ಇಂದು ಪುತ್ಥಳಿ ಅನಾವರಣ
ಗದಗ: ಸಮೀಪದ ಬಿಂಕದಕಟ್ಟಿ ಗ್ರಾಮದಲ್ಲಿ ಗದಗ ಪರಿಸರದ ಸಹಕಾರಿ ಧುರೀಣ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ದಿ. ಎಂ.ವಿ. ಮೂಲಿಮನಿಯವರ ಪುತ್ಥಳಿ ಅನಾವರಣ ಸಮಾರಂಭ ಮಾ. 9ರ ಬೆಳಗ್ಗೆ 10.30 ಗಂಟೆಗೆ ಬಿಂಕದಕಟ್ಟಿ ಶಿಶು ವಿಹಾರದ ಪ್ರಾಂಗಣದಲ್ಲಿ ನೆರವೇರಲಿದೆ. ಬಿಜಾಪುರ ಜ್ಞಾನಯೋಗಾಶ್ರವುದ ಸಿದ್ದೇಶ್ವರ ಶ್ರೀಗಳು ಪುತ್ಥಳಿ ಅನಾವರಣಗೊಳಿಸಲಿದ್ದಾರೆ. ರಾಷ್ಟ್ರೀಯ ಸಹಕಾರಿ ಬ್ಯಾಂಕ್ಗಳ ಮಹಾಮಂಡಳದ ಅಧ್ಯಕ್ಷ ಎಚ್.ಕೆ. ಪಾಟೀಲ ಅಧ್ಯಕ್ಷತೆ ವಹಿಸುವರು. ಲೇಖಕ ಜೆ.ಕೆ. ಜಮಾದಾರ ಬರೆದ ನಾಯಕ ನಿಷ್ಠ, ಸಹಕಾರ ರತ್ನ ಎಂ.ವಿ. ಮೂಲಿಮನಿ ಪುಸ್ತಕವನ್ನು ಮಾಜಿ ವಿಧಾನಸಭಾಧ್ಯಕ್ಷ ಬಿ.ಜಿ. ಬಣಕಾರ ಬಿಡುಗಡೆಗೊಳಿಸುವರು. ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಶಿಶುವಿಹಾರಕ್ಕೆ ಎಂ.ವಿ. ಮೂಲಿಮನಿ ಶಿಶುವಿಹಾರ ಎಂದು ನಾಮಕರಣ ಮಾಡಲಿದ್ದಾರೆ. ಗದಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್. ಗಡ್ಡದೇವರಮಠ ಶಿಶುವಿಹಾರದ ಸ್ಥಾಪಕ ನಿರ್ದೇಶಕ ಮಂಡಳಿಯ ಭಾವಚಿತ್ರ ಅನಾವರಣ ಮಾಡಲಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಎ. ರಾಮಸ್ವಾಮಿ, ಕೆ.ಬಿ. ಕೋಳಿವಾಡ, ಬಿ.ಆರ್. ಯಾವಗಲ್, ಮಾಜಿ ಶಾಸಕ ಜಿ.ಎಸ್. ಪಾಟೀಲ, ಜೆ.ಟಿ. ಪಾಟೀಲ, ಡಿ.ಆರ್. ಪಾಟೀಲ, ನಿವೃತ್ತ ಜಂಟಿ ನಿಬಂಧಕ ಎಸ್.ಎಂ. ಕಲೂತಿ, ಕೆ.ಪಿ.ಸಿ.ಸಿ. ಸದಸ್ಯ ವಾಸಣ್ಣ ಕುರಡಗಿ ಹಾಗೂ ಬೆಂಗಳೂರಿನ ಮಿರಾಂಡಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಎನ್. ಕಾತರಕಿ ಭಾಗವಹಿಸಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಕೇಬಲ್ ಕಳ್ಳತನ: ದೂರು
ಕುಕನೂರ: ಸಮೀಪದ ಸೋಂಪುರ ಗ್ರಾಮದ ವೀರಣ್ಣ ಗದಗಿನ ಎಂಬುವರ ಹೊಲದಲ್ಲಿ ಇರಿಸಲಾಗಿದ್ದ ಬಿಎಸ್ಸೆನ್ನೆಲ್ ಕೇಬಲ್ ಕಳ್ಳತನವಾಗಿದೆ. ಬಿಎಸ್ಸೆನ್ನೆಲ್ ಟವರ್ ಎಂಜಿನಿಯರ್ ಗುರುಪ್ರಸಾದ್ ಈ ಸಂಬಂಧ ಕುಕನೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಫೆ. 25ರಂದು ಆರು ಎಳೆಯ, 130 ಮೀ. ಉದ್ದದ, ಸುಮಾರು ರು. 35 ಸಾವಿರ ಬೆಲೆಯ ಕೇಬಲ್ ಕಳುವಾಗಿರವ ಬಗ್ಗೆ ಪಿಎಸ್ಐ ಎಚ್. ಗುರುಬಸವರಾಜ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಬಸವಣೆಮ್ಮ ಹಿರೇಮಠ ನಿಧನ
ಯಲಬುರ್ಗಾ: ಸ್ಥಳೀಯ ಸಂಸ್ಥಾನ ಹಿರೇಮಠದ ಸಿದ್ದರಾಮೇಶ್ವರ ಸ್ವಾಮೀಜಿಯವರ ಮಾತೋಶ್ರೀ ಬಸವಣೆಮ್ಮ ಸಿದ್ದರಾಮ ಸ್ವಾಮಿ (ಸಿಹಿ) ಹಿರೇಮಠ (78) ಶುಕ್ರವಾರ ಸಂಜೆ ನಿಧನರಾದರು. ಮೃತರಿಗೆ ಶ್ರೀಗಳು ಸೇರಿದಂತೆ ಮೂವರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಶನಿವಾರ ಪಟ್ಟಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ, ಬೆದವಟ್ಟಿಯ ಶಿವಸಂಗಮೇಶ್ವರ ಸ್ವಾಮೀಜಿ, ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ, ಶಾಸಕ ಈಶಣ್ಣ ಗುಳಗಣ್ಣವರ್, ಹಾಲಪ್ಪ ಆಚಾರ್, ಬಸವರಾಜ ರಾಯರಡ್ಡಿ, ಶಿವಶರಣಪ್ಪಗೌಡ ಪಾಟೀಲ, ಜೆಡಿಎಸ್ ಮುಖಂಡ ಜಿ.ಟಿ. ಪಂಪಾಪತಿ, ಬಿಎಸ್ಸಾರ್ ಮುಖಂಡ ನವೀನಕುಮಾರ ಗುಳಗಣ್ಣನವರ್, ಶ್ರೀಪಾದಪ್ಪ ಅಧಿಕಾರಿ, ಬಸವರಾಜ ಉಳ್ಳಾಗಡ್ಡಿ, ಬಸವಲಿಂಗಪ್ಪ ಭೂತೆ, ಸಿ.ಎಚ್. ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ರಾಜ್ಯಮಟ್ಟದ ಛಾಯಚಿತ್ರ ಸ್ಪರ್ಧೆ ಫಲಿತಾಂಶ ಪ್ರಕಟ
ಕೊಪ್ಪಳ: ನಗರದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ತಾಲೂಕು ಫೋಟೋ ಮತ್ತು ವೀಡಿಯೋಗ್ರಾಫರ್ ಅಸೋಶಿಯೇಶನ್ ಹಾಗೂ ಗವಿಮಠದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಥಮ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಬಾಗಲಕೋಟೆಯ ಇಂದ್ರಕುಮಾರ ದಸ್ತೇನವರ ಪ್ರಥಮ ಬಹುಮಾನ ಪಡೆದಿದ್ದಾರೆ. ಸ್ಪರ್ಧೆಗೆ ಬಂದಂತಹ ಫೋಟೋಗಳನ್ನು ಗವಿಮಠ ಶ್ರೀಗಳ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಿದೆ. ಬೆಳಗಾವಿ ಮಲ್ಲಿಕಾರ್ಜುನ ಶಂಕರ ದಾನನ್ನವರ ದ್ವಿತೀಯ ಬಹುಮಾನ ಹಾಗೂ ಲಿಂಗಸೂರಿನ ಚನ್ನಬಸವ ಹಿರೇಮಠ ತೃತೀಯ ಬಹುಮಾನ ಪಡೆದಿದ್ದಾರೆ. ಹೊಸಪೇಟೆಯ ಜಗದೀಶ ಕೆ.ಎಂ., ಬಾಗಲಕೋಟೆಯ ಸಿಂಧೂರ್ ಎಸ್. ಜಮಖಂಡಿ, ಗದಗಿನ ಶ್ರೀನಿವಾಸ ಸಮಾಧಾನಕರ ಬಹುಮಾನ ಪಡೆದಿದ್ದಾರೆ. ಮಾ. 11ರಂದು ಸಂಜೆ 6ಕ್ಕೆ ನಡೆಯುವ ಬೆಳಕಿನೆಡೆಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.
11ರಂದು ಬೆಳಕಿನೆಡೆಗೆ ಕಾರ್ಯಕ್ರಮ
ಕೊಪ್ಪಳ: ನಗರದ ಸಂಸ್ಥಾನ ಶ್ರೀ ಗವಿಮಠದ ಆವರಣದಲ್ಲಿ ಮಾ. 11ರ ಅಮವಾಸ್ಯೆಯ ದಿನದಂದು 42ನೇ ಬೆಳಕಿನೆಡೆಗೆ ಹಾಗೂ ಸಂಗೀತ ಕಾರ್ಯಕ್ರಮ ಜರುಗಲಿದೆ. ಹುಬ್ಬಳ್ಳಿಯ ಜಾರ್ಟರ್ಡ್ ಅಕೌಂಟೆಂಟ್ ನಟರಾಜ ಎಂ. ಭಾಗವಹಿಸಲಿದ್ದಾರೆ. ಜಿಪಂ ಸಿಇಓ ಡಿ.ಕೆ. ರವಿ ಉಪಸ್ಥಿತರಿರಲಿದ್ದು, ಹೊಸಪೇಟೆಯ ಪದ್ಮಜಾ ಶ್ಯಾಮಸುಂದರ ಅವರಿಂದ ಸಂಗೀತ ಸೇವೆ ಜರುಗಲಿದೆ. ಲಕ್ಮೀಬಾಯಿ ಶಂಕರಪ್ಪ ಪಾಟೀಲ್ ಸ್ಮರಣಾರ್ಥ ಅಧ್ಯಾಪಕ ಡಾ. ಜೆ.ಎಸ್. ಪಾಟೀಲ್ ಭಕ್ತಿ ಸೇವೆ ನೆರವೇರಿಸಲಿದ್ದಾರೆ.
ಶಿಕ್ಷಕ ದೇವಪ್ಪ ನಿಧನ
ಯಲಬುರ್ಗಾ: ತಾಲೂಕಿನ ತಲ್ಲೂರು ಗ್ರಾಮದ ಶಿಕ್ಷಕ ದೇವಪ್ಪ ಪೊಲೀಸ್ ಪಾಟೀಲ (45) ಗುರುವಾರ ಮಧ್ಯಾಹ್ನ ಅನಾರೋಗ್ಯದಿಂದ ನಿಧನರಾದರು. ಮೃತರಿಗೆ ಓರ್ವ ಪುತ್ರಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸ್ವಗ್ರಾಮವಾದ ತಲ್ಲೂರಿನಲ್ಲಿ ಶುಕ್ರವಾರ ನೇರವೇರಿತು.
ಸಂತಾಪ: ಶಾಸಕ ಈಶಣ್ಣ ಗುಳಗಣ್ಣವರ್, ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಮಾಜಿ ಶಾಸಕ ಬಸವರಾಜ ರಾಯರಡ್ಡಿ, ಶಿವಶರಣಪ್ಪಗೌಡ ಪಾಟೀಲ, ರಾಮಣ್ಣ ಸಾಲಬಾವಿ, ಗದ್ದೆಪ್ಪ ಕುಡಗುಂಟಿ, ಉಪನ್ಯಾಸಕ ಎಚ್.ಎಸ್. ದೇವರಮನಿ, ವೀರನಗೌಡ ಬಳೂಟಗಿ, ಬಿ.ಎಂ. ಶಿರೂರು, ಸಿ.ಎಚ್. ಪಾಟೀಲ ಸಂತಾಪ ಸೂಚಿಸಿದ್ದಾರೆ.
ಕ್ಷೇತ್ರ, ಜನರ ಸೇವೆಗೆ ಸಿದ್ಧ: ತಂಗಡಗಿ
ಕನಕಗಿರಿ: ಕ್ಷೇತ್ರ, ಜನರ ಸೇವೆಗೆ ಸದಾ ಸಿದ್ಧ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದರು. ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜದ ಪಾಂಡುರಂಗ ದೇವಸ್ಥಾನದ ಭೋಜನಾಲಯ ಮತ್ತು ಮೊದಲನೇ ಮಹಡಿ ಅಡಿಗಲ್ಲು ಸಮಾರಂಭದ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು.
ಈ ಮೊದಲು ವಿಶೇಷ ಅನುದಾನದಲ್ಲಿ ದೇವಸ್ಥಾನದ ನೂತನ ಕಟ್ಟಡಕ್ಕೆ ಮತ್ತು ಅಭಿವೃದ್ಧಿಗೆ ರು. 5 ಲಕ್ಷ ನೀಡಲಾಗಿತ್ತು. ಇತ್ತೀಚಿಗೆ ರಾಜ್ಯ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸಮಾಜಕ್ಕೆ ಸಮುದಾಯ ಭವನ ನಿರ್ಮಿಸಲು ರು. 50 ಲಕ್ಷ ಮಂಜೂರು ಮಾಡಲಾಗಿದೆ ಎಂದರು.
ಬಳಿಕ ಸಮಾಜದ ಅಧ್ಯಕ್ಷ ಅಂಬಾಜೀರಾವ್ ಬೊಂದಾಡೆ ಪ್ರಾಸ್ತಾವಿಕ ಮಾತನಾಡಿ, ರಾಜ್ಯ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸರ್ಕಾರಿ ಸೌಲಭ್ಯಗಳನ್ನು ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಡಾ. ಚನ್ನಮಲ್ಲ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಿಪಂ ಸದಸ್ಯ ಗಂಗಣ್ಣ ಸಮಗಂಡಿ, ರಾಜ್ಯ ಕೈಗಾರಿಕಾ ಬ್ಯಾಂಕಿನ ಅಧ್ಯಕ್ಷ ಶೇಖರಗೌಡ, ತಾಪಂ ಸದಸ್ಯ ಹೊನ್ನುರುಸಾಬ, ಸರ್ವಮಂಗಳ ಭೂಸನೂರುಮಠ, ಗ್ರಾಪಂ ಅಧ್ಯಕ್ಷೆ ರಂಗಮ್ಮ ನಾಯಕ್, ಉಪಾಧ್ಯಕ್ಷ ಪ್ರಕಾಶ ಹಾದಿಮನಿ, ಗ್ರಾಪಂ ಸದಸ್ಯ ನಾಗರಾಜ ಬೊಂದಾಡೆ, ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ, ಮುಖಂಡ ಸಿದ್ದಪ್ಪ ನೀರಲೂಟಿ, ನೂರಸಾಬ್ ಗಡ್ಡಿಗಾಲ, ಕೃಷ್ಣೇಗೌಡ ಸಮಾಜದ ಮುಖಂಡ ಅನಂತಪ್ಪ ಧಾಯಿಪಲ್ಲೆ, ಸಂತರಾಂ ಲೋಕರೆ, ಯಮನೂರಪ್ಪ ಬೊಂದಾಡೆ, ವಿಠಲ್ ಜಾಧವ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಮತದಾನ ಮುಗೀತು: ಬೆಟ್ಟಿಂಗ್ ಶುರು
ಕೊಪ್ಪಳ ನಗರದಲ್ಲಿ 3ನೇ ವಾರ್ಡಿನ ಫಲಿತಾಂಶವನ್ನು ಇಡೀ ನಗರದ ಜನರು ಕುತೂಹಲದಿಂದ ಎದುರು ನೋಡುವಂತಾಗಿದೆ. ನಗರದಲ್ಲಿಯೇ ಅತ್ಯಂತ ದೊಡ್ಡ ವಾರ್ಡ್ ಆಗಿರುವ ಇಲ್ಲಿ ಚಂದ್ರು ಕವಲೂರ ಪರವಾಗಿ ಬೆಟ್ಟಿಂಗ್ ಕಟ್ಟುವವರ ಸಂಖ್ಯೆ ಅಪಾರವಾಗಿದೆ. ಇಲ್ಲೀಗ ಚಂದ್ರು ಫುಲ್ ರೇಸ್ನಲ್ಲಿರುವ ಕುದುರೆಯಾಗಿದ್ದಾರೆ.
ಕಳೆದ ಸಾರಿ ಅಧ್ಯಕ್ಷರಾಗಿದ್ದ ಚಂದ್ರ ಕವಲೂರು ಹಾಗೂ ಉಪಾಧ್ಯಕ್ಷರಾಗಿದ್ದ ಅಮ್ಜಾದ್ ಪಟೇಲ್ ನಡುವೆ ಯುದ್ಧದಂತೆ ಚುನಾವಣೆ ನಡೆದಿದೆ. ಇಲ್ಲಿ ಎಲ್ಲವೂ ಎಲ್ಲೇ ಮೀರಿಯೇ ಆಗಿರುವುದರಿಂದ ಬೆಟ್ಟಿಂಗ್ ಕೂಡಾ ಅಷ್ಟೇ ಜೋರಾಗಿದೆ.
ಇನ್ನು ಪಕ್ಷೇತರ ಅಭ್ಯರ್ಥಿಗಳಲ್ಲಿ ಭಾರಿ ಗದ್ದಲ ಎಬ್ಬಿಸಿರುವವರು ವಿಜಯಾ ಹಿರೇಮಠ ಹಾಗೂ ಮಹಿಂದ್ರ ಚೋಪ್ರಾ ಅವರು. ಇವರ ಸೋತರೆ ಡಬಲ್ ಹಣ ನೀಡುವ ಆಫರ್ನ್ನು ಬುಕ್ಕಿಗಳು ಮುಂದಿಟ್ಟಿದ್ದಾರೆ. ಕಾರಣ, ಇವರು ಗೆದ್ದೇ ಗೆಲ್ಲುತ್ತಾರೆ ಎಂದೇ ಅಪಾರ ಸಂಖ್ಯೆಯಲ್ಲಿ ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ವೀರಣ್ಣ ಹಂಚಿನಾಳ್ ಅವರು ಹೆಸರು ಪ್ರಬಲವಾಗಿದೆ.
ಯೋಗದಿಂದ ಶಾಂತಿ ಸಾಧ್ಯ: ಸ್ವಾಮೀಜಿ
ಗದಗ: ಧೂಮಪಾನ, ಮದ್ಯಪಾನದಿಂದ ಮುಕ್ತಿ ಹೊಂದಿ, ಕೋಪ, ಉದ್ವೇಗ ನಿವಾರಿಸಿ ಮನಃಶಾಂತಿ, ಸಿದ್ಧ ಸಮಾಧಿ ಯೋಗದಿಂದ ಮಾತ್ರ ಸಾಧ್ಯ. ಯೋಗಜ್ಞಾನದಿಂದ ಚಿತ್ತಶುದ್ಧಿ ಎಂದು ಆಚಾರ್ಯ ಮೃತ್ಯುಂಜಯ ಶ್ರೀಗಳು ಹೇಳಿದರು. ಈಚೆಗೆ ಅವರು ನಗರದ ಮುಳಗುಂದ ನಾಕಾದಲ್ಲಿರುವ ಅಡವೀಂದ್ರ ಶ್ರೀಗಳ ಮಠದ ಅನ್ನಪೂರ್ಣೇಶ್ವರಿ ಮಂದಿರದಲ್ಲಿ ಋಷಿ ಸಂಸ್ಕೃತಿ ವಿದ್ಯಾಕೇಂದ್ರ ಗದಗ ಜಿಲ್ಲಾ ಘಟಕದ ನೇತೃತ್ವದಲ್ಲಿ ಜರುಗಿದ 209ನೇ ಮಾಸಿಕ ಶಿವಾನುಭವಗೋಷ್ಟಿಯಲ್ಲಿ ಉಪನ್ಯಾಸ ನೀಡಿದರು. ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಅನ್ನದಾನ ಹಿರೇಮಠ ಮಾತನಾಡಿ, ಸಂಸ್ಕಾರಯುತ ಶರೀರ ಒಂದು ಧರ್ಮವಿದ್ದಂತೆ. ಯೋಗಜ್ಞಾನ ಪಡೆದು ಈ ನಮ್ಮ ಶರೀರವನ್ನು ರಕ್ಷಿಸಿ ಆರೋಗ್ಯ, ಆಯುಷ್ಯವುಳ್ಳವರಾಗಬೇಕು ಎಂದರು. ಹಂಪಿ ಕನ್ನಡ ವಿವಿಯಲ್ಲಿ ಪಿಎಚ್.ಡಿ. ಪದವಿ ಪುರಸ್ಕೃತ ಡಾ. ಬಿ.ಎಲ್. ಚವ್ಹಾಣರನ್ನು ಸನ್ಮಾನಿಸಲಾಯಿತು. ಅಕ್ಕಮ್ಮ ಗುರುಸ್ವಾಮಿಮಠ ಹಾಗೂ ಪಾಂಡುರಂಗ ಕುರ್ತಕೋಟಿಯವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಅಧ್ಯಕ್ಷತೆಯನ್ನು ಬಿ.ಎಂ. ಬಿಳೆಯಲಿ ವಹಿಸಿದ್ದರು. ಬಿ.ಬಿ.ಕೊನ್ನವರ, ಪ್ರತಾಪ ಬಹುರೂಪಿ, ಪ್ರೊ. ಕೆ.ಎಸ್.ಪತ್ತಾರ ಮುಂತಾದವರು ಉಪಸ್ಥಿತರಿದ್ದರು. ಪ್ರೊ. ವಿ.ಎಂ.ಕುಂದ್ರಾಳಹಿರೇಮಠ ಸ್ವಾಗತಿಸಿದರು. ಎಂ.ಎಂ.ಜೋಗಿನ ನಿರೂಪಿಸಿದರು.
ಜೀವಿಗಳಿಗೆ ರಾಸಾಯನಿಕ ಅಮೂಲ್ಯ: ಡಾ. ಸಂಗೀತಾ ಕುಲಕರ್ಣಿ
ಗದಗ: ಪ್ರಪಂಚದ ಸರ್ವ ಜೀವರಾಶಿಗಳ ಬದುಕಿಗೆ ನಿಸರ್ಗದಲ್ಲಿ ದೊರೆಯುವ ರಾಸಾಯನಿಕಗಳು ಅತ್ಯಮೂಲ್ಯವಾಗಿವೆ ಎಂದು ಮುಂಡರಗಿಯ ಜ. ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಸಾಯನಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ. ಸಂಗೀತಾ ಕುಲಕರ್ಣಿ ಹೇಳಿದರು. ಇತ್ತೀಚೆಗೆ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶದಡಿಯಲ್ಲಿ ದಿನ ಬಳಕೆಯಲ್ಲಿ ರಾಸಾಯನಿಕಗಳು ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಶಿವಪ್ಪ ಕುರಿ ಮಾತನಾಡಿ, ಇಂದು ಅಪೌಷ್ಟಿಕಾಂಶಗಳಿಂದ ಜನ ಬಳಲುತ್ತಿದ್ದು, ಗುಣಮಟ್ಟದ ಆಹಾರ ಸೇವಿಸಿ ಸದೃಢತೆ ಹೊಂದಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ರಾಸಾಯನಶಾಸ್ತ್ರದ ಅಧ್ಯಾಪಕ ಡಾ. ರಘುನಾಥ ಹೊಸಮನಿ ಉಪನ್ಯಾಸ ನೀಡಿದರು. ಗಣಿತಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ರಂಜನಾ ಭಂಡಾರೆ ಪ್ರಾಸ್ತಾವಿಕ ಮಾತನಾಡಿದರು. ಸಮಾಜಶಾಸ್ತ್ರ ಪ್ರಾಧ್ಯಾಪಕಿ ಪ್ರೊ. ಸವಿತಾ ಪಾಟೀಲ ರಾಸಾಯನಿಕಗಳ ಮಹತ್ವ ತಿಳಿಸಿದರು. ಪ್ರಾಧ್ಯಾಪಕ ಪ್ರೊ. ಎಫ್.ಬಿ. ಆನಿ, ಮಂಜುನಾಥ ಹೂಲಗೇರಿ, ಬಿ.ವೈ. ಆಲೂರು, ಇತರರು ಪಾಲ್ಗೊಂಡಿದ್ದರು. ಸುನಿತಾ ಉಮಚಗಿ ಪ್ರಾರ್ಥಿಸಿದರು. ಪಲ್ಲವಿ ದುರ್ಗಣ್ಣವರ ಸ್ವಾಗತಿಸಿದರು. ವಿಠ್ಠಲ್ ನಿಂಬನಾಯ್ಕರ ನಿರೂಪಿಸಿ, ವಂದಿಸಿದರು.