ಸಮರ್ಥರ ಹುಡುಕಾಟದಲ್ಲಿ ಪಕ್ಷಗಳು
-ಮಹದೇವಪ್ಪ ಎಂ. ಸ್ವಾಮಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 16
ಪಟ್ಟಣದಲ್ಲಿ ಚುನಾವಣೆ ಕಾವು ಏರತೊಡಗಿದೆ. ಅದು ಬಿಸಿಲಿಗಿಂತಲೂ ತೀವ್ರವಾಗಿದೆ. ಹಗಲಿರುಳು ಚುನಾವಣೆಯದೇ ಕನವರಿಕೆ. ಕುಂತರೂ ನಿಂತರೂ ಅದರದ್ದೇ ಧ್ಯಾನ.
ಶಿರಹಟ್ಟಿ ಪಟ್ಟಣ ಪಂಚಾಯಿತಿಯ 17 ವಾರ್ಡ್ಗಳಿಗೆ ಮಾರ್ಚ್ 7ರಂದು ಮತದಾನ ನಡೆಯಲಿದೆ. ಶನಿವಾರದಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಬೆಂಬಲಿತ ಆಕಾಂಕ್ಷಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಗೆ ಬೇಕಾಗುವ ದಾಖಲೆಗಳ ಜೋಡಣೆಗೆ ಮುಂದಾಗಿದ್ದಾರೆ. ಟಿಕೆಟ್ಗಾಗಿ ತಮ್ಮ ಬೆಂಬಲಿಗರ ಮೂಲಕ ಮುಖಂಡರ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ.
ಕೆಲವು ವಾರ್ಡ್ಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ಪಕ್ಷದ ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ. ಸಾಮಾನ್ಯ ವರ್ಗಕ್ಕೆ ಮೀಸಲಾದ ಸ್ಥಾನಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ. ತೀವ್ರ ಕುತೂಹಲ ಕೆರಳಿಸಿ, ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಕ್ಷೇತ್ರಗಳಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಚಾರದಲ್ಲಿ ಮುಖಂಡರು ತಲೆ ಬಿಸಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸೂಕ್ತ ಹಾಗೂ ಗೆಲ್ಲುವ ಅಭ್ಯರ್ಥಿಗಳಿಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸೂಕ್ಷ್ಮವಾಗಿ ಹುಡುಕಾಟ ಆರಂಭಿಸಿವೆ. ಅಭ್ಯರ್ಥಿಗಳ ಆಯ್ಕೆ ಮೇಲೆಯೇ ಗೆಲುವಿನ ನಿರ್ಧಾರ ಎಂಬುದು ಗೊತ್ತಿದ್ದು, ಶತಪ್ರಯತ್ನ ಮಾಡುತ್ತಿದ್ದಾರೆ. ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇದೀಗ ಆರಂಭವಾಗಿದ್ದರೂ ನಾಮಪತ್ರ ವಾಪಸ್ ಪಡೆಯಲು ಸಾಕಷ್ಟು ಕಾಲಾವಕಾಶ ಇರುವ ಕಾರಣ, ಅಭ್ಯರ್ಥಿಗಳ ಆಯ್ಕೆಯಲ್ಲಿ ಅವಸರ ಮಾಡುತ್ತಿಲ್ಲ ಎಂಬ ಅಭಿಪ್ರಾಯವೂ ಪ್ರಚಲಿತದಲ್ಲಿದೆ.
ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡೇ ಹಾಲಿ, ಮಾಜಿ ಶಾಸಕರು, ಯ ಪಕ್ಷಗಳ ಅಧ್ಯಕ್ಷರು ಶತಾಯಗತಾಯ ತಮ್ಮ ಪಕ್ಷಗಳ ಅಭ್ಯರ್ಥಿಗಳ ಆಯ್ಕೆಗಾಗಿ ಭಾರಿ ಕಸರತ್ತು ನಡೆಸಿದ್ದಾರೆ. ಕಳೆದ ಬಾರಿ ಪಟ್ಟಣ ಪಂಚಾಯತಿಯ 17 ವಾರ್ಡ್ಗಳ ಪೈಕಿ 14ರಲ್ಲಿ ಜೆಡಿಎಸ್ ಗೆಲುವು ಸಾಧಿಸಿ ನಿಚ್ಚಳ ಬಹುಮತ ಪಡೆದಿತ್ತು. ಎರಡುವರೆ ವರ್ಷದ ಅವಧಿ ಬಳಿಕ ಚುನಾಯಿತರಾದವರು ಪಕ್ಷಾಂತರ ಮಾಡಿದ್ದರಿಂದ ಈ ಬಾರಿ ಜೆಡಿಎಸ್ ಗೆಲುವು ಎಷ್ಟರ ಮಟ್ಟಿಗೆ ಸಾಧ್ಯ ಎಂಬ ಚರ್ಚೆ ನಡೆದಿದೆ.
ಆರಂಭದ ದಿನವಾದ ಶನಿವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಆದರೂ ಚುನಾವಣೆ ಕಾವು ರಂಗೇರಲು ಇದು ಅಡ್ಡಿಯಾಗಿಲ್ಲ.
ಶಾಸಕರ ಮನವೊಲಿಕೆಗೆ ಪ್ರಯತ್ನ
ನರಗುಂದ ಶಾಸಕ ಸಿ.ಸಿ. ಪಾಟೀಲ ಹಾಗೂ ಗದಗ ಶಾಸಕ ಶ್ರೀಶೈಲಪ್ಪ ಬಿದರೂರ ತಮ್ಮ ತಮ್ಮ ವ್ಯಾಪ್ತಿಯಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯುವಂತೆ ಶ್ರಮಿಸಿದ್ದರು. ಅದಕ್ಕಾಗಿ ಪ್ರಸ್ತುತ ಮಾಜಿ ಸದಸ್ಯರಾಗಿರುವ ಪ್ರತಿಯೊಬ್ಬರೂ ಇಬ್ಬರೂ ಶಾಸಕರನ್ನು ಬಿಜೆಪಿಯಲ್ಲಿಯೇ ಉಳಿಯುವಂತೆ, ಮತ್ತೊ ಮ್ಮೆ ಪಕ್ಷವನ್ನು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಕ್ಕೆ ತರಲು ಶ್ರಮಿಸುವ ನಿಟ್ಟಿನಲ್ಲಿ ಶಾಸಕರ ಮನವೊಲಿಸಲು ಮುಂದಾಗಿದ್ದಾರೆ. ಮಾಜಿ ಸದಸ್ಯರು, ಕಾರ್ಯಕರ್ತರು ಹಾಗೂ ಇಬ್ಬರು ಶಾಸಕರ ಅಭಿಮಾನಿಗಳು ಶಾಸಕರಿಗೆ ಗೊತ್ತಿಲ್ಲದಂತೆ ಗೌಪ್ಯ ಸಭೆಗಳನ್ನು ನಡೆಸುತ್ತಿದ್ದು, ಸದ್ಯದಲ್ಲಿಯೇ ಶಾಸಕರನ್ನು ಅವರೆಲ್ಲ ಭೇಟಿ ಮಾಡಿ ಮನ ವೊಲಿಸುವುದಾಗಿ ಬಿಜೆಪಿಯ ಪ್ರಭಾವಿ ನಾಯಕರೊಬ್ಬರು 'ಕನ್ನಡಪ್ರಭ'ಕ್ಕೆ ಮಾಹಿತಿ ನೀಡಿದರು.