ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗೂಂಡಾಗಿರಿ ಮುಕ್ತವಾಗಿಸಲು ಬಿಜೆಪಿ ಬೆಂಬಲಿಸಿ

Srinivasa Murthy VN
Updated On : 30 Apr 2013, 11:42 am

ಕನ್ನಡಪ್ರಭ ವಾರ್ತೆ, ಗದಗ, ಏ. 29
ಗದಗ ಶಾಂತಿ ಪ್ರೀಯ ಜಿಲ್ಲೆಯಾಗಿದ್ದು, ಜಿಲ್ಲೆಯನ್ನು ಗೂಂಡಾಗಿರಿ ಮುಕ್ತವಾಗಿಸಲು ಮತ್ತೆ ಬಿಜೆಪಿ ಬೆಂಬಲಿಸಿರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಹೇಳಿಛದರು.
ಅವರು ಸೋಮವಾರ ನಗರದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದರು.
ನಾನು ಗದುಗಿಗೆ ಬರುವ ಪೂರ್ವದಲ್ಲಿ ನಮ್ಮ ಪಕ್ಷದ ಕಾರ್ಯಕರ್ತರಿಂದ ಹಾಗೂ ಮಾಧ್ಯಮಗಳಲ್ಲಿ ಕೇಳಿದ್ದೇನೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುವ ಪೂರ್ವದಲ್ಲಿಯೇ ತಮ್ಮ ಗೂಂಡಾಗಿರಿ ಪ್ರವೃತ್ತಿ ಪ್ರಾರಂಭಿಸಿದ್ದಾರೆ. ಈಚೆಗೆ ಜೆಡಿಎಸ್ ಅಭ್ಯರ್ಥಿ ಪ್ರಚಾರಕ್ಕೆ ಹೋದಾಗ ಅಡ್ಡಿಪಡಿಸಿದ್ದು, ಬಿಎಸ್‌ಆರ್ ಅಭ್ಯರ್ಥಿಯ ಪ್ರಚಾರಕ್ಕೆ ಅವಕಾಶ ನೀಡದೇ ಇರುವುದು, ಅವರು ರಾತ್ರಿ ವೇಳೆಯಲ್ಲಿ ಪ್ರಚಾರ ಮಾಡುತ್ತಿದ್ದಾಗ ಅವರ ಹಿಂಬಾಲಕರ ಮೂಲಕ ಬೆದರಿಕೆ ಒಡ್ಡುತ್ತಿರುವುದು ಅವರ ಗೂಂಡಾ ಸಂಸ್ಕೃತಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಹಕ್ಕಿದೆ. ಅವರ ಹಕ್ಕನ್ನು ಮೊಟಕು ಗೊಳಿಸಲು ಇವರ್ಯಾರು? ದೌರ್ಜನ್ಯದ ಮೂಲಕ ಮತ ಪಡೆಯುತ್ತೇವೆ ಎನ್ನುವ ಭ್ರಮಾಲೋಕದಲ್ಲಿದ್ದರೆ ಅದನ್ನು ಮರೆತು ಬಿಡಿ. ಜನತೆ ಮತ್ತೊಮ್ಮೆ ನಿಮ್ಮನ್ನು ಸಂಪೂರ್ಣ ತಿರಸ್ಕರಿಸಲಿದ್ದಾರೆ. ಬೇರೆ ಪಕ್ಷದ ಅಭ್ಯರ್ಥಿಗಳ ಪ್ರಚಾರಕ್ಕೂ ನೀವು ಅಡ್ಡಿ ಪಡಿಸುತ್ತೀರಿ ಎಂದಾದಲ್ಲಿ ನೀವು ಅಧಿಕಾರಕ್ಕೆ ಬಂದಲ್ಲಿ ಅಮಾಯಕರ ಮೇಲೆ ಅದೆಷ್ಟು ದೌರ್ಜನ್ಯ ಮಾಡುತ್ತೀರಿ ಎನ್ನುವುದು ಈಗಲೇ ಸ್ಪಷ್ಟವಾಗುತ್ತದೆ. ಅದಕ್ಕಾಗಿ ನಾನು ಗದುಗಿನ ಜನತೆಯನ್ನು ಕೈ ಮುಗಿದು ಬೇಡುವುದೇನೆಂದರೆ, ಗೂಂಡಾಗಿರಿ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಬಿಜೆಪಿ ಬೆಂಬಲಿಸಿರಿ ಎಂದರು. ಈ ಸಂದರ್ಭದಲ್ಲಿ ಸಿ.ಸಿ. ಪಾಟೀಲ ಪತ್ನಿ ಶೋಭಾ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಕಳಕಪ್ಪ ಬಂಡಿ, ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ಹಾಗೂ ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಮತದಾರರನ್ನು ಉದ್ದೇಶಿಸಿ ಮಾತನಾಡಿದರು.  
ಎಚ್ಕೆ ಟಾರ್ಗೆಟ್: ನಾನು ಮಾಜಿ ಸಚಿವ ಎಚ್.ಕೆ. ಪಾಟೀಲರಿಗೆ ನೇರವಾಗಿ ಪ್ರಶ್ನಿಸುತ್ತೇನೆ. ಗದಗ ಕ್ಷೇತ್ರವನ್ನು ನೀವು ಇಷ್ಟೊಂದು ವರ್ಷಗಳ ಕಾಲ ಆಳಿದ್ದೀರಿ, ಗದುಗಿಗೆ ಶಾಶ್ವತವಾದ ಯಾವುದೇ ಒಂದು ಕೊಡುಗೆಯನ್ನು ನೀಡಿದ್ದೀರಾ? ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಿಮ್ಮಿಂದ ಸಾಧ್ಯವಾಗಿಲ್ಲವೆಂದು ಟೀಕಿಸಿದ ಅವರು, ಜಿಲ್ಲೆಯ ಜನತೆಗೆ ಹುಲಕೋಟಿ ಮಾದರಿ ಆಡಳಿತ ಬೇಕಾಗಿಲ್ಲ. ಭಾರತೀಯ ಸಂಸ್ಕೃತಿಯ ಆಡಳಿತ ಬೇಕಾಗಿದೆ ಎಂದು ಹೇಳಿದರು.
ಕಾಂಗ್ರೆಸ್‌ಗೆ ಎರಡುವರೆ ನಾಯಕತ್ವ:
ರಾಜ್ಯ ಬಿಜೆಪಿ ಬಗ್ಗೆ ಕಾಂಗ್ರೆಸ್ ವರಿಷ್ಠರು ಟೀಕಿಸುತ್ತಿದ್ದು, ಇನ್ನೊಬ್ಬರನ್ನು ಟೀಕಿಸುವ ಮೊದಲು ನಿಮ್ಮನ್ನು ನೀವು ಗಮನಿಸಿಕೊಳ್ಳಬೇಕು. ನೀವು ಎರಡುವರೆ ಸಂಸ್ಕೃತಿ ನಾಯಕತ್ವ ಹೊಂದಿದ್ದೀರಿ. ಒಂದು ಸೋನಿಯಾ, ಇನ್ನೊಂದು ಮನಮೋಹನ್‌ಸಿಂಗ್ ಇನ್ನರ್ಧ ರಾಹುಲ್‌ಗಾಂಧಿ ಎಂದು ಟೀಕಿಸಿದ ಅವರು, ತಮ್ಮ ಭಾಷಣದುದ್ದಕ್ಕೂ ಕೇಂದ್ರ ಸರ್ಕಾರದ ಭ್ರಷ್ಟಾಚಾರ, ಬೆಲೆ ಏರಿಕೆಯ ಬಗ್ಗೆ ಟೀಕಿಸಿದರು.

ವಿಶೇಷ ಮನವಿ
ಬಿಜೆಪಿ ಪ್ರಭಾವಿ ನಾಯಕರೆಂದೇ ಗುರುತಿಸಿಕೊಂಡಿದ್ದ ಸಿ.ಸಿ. ಪಾಟೀಲ ಆಕಸ್ಮಿಕ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು, ಅವರ ಪರವಾಗಿ ನಾನು ನರಗುಂದ ಕ್ಷೇತ್ರದ ಮತದಾರರಲ್ಲಿ ವಿನಂತಿ ಮಾಡುತ್ತೇನೆ. ಸಿ.ಸಿ. ಪಾಟೀಲ ಅವರನ್ನು ಗೆಲ್ಲಿಸಿ ತರುವ ಜವಾಬ್ದಾರಿ ಈಗ ನಮ್ಮೆಲ್ಲರ ಮೇಲಿದೆ. ಅವರನ್ನು ಗೆಲ್ಲಿಸುವವರೆಗೂ ನಾವೆಲ್ಲ ಕಾರ್ಯಕರ್ತರೂ ನಿದ್ರಿಸುವುದಿಲ್ಲ ಎಂದು ಪ್ರಮಾಣ ಮಾಡೋಣ ಎಂದು ವೇದಿಕೆಯ ಮೂಲಕ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿದ್ದು ವಿಶೇಷವಾಗಿತ್ತು.

ಕಾಂಗ್ರೆಸ್‌ಗೆ ಕ್ಯಾಪ್ಟನ್ ಇಲ್ಲ
ಬಿಜೆಪಿ ಜಗದೀಶ ಶೆಟ್ಟರ್ ಕ್ಯಾಪ್ಟನ್‌ಶಿಪ್‌ನಲ್ಲಿ ಚುನಾವಣೆ ಎದುರಿಸುತ್ತಿದೆ. ಆದರೆ, ಕಾಂಗ್ರೆಸ್ ಟಾಸ್ ಮಾಡಲು ನಾಯಕರೇ ಇಲ್ಲ. 11 ಜನ ಆಟಗಾರರು ಹಾಗೂ ಸ್ಟೇಡಿಯಂನಲ್ಲಿ ಕುಳಿತ ಎಲ್ಲರೂ ಕ್ಯಾಪ್ಟನ್ ಎಂದು ಹೇಳಿಕೊಂಡು ಕಣಕ್ಕೆ ಬರುತ್ತಿದ್ದಾರೆ. ಇವರನ್ನೆಲ್ಲ ಬೋಲ್ಡ್ ಮಾಡಲು ಬಿಜೆಪಿ ಬೌಲರ್‌ಗಳು ಸನ್ನದ್ಧರಾಗಿದ್ದಾರೆಂದು ಕಾಂಗ್ರೆಸ್‌ನ ನಾಯಕತ್ವದ ಕುರಿತು ಕಟುವಾಗಿ ಟೀಕಿಸಿದರು.

ಆಡ್ವಾಣಿ ಗೈರು

ಸೋಮವಾರ ಸಂಜೆ ಗದುಗಿಗೆ ಆಗಮಿಸಬೇಕಾಗಿದ್ದ ಬಿಜೆಪಿ ರಾಷ್ಟ್ರೀಯ ನಾಯಕ ಎಲ್.ಕೆ. ಆಡ್ವಾಣಿ ಸಮಯದ ಅಭಾವದ ಹಿನ್ನೆಲೆಯಲ್ಲಿ ಬರಲೇ ಇಲ್ಲ. ಹಾಗಾಗಿ ನೆರದಿದ್ದ ಸಾವಿರಾರು ಬಿಜೆಪಿ ಕಾರ್ಯಕರ್ತರಿಗೆ ತೀವ್ರ ಬೇಸರ ಉಂಟಾಗಿ, ನಾಯಕರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಲೇ ಮನೆಗೆ ತೆರಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement