ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಜೆಪಿ ಸರ್ಕಾರ ರೈತರ ಅಭಿವೃದ್ಧಿಗೆ ಶ್ರಮಿಸಿದೆ

Srinivasa Murthy VN
Updated On : 30 Apr 2013, 11:42 am

ಕನ್ನಡಪ್ರಭ ವಾರ್ತೆ, ನರಗುಂದ, ಏ. 29
ರಾಜ್ಯದಲ್ಲಿ 5 ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರವು ರೈತರಿಗೆ ಹಲವು ಯೋಜನೆಗಳನ್ನು ನೀಡುವ ಮೂಲಕ ರೈತರ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಸೋಮವಾರ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಚುನಾವಣೆಯಲ್ಲಿ ವಿರೋಧ ಪಕ್ಷಗಳು ಆಡಳಿತ ಪಕ್ಷದ ವಿರುದ್ಧ ಆರೋಪ ಮಾಡುವುದು ಸಹಜ. ಆದರೆ, ಮತದಾರ ಬಾಂಧವರು ಮತದಾನ ಮಾಡುವ ಪೂರ್ವದಲ್ಲಿ ಈ ಆರೋಪ ಮಾಡುವವರು ಅಧಿಕಾರದಲ್ಲಿದ್ದಾಗ ಏನು ಅಭಿವೃದ್ಧಿ ಮಾಡಿದ್ದಾರೆ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಏನು ಅಭಿವೃದ್ಧಿ ಮಾಡಲಾಗಿದೆ ಎಂದು ಅರಿಕೆ ಮಾಡಿಕೊಳ್ಳಿ. ನರಗುಂದ ಭಾಗದ ಮಲಪ್ರಭಾ ಕಾಲುವೆಯು 30 ವರ್ಷಗಳಿಂದ ಯಾವುದೇ ದುರಸ್ತಿ ಕೈಗೊಳ್ಳದೇ ಕಾಲುವೆಯ ಸ್ಥಿತಿ ಏನಾಗಿತ್ತು ಎಂಬುದು ಈ ಭಾಗದ ರೈತರಿಗೆ ತಿಳಿದ ವಿಚಾರ. ಬಿಜೆಪಿ ಸರ್ಕಾರದ ಅಧಿಕಾರ ಅವಧಿಯಲ್ಲಿ ಶಾಸಕ ಸಿ.ಸಿ. ಪಾಟೀಲ, ನವಲಗುಂದ ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಸವದತ್ತಿ ಶಾಸಕ ಆನಂದ ಮಾಮನಿಯವರು ನಾವು ಸೇರಿ ಈ ಮಲಪ್ರಭಾ ಕಾಲುವೆಗಳಿಗೆ ಒಂದು ಹೊಸ ರೂಪ ತರಬೇಕೆಂದು ರು. 330 ಕೋಟಿ ವೆಚ್ಚದಲ್ಲಿ ನವೀಕರಣಗೊಳಿಸಿ ಸರಾಗವಾಗಿ ರೈತರ ಜಮೀನುಗಳಿಗೆ ನೀರು ತಲುಪಿಸಲು ಅನುಕೂಲ ಮಾಡಿದ್ದೇವೆ.
ರೈತರ ಏಳ್ಗೆಗಾಗಿ ಬಿಜೆಪಿ ಸದಾ ಸಿದ್ಧವಾಗಿದ್ದು, ರೈತರ ಏಳ್ಗೆಗಾಗಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಮತದಾರರು ಬಿಜೆಪಿ ಬೆಂಬಲಿಸಬೇಕು. ಈ ಕ್ಷೇತ್ರದ ಶಾಸಕರು ಗುಂಡೇಟಿನಿಂದ ಗಾಯಗೊಂಡು ಬೆಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಕ್ಷೇತ್ರದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಪಾಟೀಲರ ಅನುಪಸ್ಥಿತಿಯಲ್ಲಿಯೂ ಅವರ ಗೆಲವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಯೋಜನೆ ಬಗ್ಗೆ ಮಾತನಾಡದ ಸಚಿವರು: ಈ ಹಿಂದೆ ನರಗುಂದ ಭಾಗದಲ್ಲಿ ಬಸವರಾಜ ಬೊಮ್ಮಾಯಿ ಬೃಹತ್ ಪಾದಯಾತ್ರೆ, ರೈತರ ಬೃಹತ್ ಸಭೆಯನ್ನು ಹಮ್ಮಿಕೊಂಡು, ಕಳಸಾ ಬಂಡೂರಿ ಯೋಜನೆಯನ್ನು ನಮ್ಮ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಂದಿನ ಸಿಎಂ ಧರ್ಮಸಿಂಗ್‌ಗೆ ರಕ್ತದಲ್ಲಿ ಪತ್ರ ಬರೆದಿದ್ದರು. ಬಳಿಕ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬಂದು 5 ವರ್ಷ ಗತಿಸಿದರೂ ಈ ಯೋಜನೆ ಪೂರ್ಣಗೊಂಡಿಲ್ಲ. ಆದರೆ, ಯೋಜನೆಯ ಕುರಿತು ಚಕಾರವೆತ್ತದೇ ಕೇವಲ ಬಿಜೆಪಿ ಕೈಗೊಂಡ ಅಭಿವೃದ್ಧಿ ಕಾರ್ಯ ಕುರಿತು ಮಾತನಾಡಿರುವುದು ಜನರಲ್ಲಿ ಅನುಮಾನವನ್ನುಂಟುಮಾಡಿತು.
ಶಾಸಕ ಶಂಕರಪಾಟೀಲ ಮುನೇನಕೊಪ್ಪ, ಜಿ.ಪಿ. ಪಾಟೀಲ, ವಿ.ಸಿ. ಪಾಟೀಲ, ಚಂದ್ರು ದಂಡಿನ, ಎನ್.ಕೆ. ಸೋಮಪುರ, ಎಸ್.ಟಿ. ಕೆಂಚನಗೌಡರ, ಎನ್.ಟಿ. ಕಂಪುನಗೌಡ್ರ, ಎಸ್.ಆರ್. ಯಲ್ಲಪ್ಪಗೌಡರ, ಬಾಬು ಹಿರೇಹೊಳಿ, ಶಾಂತಾ ಯಲಿಗಾರ, ಸಿ.ಎಸ್.ಪಾಟೀಲ, ವಿ.ಎಸ್. ಡಾಣೆ, ಶಂಕರಗೌಡ ಯಲ್ಲಪ್ಪಗೌಡ್ರ, ಸುರೇಶ ಮರ್ಚಪ್ಪನವರ, ಪರಪ್ಪ ಸಾವಕಾರ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement