ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಕಪ್ಪತ್ತಗುಡ್ಡ ವನ್ಯಜೀವಿ ಧಾಮ: ಗೊಂದಲ ಗೂಡಾದ ಸಭೆ

Srinivasa Murthy VN
Updated On : 22 Feb 2013, 4:54 am

ಗದಗ: ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮ ಮಾಡುವ ಯೋಜನೆಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ಕಪ್ಪತ್ತಗುಡ್ಡ ವ್ಯಾಪ್ತಿಯ 33 ಗ್ರಾಮಸ್ಥರ ಸಭೆಯಲ್ಲಿ ಕೆಲಕಾಲ ಗೊಂದಲದ ವಾತವಾರಣ ನಿರ್ಮಾಣವಾಯಿತಲ್ಲದೆ, ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು.
ಕಪ್ಪತ್ತಗುಡ್ಡ ವನ್ಯಜೀವಿ ಧಾಮವೆಂದು ಘೋಷಿಸುವುದಕ್ಕೆ ಸಭೆಯಲ್ಲಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು, ತೋಂಟದಾರ್ಯ ಶ್ರೀಗಳು ಸೇರಿದಂತೆ ಹಲವರು ಬೆಂಬಲ ಸೂಚಿಸಿದರು. ಈ ಸಭೆಯನ್ನು ಮುಂಡರಗಿ ತಾಲೂಕಿನ ಡಂಬಳದಲ್ಲಿ ಆಯೋಜಿಸಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ತೋಂಟದಾರ್ಯ ಶ್ರೀಗಳು, ವನ್ಯಧಾಮವಾಗಿ ಘೋಷಿಸಿರುವುದರಿಂದ ಕಪ್ಪತ್ತಗುಡ್ಡದ ಅರಣ್ಯ ಸಂಪತ್ತು ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಈ ಭಾಗದಲ್ಲಿರುವ ಯಾವ ಸಾರ್ವಜನಿಕರನ್ನೂ ಒಕ್ಕಲೆಬ್ಬಿಸುವುದಿಲ್ಲ. ಇಲ್ಲಿ ಹುಲಿಗಳನ್ನು ತಂದು ಬಿಡುತ್ತಾರೆ ಎನ್ನುವ ತಪ್ಪು ಮಾಹಿತಿ ಇದೆ. ಇದಕ್ಕೆ ಯಾರೂ ಕಿವಿಗೊಡಬಾರದು. ವನ್ಯಧಾಮವನ್ನಾಗಿ ಘೋಷಿಸಲು ಪೂರ್ವಾಗ್ರಹ ಪೀಡಿತವಾಗಿ ಚಿಂತಿಸದೇ ಇದಕ್ಕೆಲ್ಲ ಸಹಕರಿಸಬೇಕೆಂದರು.
ಮಾಜಿ ಕ್ರಿಕೆಟಿಗ, ರಾಜ್ಯ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷ ಅನಿಲ್ ಕುಂಬ್ಳೆ ಸಭೆಯನ್ನು ಉದ್ಘಾಟಿಸಿ, 'ಕಪ್ಪತ್ತಗುಡ್ಡ ಭಾಗದಲ್ಲಿ ಒಟ್ಟು 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ವನ್ಯಧಾಮ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆ' ಎಂದರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ವನ್ಯಧಾಮ ಮಾಡುವುದನ್ನು ಬೆಂಬಲಿಸಿ ಮಾತನಾಡಿದರು.
ಸಂವಾದದ ವೇಳೆ ಗದ್ದಲ: ಗಣ್ಯರು ಅಭಿಪ್ರಾಯ ತಿಳಿಸಿದ ನಂತರ ಸಾರ್ವಜನಿಕರಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡಲಾಯಿತು. ಜೆ.ಎಂ. ಹಿರೇಮಠ, ರಂಗನಗೌಡ ಜಾಯನಗೌಡ್ರ ಮುಂತಾದವರು ಮಾತನಾಡಿ, ಇಲ್ಲಿ ಯಾವುದೇ ವಿಶೇಷ ಪ್ರಾಣಿಗಳು ಇಲ್ಲದ ಕಾರಣ, ವನ್ಯಧಾಮ ಬೇಡ. ನಾವೇ ಅರಣ್ಯ ರಕ್ಷಿಸುತ್ತೇವೆ. ಒಂದೊಮ್ಮೆ ವನ್ಯಧಾಮವೆಂದು ಘೋಷಿಸಿದಲ್ಲಿ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ ಎಂದರು.
ಆಗ ಕೊಂಚಿಗೇರಿ ವನ್ಯ ಧಾಮಬೇಕು. ಸಾರ್ವಜನಿಕರು ನಡೆದುಕೊಳ್ಳುತ್ತಿರುವ ರೀತಿ ಸರಿಯಾಗಿಲ್ಲ ಎನ್ನುತ್ತಿದ್ದಂತೆ ತೀವ್ರ ಗದ್ದಲ ಉಂಟಾಯಿತು. ಈ ವೇಳೆ ಕೆಲವರು ಕೊಂಚಿಗೇರಿ ಅವರ ಮೇಲೆ ಮುಗಿಬಿದ್ದು ಹಲ್ಲೆಗೂ ಯತ್ನಿಸಿದರು. ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಮಧ್ಯಸ್ಥಿಕೆಯಿಂದ ವಾತಾವರಣ ತಿಳಿಯಾಯಿತಾದರೂ ಸಾರ್ವಜನಿಕರು ಯಾವುದೇ ಕಾರಣಕ್ಕೂ ಇಲ್ಲಿ ವನ್ಯಧಾಮ ಬೇಡ ಎನ್ನುವ ಪಟ್ಟು ಹಿಡಿದು ಘೋಷಣೆ ಕೂಗಲು ಪ್ರಾರಂಭಿಸಿದರು.
ಪರಿಸ್ಥಿತಿ ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಸಭೆಯನ್ನು ಮೊಟಕುಗೊಳಿಸಿ, ನಿಮ್ಮ ಅಭಿಪ್ರಾಯಗಳನ್ನು ಲಿಖಿತವಾಗಿ ತಿಳಿಸಿ ಎಂದು ಹೊರ ನಡೆದರು.

ತೋಂಟದ ಶ್ರೀಗಳೇ ಟಾರ್ಗೆಟ್!
ಸಭೆಯಲ್ಲಿ ಪಾಲ್ಗೊಂಡಿದ್ದ ತೋಂಟದಾರ್ಯ ಶ್ರೀಗಳನ್ನೇ ನೇರವಾಗಿ ಗುರಿಯಾಗಿಸಿಕೊಂಡು ಮಾತನಾಡಿದ ಅತ್ತಿಕಟ್ಟಿ ಗ್ರಾಮಸ್ಥರು, 'ಪೊಸ್ಕೋ ವಿಷಯವಾಗಿ ಶ್ರೀಗಳು ನೇತೃತ್ವವಹಿಕೊಂಡು ಹೋರಾಡಿದರು. ಆದರೆ, ಕಳೆದ 6 ತಿಂಗಳಿಂದ ಬಡವರ ಜಮೀನನ್ನು ವಶ ಪಡಿಸಿಕೊಂಡು ಬಂಗಾರದ ಗಣಿಗಾರಿಕೆ ಮಾಡುತ್ತಿರುವ ರಾಮಘಡ ಮಿನರಲ್ಸ್ ಕಂಪನಿಯ ವಿರುದ್ಧವೇಕೆ ಧ್ವನಿ ಎತ್ತುತ್ತಿಲ್ಲ' ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ ಘಟನೆಯೂ ಜರುಗಿತು.
ಸಭೆಯಲ್ಲಿ ಭಾಗವಹಿಸಿದ್ದ ಕಪ್ಪತ್ತಗುಡ್ಡದ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ವನ್ಯಧಾಮ ಸ್ಥಾಪನೆ ಕುರಿತು ಪರವಾಗಲಿ, ವಿರೋಧವಾಗಲಿ ಮಾತನಾಡದೇ, ಕಪ್ಪತ್ತಗುಡ್ಡದಲ್ಲಿ ಆಯುರ್ವೇದಿಕ್ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕು. ರಾಷ್ಟ್ರೀಯ ಮಟ್ಟದ ಗೋ ಶಾಲೆಯನ್ನು ಸ್ಥಾಪಿಸಬೇಕು. ಆ ಮೂಲಕ ಅಪರೂಪದ ಗೋ ತಳಿಗಳನ್ನು ಉಳಿಸಬೇಕು ಎಂದು ಹೇಳಿದ್ದು, ಹಲವು ಸಂಶಯಕ್ಕೆ ಕಾರಣವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement