಬಿರುಸಿನ ಪ್ರಚಾರ ಕೈಗೊಂಡರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಬೋಳನವರು ಮಾತನಾಡಿ, ಕಾಂಗ್ರೆಸ್ ಬಡವರ, ದೀನ ದಲಿತರ ಪರವಾಗಿ ಹಲವಾರು ಯೋಜನೆ ರೂಪಿಸುವ ಪಕ್ಷ. ನಗರದಲ್ಲಿ ಶಾಶ್ವತ ಕುಡಿವ ನೀರಿನ ಯೋಜನೆ ಜಾರಿಗೊಳಿಸಲು ಪ್ರಯತ್ನಿಸುವ, ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸತತ ಪ್ರಯತ್ನಿಸುವ ಎಚ್.ಕೆ. ಪಾಟೀಲರಿಗೆ ತಮ್ಮ ಮತ ನೀಡಿ ಎಂದು ವಿನಂತಿಸಿದರು. ಜಿಲ್ಲಾ ಜಂಟಿ ಕಾರ್ಯದರ್ಶಿ ಜಾನಕಿ ಮಲ್ಲಾಪುರ, ಸುಮಾ ಗರಗ, ಶೋಭಾ ಅಡ್ಡೆ, ಪಾರ್ವತಿ ಕುಲಕರ್ಣಿ, ಮೌಲಾ ಮಲ್ಲಾಪುರ, ಮಲ್ಲವ್ವ ಮುಗಳಿ, ಶೇಖವ್ವ ಕನ್ನೂರ, ಜಂತ್ಲಿ, ನಿಸ್ಸಾಳ ಹಾಗೂ ವಾರ್ಡಿನ ಹಲವಾರು ಮಹಿಳೆಯರು ಮನೆ ಮನೆಗೆ ತೆರಳಿ ಮತ ಯಾಚಿಸಿದರು.
ಇಬ್ಬರು ಅಧಿಕಾರಿಗಳು ಅಮಾನತು
ಗದಗ: ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕೆ ಜಿಲ್ಲೆಯ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಎಸ್.ಟಿ. ಅಂಜನಕುಮಾರ ಸೋಮವಾರ ಆದೇಶ ಹೊರಡಿಸಿದ್ದಾರೆ. ದೇವರಾಜ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಎಂ.ಎಸ್. ಇಂಗಳಗಿ ಗದಗ ಭಾಗದ ಚುನಾವಣಾ ನೀತಿ ಸಂಹಿತೆ ಅನುಷ್ಠಾನ ಅಧಿಕಾರಿಯಾಗಿದ್ದರು. ಶಿರಹಟ್ಟಿಯ ಜಿಪಂ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಎಸ್.ಕೆ. ಉಗಲಾಟದ ಫೈಯಿಂಗ್ ಸ್ಕ್ವಾಡ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ಕರ್ತವ್ಯದಲ್ಲಿ ಲೋಪ ಮಾಡಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಅಭಿವೃದ್ಧಿ ನೋಡಿ ಮತ ನೀಡಿ
ರೋಣ: ಕಳಕಪ್ಪ ಬಂಡಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಅದೇ ಅವರ ಗೆಲವಿಗೆ ಶ್ರೀರಕ್ಷೆಯಾಗಲಿದೆ ಎಂದು ಸಂಯುಕ್ತಾ ಬಂಡಿ ಹೇಳಿದರು. ಅವರು ಶನಿವಾರ ರೋಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಳಕಪ್ಪ ಬಂಡಿ ಪರವಾಗಿ ಪಟ್ಟಣದ ಶಿವಪೇಟಿ, ಶಿವಾನಂದ ನಗರ, ಜಗ್ಗಲವರ ಓಣಿ, ತಳವಾರ ಓಣಿ ಸೇರಿದಂತೆ ವಿವಿಧ ಬಡಾವಣೆಗಳ ಮನೆ ಮನೆಗಳಿಗೆ ತೆರಳಿ ಮತ ಯಾಚಿಸಿದರು.
ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಶೋಭಾ ಗೋಯಲ್ ಮಾತನಾಡಿದರು. ತಾಪಂ ಅಧ್ಯಕ್ಷೆ ಲಲಿತಾ ಪೂಜಾರ, ಶರಣವ್ವ ಜಿಡ್ಡಿಬಾಗೀಲ, ಅಕ್ಕಮ್ಮ ಬಡಿಗೇರ, ಶಾಂತಾ ಯಡ್ರಾಮಿ, ಸುಸಿಲಾಬಾಯಿ ಕುಂಟೆಕಾರ, ವಿಜಯಲಕ್ಷ್ಮಿ ಕೊಟಗಿ, ಉಮಾದೇವಿ ಬಸನಗೌಡ, ರೋಶನಬಿ ಕುರಹಟ್ಟಿ, ಉಷಾ ಮಾಂಡ್ರೆ, ರೇಣುಕಾ ಗೌಡರ, ಗೀತಾ ಸವನೂರ, ಕವಿತಾ ಜಾಲಿಹಾಳ, ವಿಜಯಲಕ್ಷ್ಮಿ ಶೆಟ್ಟರ, ಅಕ್ಕಮ್ಮ ಜಾನಾಯಿ, ಕೀರ್ತಿ ಕೊಟಗಿ, ರಾಜೇಶ್ವರಿ ರಾಯಬಾಗಿ, ಸುನಂದ ರಾಯಬಾಗಿ, ರೋಶನಬೆಗಂ ಲೊದಿ, ಲಕ್ಷ್ಮಿ ಖೋಡೆ, ಅಶೋಕ ನವಲಗುಂದ, ಮುತ್ತಣ್ಣ ಲಿಂಗನಗೌಡ್ರ, ಶಿವನಾಂದ ಜಿಡ್ಡಿಬಾಗೀಲ, ಅರ್ಜುನ ಕೊಪ್ಪಳ, ವೀರೇಶ ದೊಡ್ಡಣ್ಣವರ, ಬಸನಗೌಡ ಪಾಟೀಲ, ಶಿವಾನಂದ ಮಾಮನಿ ಇದ್ದರು.
ಮತದಾನ ಪವಿತ್ರ ಕಾರ್ಯ
ಮತದಾನ ಅತ್ಯಂತ ಪವಿತ್ರ ಕಾರ್ಯ. ದಾನ ನೀಡುವಾಗ ನಾವು ಯಾವುದೇ ಫಲಾಪೇಕ್ಷೆ ಇಲ್ಲದೆ ದಾನ ಮಾಡುವಂತೆ ಮತದಾನವನ್ನೂ ಮಾಡಬೇಕು. ಯಾವುದೇ ಹಣ, ಹೆಂಡ, ಮಾಂಸದ ಆಸೆಗೆ ನಮ್ಮತನವನ್ನು ಎಂದೂ ಮಾರಿಕೊಳ್ಳಬಾರದು. ಮತ ಮಾರಿಕೊಳ್ಳುವುದು ದೇಶದ್ರೋಹಕ್ಕೆ ಸಮನಾದ ಕಾರ್ಯವಾಗಿದೆ. ಯೋಗ್ಯ ವ್ಯಕ್ತಿಗೆ ನಿಮ್ಮ ಮತ ನೀಡಿ ದೇಶವನ್ನು ಕಟ್ಟುವ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ನಾವು ಮತ ಹಾಕಿ ಆರಿಸಿ ಕಳಿಸಿರುವ ವ್ಯಕ್ತಿ ನಮ್ಮ ಆಳಾಗಿರಬೇಕು. ಆದರೆ, ನಾವು ಅವನ ಆಳಾಗುವ ವ್ಯಕ್ತಿಯನ್ನು ಆರಿಸಿ ಕಳಿಸಬಾರದು. ಬೇರೆಯವರು ನೀಡುವ ಬಟ್ಟೆ ಇತರೆ ವಸ್ತುಗಳನ್ನು ಬಳಸಿ ನಾವು ಬೆತ್ತಲಾಗಿರುವುದಕ್ಕಿಂತ, ಬೆತ್ತಲೆಯಾಗಿದ್ದರೂ ಚಿಂತೆಯಿಲ್ಲ. ನಮ್ಮತನವನ್ನು ಬೆತ್ತಲೆಯಾಗಿಸಿಕೊಳ್ಳಬಾರದು. ಶಿಕ್ಷಣವಂತ, ಸೌಜನ್ಯವಂತ, ಗರ್ವರಹಿತ, ಸ್ವಜನ ಪಕ್ಷಪಾತಿಯಾಗಿರದ. ಜಾತಿ ಮತ್ತು ದರ್ಪ ರಹಿತ, ಸರ್ವರ ಹಿತವನ್ನು ಬಯಸುವ ವ್ಯಕ್ತಿಯನ್ನು ನಮ್ಮನ್ನು ಆಳುವ ವ್ಯಕ್ತಿಯನ್ನಾಗಿಸಿಕೊಳ್ಳಬೇಕು.
ದಿಂಗಾಲೇಶ್ವರ ಶ್ರೀ, ಬಾಲೆಹೊಸೂರು, ಗದಗ
ಉಚಿತ ಬೇಸಿಗೆ ಶಿಬಿರ
ಗದಗ: ಜಿಲ್ಲೆಯ 5ರಿಂದ 6 ವರ್ಷದೊಳಗಿನ ಮಕ್ಕಳಿಗೆ ಯೋಗ, ರಂಗೋಲಿ, ಸಮೂಹ ಗೀತೆ, ಸಮೂಹ ನೃತ್ಯ, ರಂಗ ತರಬೇತಿ, ಚಿತ್ರಕಲೆ ಚಟುವಟಿಕೆಯ ಉಚಿತ ಬೇಸಿಗೆ ಶಿಬಿರವನ್ನು ಮೇ 5ರಿಂದ 22ರ ವರೆಗೆ ಏರ್ಪಡಿಸಿದ್ದು, ಭಾಗವಹಿಸಲು ಇಚ್ಛಿಸುವ ಮಕ್ಕಳು ಬಾಲಕರ ಬಾಲಮಂದಿರ ಹೆಲ್ತ್ ಕ್ಯಾಂಪ್, ಬೆಟಗೇರಿ-ಗದಗ ಇಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಮಾಹಿತಿಗಾಗಿ ದೂ. 08372-246344, 220711 ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮತ ಮಾರಿಕೊಳ್ಳದಿರಿ
ರಾಜಕೀಯ ಪಕ್ಷಗಳು ನೀಡುವ ಆಸೆ, ಆಮಿಷಗಳಿಗೆ ಬಲಿಯಾಗದೇ ರಾಜ್ಯ, ದೇಶವನ್ನು ಮತ್ತು ನಮ್ಮನ್ನು ರಕ್ಷಣೆ ಮಾಡುವ ವ್ಯಕ್ತಿಗೆ ಮತ ನೀಡಬೇಕು. ಮತದಾನ ಮಾಡದೆ ಇರುವುದು ಕೂಡ ರಾಜ ದ್ರೋಹದಷ್ಟೇ ಗಂಭೀರ ಕಾರ್ಯ. ನಿಜವಾದ ಅರ್ಥದಲ್ಲಿ ಮತದಾನವೆಂದರೆ ನಮ್ಮನ್ನು ನಾವು ಆಳುವ ಸಂವಿಧಾನ ಬದ್ಧ ವ್ಯಕ್ತಿಯ ಆಯ್ಕೆ. ಈ ಆಯ್ಕೆಯು ನಿಜವಾಗಿ ನ್ಯಾಯ ಸಮ್ಮತವಾಗಿರುವಂತೆ ನೋಡಿಕೊಳ್ಳಬೇಕಾಗಿದ್ದು ಭಾರತೀಯರೆಲ್ಲರ ಕರ್ತವ್ಯವಾಗಿದೆ. ನಮ್ಮ ಮತವು ಶುದ್ಧವಾಗಿರುವಂತೆ ನಾವು ಆಯ್ಕೆ ಮಾಡುವ ವ್ಯಕ್ತಿಯು ಶುದ್ಧವಾಗಿರುವಂತೆ ನೋಡಿಕೊಳ್ಳಬೇಕಾಗಿದೆ. ನಮ್ಮ ಸಂವಿಧಾನ ಬದ್ಧ ಹಕ್ಕನ್ನು ಸದುಪಯೋಗ ಮಾಡಿಕೊಳ್ಳುವ ಸುವರ್ಣ ಅವಕಾಶವನ್ನು ಕಳೆದುಕೊಂಡು ಮೂರ್ಖರನ್ನು ಆಯ್ಕೆ ಮಾಡಿದಲ್ಲಿ ನಾವು ಸದಾ ಮೂರ್ಖರಾಗಬೇಕಾಗುತ್ತದೆ. ಉತ್ತಮ ಗುಣವುಳ್ಳ, ಸದಾಚಾರಿಯಾದ, ಜನರ ಹಿತ ಕಾಯುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು.
ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು ಮುಕ್ತಿಮಂದಿರ, ಗದಗ
ಗುರಪ್ಪ ಲಮಾಣಿ ಮತಯಾಚನೆ
ಲಕ್ಷ್ಮೇಶ್ವರ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಜೆಡಿಎಸ್ ಕಡೆಗೆ ಒಲವು ತೋರಿದ್ದು, ಜೆಡಿಎಸ್ ಅಧಿಕಾರಕ್ಕೆ ಬರಲಿದೆ ಎಂದು ಶಿರಹಟ್ಟಿ ವಿಧಾನಸಭಾ ಮೀಸಲು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗುರಪ್ಪ ಲಮಾಣಿ ವಿಶ್ವಾಸ ವ್ಯಕ್ತಪಡಿಸಿದರು. ಈಚೆಗೆ ಅವರು ಪಟ್ಟಣದ ಪ್ರಮುಖ ಪ್ರದೇಶಗಳಲ್ಲಿ ತಮ್ಮ ಅನೇಕ ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಸೇರಿ ಮತಯಾಚಿಸಿದರು. ಈ ಬಾರಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಅಪಾರ ಬೆಂಬಲ ವ್ಯಕ್ತವಾಗುತ್ತಿದ್ದು, ಜನರ ಆಶೀರ್ವಾದಿಂದ ಗೆಲ್ಲುವ ವಿಶ್ವಾಸ ಹೊಂದಿದ್ದೇವೆ ಎಂದರು. ತಾಲೂಕು ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ, ಶಿವಯೋಗಿ ಹಮ್ಮಗಿ, ಶಿವು ಲಮಾಣಿ, ಚಾಂದಸಾಬ ಮುಳಗುಂದ, ಅಕ್ಬರಸಾಬ್ ಯಾದಗಿರಿ, ಶಂಕ್ರಣ್ಣ ಹೊನ್ನಳ್ಳಿ, ಮಹಾದೇವಪ್ಪ ಹೊಂಬಳ, ಗುರಪ್ಪ ಶಿರೋಳ, ಮಾರುತಿ ಹೊಸಮನಿ, ಬಸಣ್ಣ ಹರ್ತಿ ಪಾಲ್ಗೊಂಡಿದ್ದರು.