ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಂಚಿಸಿದ ಬಿಜೆಪಿಗೆ ಪಾಠ ಕಲಿಸಿ

Srinivasa Murthy VN
Updated On : 30 Apr 2013, 11:43 am

ಕನ್ನಡಪ್ರಭ ವಾರ್ತೆ, ರೋಣ, ಏ. 29
ರಾಜ್ಯದಲ್ಲಿ 5 ವರ್ಷಗಳ ಆಡಳಿತದಲ್ಲಿ ಕುರ್ಚಿಗಾಗಿ ಕಿತ್ತಾಟ, ಹಗರಣಗಳನ್ನೆ ಮಾಡಿ ರಾಜ್ಯದ ಜನತೆ ರೋಸಿ ಹೋಗುವಂತೆ ಮಾಡಿರುವ ಬಿಜೆಪಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಸಮಿತಿ ಸದಸ್ಯ ರಾಜೇಂದ್ರ ಪಾಟೀಲ ಮತದಾರರಿಗೆ ಮನವಿ ಮಾಡಿದರು.
ಭಾನುವಾರ ಪಟ್ಟಣದ ವಾರ್ಡ್ 13ರಿಂದ 18ರಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಜಿ.ಎಸ್. ಪಾಟೀಲರ ಪರವಾಗಿ ಮನೆ ಮನೆಗಳಿಗೆ ತೆರಳಿ ಮತ ಯಾಚನೆ ನಡೆಸಿ ಮಾತನಾಡಿದರು.
ಬಿಜೆಪಿ ರಾಜ್ಯದ ಅಭಿವೃದ್ಧಿಗೆ ಗಮನ ನೀಡದೆ ಹಣ ಲೂಟಿ ಮಾಡುವುದರಲ್ಲಿಯೇ ಕಾಲ ಕಳೆಯಿತು. ಈಗ ಅಭಿವೃದ್ಧಿಯ ಮುಖವಾಡ ಧರಿಸಿ ಮತ್ತೆ ಜನರೆದುರು ಬಂದು ಮತ ಕೇಳುತ್ತಿರುವುದು ಹಾಸ್ಯಾಸ್ಪದ. ಸಿಕ್ಕಂತಹ ಅವಧಿಯಲ್ಲಿ ಉತ್ತಮ ಆಡಳಿತ ನಡೆಸದೆ ದುರಾಡಳಿತ ಮಾಡಿತು. ಬಿಜೆಪಿಯ ಮಂತ್ರಿಗಳು, ಶಾಸಕರು ಹಗರಣಗಳಲ್ಲಿ ಸಿಲುಕಿ ಭ್ರಷ್ಟರಾಗಿದ್ದಾರೆ. ತಾವು ಸಾಚಾ ಎಂದು ಹೇಳಿಕೊಳ್ಳುವ ಕೆಲವು ಶಾಸಕರೂ ಸರ್ಕಾರದ ಆಸ್ತಿ ಲಪಟಾಯಿಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಬಡವರು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ದುಡಿಯುವ ಪಕ್ಷ. ಸ್ವಚ್ಛ ಹಾಗೂ ದಕ್ಷ ಆಡಳಿತ ನೀಡಲಿದೆ. ಅದಕ್ಕಾಗಿ ಜನಪರ ಕಳಕಳಿ ಉಳ್ಳ ಅಭ್ಯರ್ಥಿ ಜಿ.ಎಸ್. ಪಾಟೀಲಗೆ ಮತ ನೀಡಿ ಆಯ್ಕೆ ಮಾಡುವಂತೆ ಮತದಾರರಿಗೆ ಮನವಿ ಮಾಡಿದರು.
ಪುರಸಭೆ ಸದಸ್ಯರಾದ ಅಜ್ಜಪ್ಪ ರಡ್ಡೇರ, ತೋಟಪ್ಪ ನವಲಗುಂದ, ಮುತ್ತಣ್ಣ ಸಂಗಳದ, ಮಂಜುನಾಥ ಹಾಳಕೇರಿ, ಶಿವರಡ್ಡಿ ದಾನರಡ್ಡಿ, ಅಶೋಕ  ದೇಶಣ್ಣವರ, ರಾಜಣ್ಣ ಗಿರಡ್ಡಿ, ಬಸವರಾಜ ನವಲಗುಂದ, ಸಂಗು ನವಲಗುಂದ, ಶಿವು ಹಲ್ಲೂರ, ವೀರಯ್ಯ ಜಾವೂರ ಭಾಗವಹಿಸಿದ್ದರು.

ರಾಷ್ಟ್ರೀಯ ಪಕ್ಷಗಳಿಂದ ಅಭಿವೃದ್ಧಿ ಕುಂಠಿತ: ಕುರ್ತಕೋಟಿಮಠ
ಕನ್ನಡಪ್ರಭ ವಾರ್ತೆ, ಮುಳಗುಂದ, ಏ. 29

ನಾಡಿನ ಜನರ ಹಿತ ಚಿಂತನೆಯನ್ನು ಗಮನಿಸದ ಕಾಂಗ್ರೆಸ್, ಬಿಜೆಪಿಯಿಂದ ಅಭಿವೃದ್ಧಿ ಕುಂಠಿತವಾಗಿದ್ದು, ಈ ಎರಡೂ ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ 2 ಮುಖಗಳಿದ್ದಂತೆ ಎಂದು ಗದಗ ಮತ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಂದಾನಯ್ಯ ಕುರ್ತಕೋಟಿಮಠ ಹೇಳಿದರು.
ಗದಗ ಕ್ಷೇತ್ರದ ಕಲ್ಲೂರು, ಚಿಂಚಲಿ, ಮುಳಗುಂದ ಪಟ್ಟಣದಲ್ಲಿ ಮನೆ ಮನೆ ಪ್ರಚಾರ ನಡೆಸಿ ಮತಯಾಚಿಸಿ ಮಾತನಾಡಿದರು. ಶೋಷಿತ, ಅಲ್ಪಸಂಖ್ಯಾತರ, ಬಡವರ ಅಭಿವೃದ್ಧಿ ಮರೆತು ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ರೈತರ ಮೇಲೆ ಗೋಲಿಬಾರ್ ಮಾಡಿಸಿತು. 5 ವರ್ಷಗಳಲ್ಲಿ ರಾಜ್ಯದಲ್ಲಿ ದುರಾಡಳಿತ ನಡೆಸಿದ ಬಿಜೆಪಿಗೆ ಜನರು ಈ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ, ಕುಮಾರಸ್ವಾಮಿ ರೈತಪರ ಕಾಳಜಿ ವಹಿಸಿದ್ದು, ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ 24 ಗಂಟೆಯಲ್ಲಿ ರೈತರ ಎಲ್ಲ ರೀತಿಯ ಸಾಲಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಅಲ್ಪಸಂಖ್ಯಾತರು, ಬಡವರು, ಕೂಲಿ ಕಾರ್ಮಿಕರಿಗೆ ವಿಶೇಷ ಯೋಜನೆ ರೂಪಿಸಿದ್ದಾರೆ. ಈ ಬಾರಿ ರಾಜ್ಯಾದ್ಯಂತ ಜೆಡಿಎಸ್ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದರು.
ಜೆಡಿಎಸ್ ಮುಖಂಡ ಪರಸಪ್ಪ ಕಣವಿ, ಬಸವಂತಪ್ಪ ದಿವಟರ, ಮಹಾಂತೇಶ ಕಣವಿ, ಎ.ಬಿ. ಮಜ್ಜಿಗುಡ್ಡ, ಕೆಂಗಪ್ಪ ದಾಸಣ್ಣವರ, ಬರಮರಡ್ಡಿ ಕವಲೂರ, ಹನುಮಂತಪ್ಪ ಹಳ್ಳಿ, ಮಾಬಣ್ಣ ಪೂಜಾರ, ಸಿದ್ದಪ್ಪ ಹಳ್ಳಿ ಇದ್ದರು.

ಕಾಂಗ್ರೆಸ್‌ನಿಂದ ಬಡವರ ಏಳ್ಗೆ
ಮುಂಡರಗಿ:
ರಾಜ್ಯದಲ್ಲಿ ಐದು ವರ್ಷಗಳ ಕಾಲ ದುರಾಡಳಿತ ನಡೆಸಿದ ಬಿಜೆಪಿಯನ್ನು ಈ ಬಾರಿ ಮತದಾರರು ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರು, ಹಿಂದುಳಿದವರ ಏಳ್ಗೆಗೆ ಸಹಕಾರಿಯಾಗಲಿದೆ ಎಂದು ಮುಂಡರಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೇಮಂತಗೌಡ ಪಾಟೀಲ ಹೇಳಿದರು.
ಸೋಮವಾರ ಮುಂಡರಗಿ ಪಟ್ಟಣದಲ್ಲಿ ಶಿರಹಟ್ಟಿ ವಿಧಾನಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ ಪರ ರೋಡ್ ಶೋ ನಡೆಸಿ ಮಾತನಾಡಿದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರಿಗಾಗಿ ನೀಡುವ ಅಕ್ಕಿ ಕಡಿಮೆ ಮಾಡಲಾಯಿತು. ಪಡಿತರ ಚೀಟಿಯ ಸಮಸ್ಯೆ ಬಾಕಿ ಉಳಿಯಿತು. ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಮತದಾರರು ಮೇ 5ರಂದು ಜರುಗುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಅನುಕೂಲ ಮಾಡಬೇಕೆಂದು ಮನವಿ ಮಾಡಿದರು. ಚಂದ್ರಹಾಸ ಉಳ್ಳಾಗಡ್ಡಿ, ಗ್ಯಾನಪ್ಪ ಶೀರಿ, ಧೃವಕುಮಾರ ಹೊಸಮನಿ, ರಾಮು ಕಲಾಲ, ಎಸ್.ಡಿ. ಮಕಾಂದಾರ, ನಬೀಸಾಬ್ ಕೆಲೂರ, ಮೌನೇಶ ಉಪ್ಪಿನಬೆಟಗೇರಿ, ಡಿ.ಡಿ. ಮೋರನಾಳ, ಸೌಲಬಣ್ಣ ಜೋಬಾಳಿ, ವೀರಣ್ಣ ತುಪ್ಪದ, ರಾಮಣ್ಣ ಬಳ್ಳಾರಿ, ಸಿದ್ದಪ್ಪ ಮ್ಯಾಗೇರಿ, ಶೇಖರಾಜ ಹೊಸಮನಿ, ಪುರಸಭೆ ಸದಸ್ಯ ಸೋಮನಗೌಡ್ರ ಗೌಡ್ರ, ಲಿಂಗರಾಜ ಪಾಟೀಲ. ಬಸವರಾಜ ಗಣಾಚಾರಿ, ರಾಘವೇಂದ್ರ ಕುರಿ, ವೀರೇಶ ಸಜ್ಜರ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ಎಂ.ಎಚ್. ಮುಳಗುಂದ ಆರೋಪ
ಗದಗ: 
ಬಿಎಸ್ಸಾರ್ ಕಾಂಗ್ರೆಸ್ ಬಗ್ಗೆ ಮತದಾರರಲ್ಲಿದ್ದ ಉತ್ತಮ ಅಭಿಪ್ರಾಯದಿಂದ ಹತಾಶೆಗೊಂಡ ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರಕ್ಕೆ ಅಡ್ಡಿ, ಬೆದರಿಕೆ ಹಾಕುವ ಮೂಲಕ ಗೂಂಡಾಗಿರಿ ನಡೆಸುತ್ತಿರುವುದರಿಂದ ಗದಗ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ ಎಂದು ನಗರಸಭೆ ಸದಸ್ಯ ಎಂ.ಎಚ್. ಮುಳಗುಂದ ಆರೋಪಿಸಿದರು.
ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಖಂಡಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ಗದಗ ವಿಧಾನಸಭಾ ಕ್ಷೇತ್ರದ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಅನಿಲ ಮೆಣಸಿನಕಾಯಿ ಪರ ಭಾನುವಾರ ಗಾಂಧಿನಗರ ಪ್ರದೇಶಕ್ಕೆ ಮತಯಾಚನೆಗೆ ತೆರಳಿದಾಗ ಕಾಂಗ್ರೆಸ್ ಬೆಂಬಲಿಗರು ಪ್ರಚಾರ ಕಾರ್ಯಕ್ಕೆ ತಡೆಯೊಡ್ಡಿದ್ದಾರೆ. ಅಲ್ಲದೆ, ಈ ಪ್ರದೇಶ ತಮ್ಮದು ಎಂದು ಹಕ್ಕು ಪ್ರತಿಪಾದಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಿಎಸ್ಸಾರ್ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆದರಿಕೆ ಹಾಕುತ್ತ ಬಿಹಾರ ಮಾದರಿಯ ಗೂಂಡಾ ಸಂಸ್ಕೃತಿ ಹುಟ್ಟುಹಾಕುತ್ತಿದ್ದಾರೆ ಎಂದು ಗಂಭೀರವಾಗಿ ಆಪಾದಿಸಿದರು. ನಿರಂತರವಾಗಿ ನಡೆಯುತ್ತಿರುವ ಇಂಥ ಘಟನೆಗಳ ಬಗ್ಗೆ ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ರಕ್ಷಣೆ ಕೋರಲಾಗಿದೆ ಎಂದರು. ಈ ಸಂದರ್ಭದಲ್ಲಿ ಕೆಲ ಕಾಲ ರಸ್ತೆ ತಡೆ ನಡೆಸಲಾಯಿತು. ನಗರಸಭೆ ಸದಸ್ಯ ನಾಗಲಿಂಗ ಐಲಿ, ರಾಘವೇಂದ್ರ ಯಳವತ್ತಿ, ಸಂತೋಷ ಮೇಲಗಿರಿ, ಮಂಜು ಬೆಳದಡಿ, ಸಂತೋಷ ದಾವಣಗೆರೆ, ಭಗತ್‌ಸಿಂಗ ದೊಡ್ಡಮನಿ, ಹನುಮಾನ್‌ಸಿಂಗ್ ತಾಳಿಕೋಟಿ, ಉಮೇಶ ಗಾಣಿಗೇರ, ಮೋಹನ ಮಾಂತಗೊಂಡ, ಮಲ್ಲೇಶ ಶೆಟ್ಟಿ, ಪಂಪಾ ಕೆಂಚನಗುಂಡಿ, ಕೊಟ್ರೇಶ ಐಲಿ, ಮಹಾಂತೇಶ ಮುದಗಲ್ ಇತರರು ಇದ್ದರು.

ಬೀಚಿ ಕನ್ನಡ ಹಾಸ್ಯ ಸಾಹಿತ್ಯದ ಮೇರು ಬರಹಗಾರ: ಅನಿಲ್ ವೈದ್ಯ
ಗದಗ:
ಬೀಚಿ ಕನ್ನಡದ ಅಪರೂಪದ ಲೇಖಕ. ಕನ್ನಡ ಹಾಸ್ಯ ಸಾಹಿತ್ಯದ ಮೇರು ಬರಹಗಾರ ಎಂದು ಉಪನ್ಯಾಸಕ ಅನಿಲ ವೈದ್ಯ ಹೇಳಿದರು.
ಅವರು ಈಚೆಗೆ ತಾಪಂ ಆವರಣದಲ್ಲಿರುವ ಜಿಲ್ಲಾ ಕಸಾಪ ಕಚೇರಿಯಲ್ಲಿ ಜರುಗಿದ ಸಾಹಿತ್ಯ ಸಂಜೆ ಕಾರ್ಯಕ್ರಮದಲ್ಲಿ ಬೀಚಿಯವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಬೀಚಿಯವರ ಬದುಕು ಬರಹ ಕುರಿತು ಮಾತನಾಡಿದರು.
ಬೀಚಿಯವರ ಬರಹ, ಹುಡುಗಾಟಿಕೆ, ಪಾನಗೋಷ್ಠಿ, ಹಸಿ, ಬಿಸಿ ಪ್ರಸಂಗಗಳು ಮೈ ರೋಮಾಂಚನಗೊಳಿಸುತ್ತವೆ. ಅವರ ಪ್ರಬುದ್ಧತೆ, ಸಾಹಿತ್ಯದ ಗಟ್ಟಿತನ, ಅಶ್ಲೀಲತೆ ಸೋಂಕಿಲ್ಲದೆ ಕಟ್ಟಿಕೊಟ್ಟ ಹಾಸ್ಯ ನೋವಿನಲ್ಲೂ ಸರ್ವರನ್ನೂ ನಗಿಸಿದ ಪರಿ ವೈಶಿಷ್ಟ್ಯಪೂರ್ಣವಾಗಿದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ ಮಾತನಾಡಿ, ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ ಬೀಚಿಯವರ ಬರಹ ಬದುಕಿಗೆ ಆದರ್ಶ, ಅವರ ಬದುಕು ಸಮಾಜಕ್ಕೆ ಪಾಠ ಎಂದರು.
ಡಾ. ಅಶೋಕ ಮತ್ತಿಕಟ್ಟಿ ಪ್ರಸ್ತುತ ವರ್ತಮಾನದ ಸನ್ನಿವೇಶಕ್ಕೆ ತಕ್ಕ ವಿಷಯಗಳನ್ನೊಳಗೊಂಡ ಸ್ವರಚಿತ ಕವನಗಳನ್ನು ವಾಚಿಸಿದರು. ಪ್ರೊ. ಆರ್.ಎಲ್. ಪೋಲಿಸಪಾಟೀಲ ಸಂವಾದದಲ್ಲಿ ಪಾಲ್ಗೊಂಡಿದ್ದರು. ಪ್ರಾ. ಕೆ.ಎಚ್. ಬೇಲೂರ, ಪ್ರಾ. ಕೆ.ವಿ. ಕನ್ನೂರ, ಬಿ.ಎಸ್. ಹಿಂಡಿ, ಪ್ರೊ. ಕಿಶೋರಬಾಬು ನಾಗರಕಟ್ಟಿ, ಪ್ರಾ. ಬಿ.ಜಿ. ಹಿರೇಮಠ, ಡಿ.ಎಸ್. ತಳವಾರ, ಮಲ್ಲಿಕಾರ್ಜುನ ಗೌಡಪ್ಪಗೌಡ್ರ, ಸದಸ್ಯರು ಹಾಜರಿದ್ದರು. ಡಾ. ಸಂಗಮೇಶ ತಮ್ಮನಗೌಡ್ರ ಪ್ರಾರ್ಥಿಸಿದರು. ಶರಣು ಗೋಗೇರಿ ಸ್ವಾಗತಿಸಿದರು. ಕೆ.ಕೆ. ಹೂಗಾರ ನಿರೂಪಿಸಿದರು. ಎಸ್.ಎನ್. ನದಾಫ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement