ಪರೀಕ್ಷೆ ವೇಳೆ ಬದಲಾದೀತೆ ಲೋಡ್ ಶೆಡ್ಡಿಂಗ್?
ಮಾ. 13ರಂದು ಜಿಲ್ಲಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಲಿವೆ. ಜಿಲ್ಲಾಡಳಿತ ಪರೀಕ್ಷೆಗೆ ಬೇಕಾದ ಎಲ್ಲ ತಯಾರಿ ಮಾಡುತ್ತಲಿದೆ. ಆದರೆ, ವಿದ್ಯುತ್ ಸಮಸ್ಯೆ ಮುಂದವರಿದಿದ್ದು, ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ.
ಪ್ರಸಕ್ತ ಸಾಲಿನಲ್ಲಿ ಜಿಲ್ಲಾದ್ಯಂತ ಒಟ್ಟಾರೆ 9219 ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ ಪ್ರಮುಖವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚು. ಇನ್ನು ಏಪ್ರಿಲ್ ಮೊದಲ ವಾರದಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ ಪ್ರಾರಂಭವಾಗಲಿದ್ದು, ಅವರೂ ತಯಾರಿಯಲ್ಲಿ ತೊಡಗಿದ್ದಾರೆ.
ಹೆಚ್ಚಿದ ಲೋಡ್ ಶೆಡ್ಡಿಂಗ್: ಈ ಬಾರಿ ಅಧಿಕ ಬಿಸಿಲಿದ್ದು, ಜೊತೆಗೆ ವಿದ್ಯುತ್ತಿನ ಸಮಸ್ಯೆ ಕಾಡುತ್ತಿದೆ. ನಗರ ಪ್ರದೇಶದಲ್ಲಿ ಪ್ರತಿಭಟನೆ, ಹೋರಾಟ ನಡೆದ ಪರಿಣಾಮ ನಿಗದಿತ ಅವಧಿಯಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಆದರೂ, ರಾತ್ರಿ ವಿದ್ಯಾರ್ಥಿಗಳು ಅಭ್ಯಾಸಕ್ಕೆ ಕುಳಿತುಕೊಳ್ಳುವ ಸಮಯದಲ್ಲೇ ಒಂದೆರಡು ಗಂಟೆ ಲೋಡ್ಶೆಡ್ಡಿಂಗ್ ಮಾಡಲಾಗುತ್ತದೆ. ಇನ್ನು ಗ್ರಾಮೀಣ ಪ್ರದೇಶದಲ್ಲಂತೂ ಹೇಳೋರು ಇಲ್ಲ, ಕೇಳೋರು ಇಲ್ಲ ಎನ್ನುವಂತಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಗಾಳಿ ಬೀಸಿದರೂ ಪವರ್ ಕಟ್. ಮೋಡ ಕವಿದರೂ ವಿದ್ಯುತ್ತಿನ ಕಣ್ಣಾಮುಚ್ಚಾಲೆ ಆರಂಭವಾಗುತ್ತದೆ. ಪರೀಕ್ಷೆ ವೇಳೆಯಾದರೂ ಜೆಸ್ಕಾಂ ಲೋಡ್ ಶೆಡ್ಡಿಂಗ್ ವೇಳೆಯಲ್ಲಿ ಬದಲಾವಣೆ ಮಾಡಿ ವಿದ್ಯಾರ್ಥಿಗಳ ಓದಿಗೆ ಸಹಕರಿಸಬೇಕಿದೆ.