ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಫಲಿತಾಂಶಕ್ಕೆ ಕ್ಷಣಗಣನೆ: ಶಿವಕೃಪೆ ಯಾರಿಗೆ?

Srinivasa Murthy VN
Updated On : 11 Mar 2013, 2:49 am

ಕನ್ನಡಪ್ರಭ ವಾರ್ತೆ, ರೋಣ, ಮಾ. 10  
ತೀವ್ರ ಕುತೂಹಲ ಮೂಡಿಸಿದ್ದ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಕ್ಷಣಗಣನೆ ಆರಂಭವಾಗಿದ್ದು,  ವಿಜಯಲಕ್ಷ್ಮೀ ಯಾರ ಕೊರಳಿಗೆ ಮಾಲೆ ಹಾಕುತ್ತಾಳೆ ಎಂಬುದು ಸೋಮವಾರ ಗೊತ್ತಾಗಲಿದೆ.
ರೋಣ ಪುರಸಭೆಯ 23 ವಾರ್ಡ್‌ಗಳಿಗೆ ಕಾಂಗ್ರೆಸ್, ಬಿಜೆಪಿ ತಲಾ 23, ಕೆಜಿಪಿ, ಬಿಎಸ್‌ಆರ್ ತಲಾ 5, 7 ಜೆಡಿಎಸ್ ಹಾಗೂ 4 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 67 ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.  ಮಾ. 11ರಂದು ಬೆಳಗ್ಗೆ 8 ಗಂಟೆಗೆ ಪಟ್ಟಣದ ಸರ್ಕಾರಿ ಪಪೂ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.  ಅಭ್ಯರ್ಥಿ ಮತ್ತು ಪ್ರಮುಖ ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದು, ಮತದಾರರ ಯಾದಿಯನ್ನು ಹಿಡಿದುಕೊಂಡು ಓಟುಗಳ ವಿಂಗಡನೆ ಮಾಡಿ ಇಂತಿಷ್ಟು ನಮಗೆ, ಇಂತಿಷ್ಟು ಅವರಿಗೆ ಎಂದು ಲೆಕ್ಕಾಚಾರ ಹಾಕುತ್ತಾ ಗೆಲುವಿನ ಕನಸು ಕಾಣುತ್ತಿದ್ದಾರೆ.
ಕಾಂಗ್ರೆಸ್ ಮತ್ತೆ ಗದ್ದುಗೆ ಏರುತ್ತಾ?
ರೋಣ ಪುರಸಭೆಯು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ 23 ವಾರ್ಡ್‌ಗಳಲ್ಲಿ 18 ವಾರ್ಡ್ ತನ್ನದಾಗಿಸಿಕೊಂಡಿತ್ತು. ಆದರೆ, ಬಿಜೆಪಿ ಮಾತ್ರ 5 ವಾರ್ಡ್‌ಗಳಲ್ಲಿ ಗೆಲುವು ಕಂಡಿತ್ತು. ಈ ಸಾರಿ ಬಿಜೆಪಿ ಕಾಂಗ್ರೆಸ್‌ನ ಇತಿಹಾಸ ಮುರಿಯಲು ತವಕಿಸುತ್ತಿದೆ.
ಶಿವರಾತ್ರಿ ಪಾರ್ಥನೆ
ಸದ್ಯ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದ್ದು, ಗೆಲುವು ನಮ್ಮದಾಗಲಿ, ದೇವರ ಆಶೀರ್ವಾದ ನಮಗಿರಲಿ ಎಂದು ಶಿವರಾತ್ರಿ (ಭಾನುವಾರ) ಉಪವಾಸವಿದ್ದು, ದಿನ ಪೂರ್ತಿ ದೇವಸ್ಥಾನದಲ್ಲಿಯೇ ಕಾಲ ಕಳೆದಿದ್ದಾರೆ. ದೇವರಿಗೆ ವಿವಿಧ ರೀತಿಯ ಪ್ರಾರ್ಥನೆ, ಪೂಜೆ ಮಾಡಿಸಿದ್ದಾರೆ.

ಎಲ್ಲರ ಚಿತ್ತ ಪುರಸಭೆ ಫಲಿತಾಂಶದತ್ತ
ಕನ್ನಡಪ್ರಭ ವಾರ್ತೆ, ಮುಂಡರಗಿ, ಮಾ. 10
ಮುಂಡರಗಿಯ ಪುರಸಭೆ 23 ವಾರ್ಡುಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ಪಟ್ಟಣದ 23 ವಾರ್ಡ್‌ಗಳಲ್ಲಿ ಪಟ್ಟ ಎಲ್ಲರ ಚಿತ್ತ 21ನೇ ವಾರ್ಡ್‌ನತ್ತ ಕೇಂದ್ರೀಕೃತವಾಗಿರುವುದು ವಿಶೇಷ.
ಪುರಸಭೆಯ 23 ವಾರ್ಡ್‌ಗಳಿಗಾಗಿ ಒಟ್ಟು 105 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿ ಉಳಿದಿದ್ದರು. ಪಟ್ಟಣದ 23 ವಾರ್ಡ್‌ಗಳಲ್ಲಿ 21, 5, 17, 18, 22ನೇ ವಾರ್ಡಿನತ್ತ ಇಡೀ ಮುಂಡರಗಿ ಜನತೆ ಚಿತ್ತವಿಟ್ಟಿದ್ದಾರೆ.
ವಾರ್ಡ್ 21ರಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಆನಂದಗೌಡ ಪಾಟೀಲರ ಸಹೋದರ ಲಿಂಗರಾಜಗೌಡ ಪಾಟೀಲ ಕಾಂಗ್ರೆಸ್, ಬಿಜೆಪಿಯಿಂದ ಮೈನುದ್ದೀನ್ ವಡ್ಡಟ್ಟಿ, ಬಿಎಸ್‌ಆರ್ ಕಾಂಗ್ರೆಸ್‌ನಿಂದ ಸೋನಿ, ಜೆಡಿಎಸ್ ಪಕ್ಷದಿಂದ ಶಂಕರ ಉಳ್ಳಾಗಡ್ಡಿ, ಕೆಜೆಪಿಯಿಂದ ನ್ಯಾಯವಾದಿ ಎಸ್.ಜಿ. ಪುರದ ಸೇರಿದಂತೆ 5 ಅಭ್ಯರ್ಥಿಗಳು ಸ್ಪರ್ಧೆಯನ್ನು ಎದುರಿಸಿದ್ದು, ಇಲ್ಲಿ ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿನಡೆದಿದೆ.
ವಾರ್ಡ್ ನಂ. 5ರಲ್ಲಿ ಬಿಜೆಪಿಯಿಂದ ಹಿರಿಯ ಮುಖಂಡ ಬಸಪ್ಪ ಬನ್ನಿಕೊಪ್ಪ, ಕಾಂಗ್ರೆಸ್ಸಿನಿಂದ ಬಸವರಾಜ ರಾಮೇನಹಳ್ಳಿ ಮಧ್ಯ ಚುನಾವಣೆ ಜರುಗಿದೆ. ವಾರ್ಡ್ ನಂ. 17ರಲ್ಲಿ ಮಾಜಿ ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ದೇಸಾಯಿ ಬಿಜೆಪಿ, ಬಿಎಸ್‌ಆರ್ ಪಕ್ಷದ ಕವಿತಾ ಬಾರಕೇರ ಹಾಗೂ ಕಾಂಗ್ರೆಸ್ಸಿನ ಪಾಟೀಲ ಮಧ್ಯದಲ್ಲಿ ಸ್ಪರ್ಧೆ ಏರ್ಪಟ್ಟಿದ್ದು, ರಜನೀಕಾಂತ ದೇಸಾಯಿ ಶಹರ ಬಿಜೆಪಿ ಅಧ್ಯಕ್ಷರಾಗಿದ್ದು, ಅವರಿಗೆ ಇದು ಪ್ರತಿಷ್ಠೆಯ ಕ್ಷೇತ್ರವಾಗಿದೆ.

ನರಗುಂದ: ಹೆಚ್ಚಿದ ಆತಂಕ
ನರಗುಂದ: ಸ್ಥಳೀಯ ಸಂಸ್ಥೆಯ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಲಿದ್ದು, ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಹಾಲಿ ಮತ್ತು ಮಾಜಿ ಶಾಸಕರು ಹೆಚ್ಚಿನ ಆತಂಕದಲ್ಲಿಯೇ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ.
 ಈ ಬಾರಿ ಪುರಸಭೆಯ 23 ವಾರ್ಡ್‌ಗಳಿಗೆ ಬಿಜೆಪಿ, ಕಾಂಗ್ರೆಸ್, ಬಿಎಸ್‌ಆರ್ ಕಾಂಗ್ರೆಸ್, ಜೆಡಿಎಸ್, ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಬಿಗಿ ಭದ್ರತೆಯಲ್ಲಿ ಮತ ಎಣಿಕೆ
ರೋಣ ಮತ್ತು ಗಜೇಂದ್ರಗಡ ಪುರಸಭೆಯ 23 ವಾರ್ಡ್‌ಗಳು ಹಾಗೂ ನರೇಗಲ್ ಪಪಂನ 17 ವಾರ್ಡ್‌ಗಳ ಮತ ಎಣಿಕೆಯ ಕಾರ್ಯ ರೋಣ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ನಡೆಯಲಿದೆ. ಎಣಿಕೆ ಕಾರ್ಯಕ್ಕೆ 3 ಕೋಣೆಗಳು, 12 ಟೇಬಲ್, 3 ಮೀಸಲು ಟೇಬಲ್, 30 ಎಣಿಕೆ ಸಿಬ್ಬಂದಿ, ಮತಯಂತ್ರ ಪೆಟ್ಟಿಗೆ ತರಲು 30  ಸಿಬ್ಬಂದಿ, 6 ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಮತ ಎಣಿಕೆ ಸ್ಥಳದಿಂದ ಸುತ್ತಲೂ 200 ಮೀಟರ್ ನಿಷೇಧಿತ ಪ್ರದೇಶ ಎಂದು ಗುರ್ತಿಸಲಾಗಿದೆ. ಅಭ್ಯರ್ಥಿ ಮತ್ತು ಏಜೆಂಟರ್‌ಗೆ ಮಾತ್ರ ಪ್ರವೇಶ. ಗುರುತಿನ ಚೀಟಿ ಕಡ್ಡಾಯವಾಗಿದೆ. ಎಣಿಕೆ ಪ್ರಕ್ರಿಯೆ ಸುವ್ಯವಸ್ಥಿತವಾಗಿ ನಡೆಯಲು ಅಗತ್ಯ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
                - ಎಸ್.ಆರ್.ಕಡಿವಾಲ, ರೋಣ ತಹಸೀಲ್ದಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement