ಬಿಜೆಪಿಯಿಂದ ಒಮ್ಮತದ ಅಭ್ಯರ್ಥಿ ಕಣಕ್ಕೆ: ಹಂಚಿನಾಳ
ಕನ್ನಡಪ್ರಭ ವಾರ್ತೆ, ಮುಂಡರಗಿ, ಫೆ. 16
ಮಾ. 7ರಂದು ನಡೆಯಲಿರುವ ಮುಂಡರಗಿ ಪುರಸಭೆ ಚುನಾವಣೆಗೆ ಎಲ್ಲ 23 ವಾರ್ಡ್ಗಳಿಗೆ ಪಕ್ಷದ ಮುಖಂಡರೆಲ್ಲರೂ ಸೇರಿ ಒಮ್ಮತದ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಹೇಳಿದರು.
ಪಟ್ಟಣದ ಹಂಚಿನಾಳ ಅಳರ ಸ್ವಿಮ್ಮಿಂಗ್ ಪೂಲ್ ಆವರಣದಲ್ಲಿ ಜರುಗಿದ ಪುರಸಭೆ ಚುನಾವಣೆ ಸಂಬಂಧ ಕಾರ್ಯಕರ್ತರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ 23 ವಾರ್ಡಗಳ ಆಕಾಂಕ್ಷಿಗಳ ಪಟ್ಟಿ ನೀಡುವಂತೆ ತಿಳಿಸಿದ್ದು, ಮುಖಂಡರು ಸೇರಿ ಪರಿಶೀಲಿಸಿ, ಸೂಕ್ತರನ್ನು ಕಣಕ್ಕೆ ಇಳಿಸಲಾಗುವುದು. ಪುರಸಭಾ ಚುನಾವಣೆಗೆ ಬಿಜೆಪಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯ ಬಿಜೆಪಿ ಸರ್ಕಾರ ತನ್ನ 5 ವರ್ಷದ ಆಡಳಿತದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಗರಿಷ್ಠ ಅನುದಾನ ನೀಡಿ, ಅನೇಕ ಅಭಿವೃದ್ಧಿ ಕಾರ್ಯ ಮಾಡಿದೆ. ಪ್ರಜ್ಞಾವಂತ ಮತದಾರರು ಇದನ್ನು ಗಮನಿಸಿ ಮತ್ತೆ ಬಿಜೆಪಿಗೆ ಅಧಿಕಾರ ನೀಡಲಿದ್ದಾರೆ ಎಂದರು.
ಮುಂಡರಗಿ ಶಹರ ಘಟಕದ ಬಿಜೆಪಿ ಅಧ್ಯಕ್ಷ ರಜನೀಕಾಂತ ದೇಸಾಯಿ ಮಾತನಾಡಿದರು. ಸಭೆಯಲ್ಲಿ ಚಿನ್ನಪ್ಪ ವಡ್ಡಟ್ಟಿ, ಸುರೇಶ ಜೈನ್, ಸೀತಾರಾಮರಾಜು, ಸುರೇಶ ಕ್ಯಾದಿಗಿಹಳ್ಳಿ, ಗುಡದಪ್ಪ ದೇಸಾಯಿ, ಆರ್.ಎಂ. ತಪ್ಪಡಿ, ಬಸವರಾಜ ಮುಂಡವಾಡ, ಹುಚ್ಚಪ್ಪ ಕುಂಬಾರ, ಪರಶುರಾಮ ಕರಡಿಕೊಳ್ಳ, ಶ್ರೀನಿವಾಸ ಅಬ್ಬಿಗೇರಿ, ಪರಸಪ್ಪ ಕುಂಬಾರ, ಶಂಭುಲಿಂಗನಗೌಡ ಹಕ್ಕಂಡಿ, ಮಲ್ಲಪ್ಪ ಸಂಘಟಿ, ಈರಪ್ಪ ಡಂಬಳ, ವೆಂಕಟೇಶ ತಳವಾರ, ಗಂಗಾಧರ ಹವಳೆ ಉಪಸ್ಥಿತರಿದ್ದರು.
ಗಜೇಂದ್ರಗಡ: ಮೀಸಲಾತಿ ಪ್ರಕಟ
ಗಜೇಂದ್ರಗಡ: ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ದಿನಾಂಕ ಪ್ರಕಟಿಸಿದ ಬೆನ್ನಲ್ಲೇ ಚುನಾವಣೆ ನಡೆಯುವ ಸಂಸ್ಥೆಗಳಿಗೆ ಚುನಾವಣಾ ಅಧಿಕಾರಿಗಳನ್ನು ನೇಮಿಸಿದೆ. ಗಜೇಂದ್ರಗಡ ಪುರಸಭೆಯ ಚುನಾವಣಾ ಅಧಿಕಾರಿಯಾಗಿ ಪ್ರಶಾಂತ ವರಗಪ್ಪನವರು ಶನಿವಾರ ನೇಮಕಗೊಂಡಿದ್ದಾರೆ. ಅಧಿಕಾರ ವಹಿಸಿಕೊಂಡ ಬಳಿಕ ಅವರು ಮಾಧ್ಯಮಗಳಿಗೆ ಗಜೇಂದ್ರಗಡ ಪುರಸಭೆಯ 23 ವಾರ್ಡ್ಗಳ ಮೀಸಲಾತಿ ಪಟ್ಟಿ ಬಿಡುಗಡೆ ಮಾಡಿದರು.
ಮೀಸಲಾತಿ: 1 ಸಾಮಾನ್ಯ , 2 ಹಿಂದುಳಿದ ವರ್ಗ (ಎ), 3 ಸಾಮಾನ್ಯ (ಮಹಿಳೆ), 4 ಹಿಂದುಳಿದ ವರ್ಗ (ಎ) ಮಹಿಳೆ, 5 ಸಾಮಾನ್ಯ , 6 ಸಾಮಾನ್ಯ , 7 ಸಾಮಾನ್ಯ , 8 ಹಿಂದುಳಿದ ವರ್ಗ (ಎ), 9 ಸಾಮಾನ್ಯ (ಮಹಿಳೆ), 10 ಪರಿಶಿಷ್ಟ ಜಾತಿ (ಮಹಿಳೆ), 11 ಹಿಂದುಳಿದ ವರ್ಗ (ಎ), 12 ಸಾಮಾನ್ಯ, 13 ಸಾಮಾನ್ಯ, 14 ಹಿಂದುಳಿದ ವರ್ಗ (ಬಿ), 15 ಹಿಂದುಳಿದ ವರ್ಗ (ಎ) ಮಹಿಳೆ, 16 ಹಿಂದುಳಿದ ವರ್ಗ (ಎ), 17 ಪರಿಶಿಷ್ಟ ಜಾತಿ, 18 ಹಿಂದುಳಿದ ವರ್ಗ (ಬಿ) ಮಹಿಳೆ, 19 ಪರಿಶಿಷ್ಟ ಜಾತಿ, 20 ಸಾಮಾನ್ಯ, 21 ಪರಿಶಿಷ್ಟ ಜಾತಿ, 22 ಸಾಮಾನ್ಯ (ಮಹಿಳೆ), 23 ಪರಿಶಿಷ್ಟ ಪಂಗಡ ( ಮಹಿಳೆ)
ಗ್ರಾಪಂ ಕಾರ್ಯದರ್ಶಿ ಮನೆ ಮೇಲೆ ಲೋಕಾ ದಾಳಿ
ಕನ್ನಡಪ್ರಭ ವಾರ್ತೆ, ಗದಗ, ಫೆ. 16
ಸಮೀಪದ ಕಳಸಾಪುರದಲ್ಲಿ ಶನಿವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ಶಿರಹಟ್ಟಿ ತಾಲೂಕು ರಣತೂರು ಗ್ರಾಪಂ ಕಾರ್ಯದರ್ಶಿ ಬಸಯ್ಯ ಇಟಗಿಮಠ ಮನೆ ಮೇಲೆ ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ರಮ ಆಸ್ತಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಬಸಯ್ಯ ಅವರ ಕಳಸಾಪುರ ಮನೆ ಮಾತ್ರವಲ್ಲದೆ, ರೋಣ, ಗದುಗಿನ ಸಾರಿಗೆ ನಗರ, ರಣತೂರು ಗ್ರಾಪಂ ಕಾರ್ಯಾಲಯ ಹಾಗೂ ಕಳಸಾಪುರದ ಸಂಬಂಧಿಕರ ಮನೆಗಳ ಮೇಲೂ ದಾಳಿ ನಡೆಸಿ, ಅಪಾರ ಪ್ರಮಾಣದ ಆಸ್ತಿ ದಾಖಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಧಾರವಾಡ, ದಾವಣಗೆರೆ ಹಾಗೂ ಗದಗ ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಬೆಳಗ್ಗೆಯೇ ದಾಳಿ ನಡೆಸಿದ್ದರಿಂದ ಕುಟುಂಬದ ಸದಸ್ಯರು ಗೊಂದಲ, ಆತಂಕಕ್ಕೆ ಈಡಾದರು. ಜಿಲ್ಲೆಯಲ್ಲಿ 2 ವರ್ಷಗಳ ನಂತರ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಹಲವು ಭ್ರಷ್ಟ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದೆ. ಬಸಯ್ಯ ಇಟಗಿಮಠ ಮನೆಯಲ್ಲಿ ವಶ ಪಡಿಸಿಕೊಂಡಿರುವ ದಾಖಲೆಗಳ ಆಧಾರದಲ್ಲಿ ತಮ್ಮ ನಿಗದಿತ ಆದಾಯಕ್ಕಿಂತ 200 ಪಟ್ಟು ಹೆಚ್ಚು ಆಸ್ತಿ (ಬಹುತೇಕ ಜಮೀನು) ಹೊಂದಿದ್ದಾಗಿ ಅಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ ಧಾರವಾಡ ಲೋಕಾಯುಕ್ತ ಎಸ್ಪಿ ಎನ್. ನಿಂಗಾರೆಡ್ಡಿ, ಗದಗ ಲೋಕಾಯುಕ್ತ ಡಿಎಸ್ಪಿ ಆರ್.ಜಿ. ಪಾಟೀಲ, ಸಿಪಿಐ ಸಂಗನಗೌಡ, ಸಣ್ಣತಿಮ್ಮಪ್ಪ, ಮಂಜುನಾಥ ನಡುವಿನಮನಿ ಹಾಗೂ ಸಿಬ್ಬಂದಿ ಚೂರಿ, ಅಯ್ಯನಗೌಡ ಪಾಲ್ಗೊಂಡಿದ್ದರು.