ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ವಿದ್ಯಾರ್ಥಿಗಳ ಮೇಲೆ ಹಲ್ಲೆ: ಶಾಲೆಗೆ ಮುತ್ತಿಗೆ

Srinivasa Murthy VN
Updated On : 19 Dec 2013, 12:29 pm

ಗದಗ: ನಗರದ ಸಿಡಿಒ ಜೈನ್ ಸ್ಕೂಲ್‌ನಲ್ಲಿ ಶಾಲಾ ಆಡಳಿತ ಮಂಡಳಿ ಸದಸ್ಯರೊಬ್ಬರು 10ನೇ ತರಗತಿಯ ವಿದ್ಯಾರ್ಥಿಗಳ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿರುವ ಘಟನೆ ಕಳೆದ ಸೋಮವಾರ ಜರುಗಿದ್ದು, ಆಕ್ರೋಶಗೊಂಡ ವಿದ್ಯಾರ್ಥಿಗಳು, ಪಾಲಕರು ಬುಧವಾರ ಸಿಡಿಒ ಜೈನ್ ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ರಾಚೂಟೇಶ್ವರ ನಗರದಲ್ಲಿರುವ ಸಿಡಿಒ ಜೈನ್ ಶಾಲೆಯಲ್ಲಿ ಸೋಮವಾರದಂದು ಜರುಗಿದ ಶಾಲೆಯ ಆಡಳಿತ ಮಂಡಳಿಯ ಸಭೆಯಲ್ಲಿ ಪಾಲ್ಗೊಂಡಿದ್ದ ಆಡಳಿತ ಮಂಡಳಿಯ ಸದಸ್ಯ ಕುಮಾರ ಲಾಲ್ಕಾ ಎಂಬುವವರು ಶಾಲೆಯಲ್ಲಿ ವಿದ್ಯಾರ್ಥಿಗಳು ಗಲಾಟೆ ಮಾಡುತ್ತಿದ್ದಾರೆಂದು ಆರೋಪಿಸಿ, 14 ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ. ಚೇರ್ ಹಾಗೂ ಬೂಟುಗಾಲಿನಿಂದ ಒದ್ದಿರುವುದರಿಂದ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಶಾಲೆಯಿಂದ ಮನೆಗೆ ತೆರಳಿದ ವಿದ್ಯಾರ್ಥಿಗಳನ್ನು ಪಾಲಕರು ನೋಡಿ ಆಕ್ರೋಶಗೊಂಡು ಬುಧವಾರ ಬೆಳಗ್ಗೆ ಶಾಲೆಗೆ ಆಗಮಿಸಿ ಆಡಳಿತ ಮಂಡಳಿ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಈ ಕೂಡಲೇ ಮಕ್ಕಳ ಮೇಲೆ ಹಲ್ಲೆ ಮಾಡಿದ ಆಡಳಿತ ಮಂಡಳಿಯ ಸದಸ್ಯ ಕುಮಾರ ಲಾಲ್ಕಾ ಸ್ಥಳಕ್ಕೆ ಆಗಮಿಸಿ ಕ್ಷಮೆಯಾಚಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳ ಪಾಲಕರು ಪ್ರತಿಭಟಿಸಿದರು. ಇದರಿಂದಾಗಿ ಶಾಲೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಯಿತು. ಘಟನಾ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ಕೃಷ್ಣವೇಣಿ ಪ್ರತಿಭಟನಾಕಾರರ ಮನವೊಲಿಸಲು ಮುಂದಾದರು. ಆದರೂ ಪಟ್ಟುಬಿಡದ ಪಾಲಕರು ಸದಸ್ಯ ಕ್ಷಮೆಯಾಚಿಸುವವರೆಗೂ ಮತ್ತು ಈ ಕೂಡಲೇ ಕುಮಾರ ಲಾಲ್ಕಾನನ್ನು ಆಡಳಿತ ಮಂಡಳಿಯಿಂದ ತೆಗೆದು ಹಾಕಿ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟುಹಿಡಿದರು. ಸ್ಥಳಕ್ಕೆ ಆಗಮಿಸಿದ ಡಿಡಿಪಿಐ ಐ.ಬಿ. ಬೆನಕೊಪ್ಪ, ಈ ಕೂಡಲೇ ಆಡಳಿತ ಮಂಡಳಿಯಿಂದ ಕುಮಾರ ಲಾಲ್ಕಾ ಅವರನ್ನು ವಜಾಗೊಳಿಸುವಂತೆ ಆಡಳಿತ ಮಂಡಳಿಗೆ ಸೂಚಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement