ಇಂದಿನಿಂದ ಪಿಯುಸಿ ಪರೀಕ್ಷೆ
ಗದಗ: ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ. 13ರಿಂದ 28ರ ವರೆಗೆ ಜರುಗುವವು. ಜಿಲ್ಲೆಯಲ್ಲಿ ಒಟ್ಟು 22 ಪರೀಕ್ಷಾ ಕೇಂದ್ರಗಳನ್ನು ನಿಗದಿಗೊಳಿಸಲಾಗಿದೆ. ಒಟ್ಟು 86 ಕಾಲೇಜುಗಳನ್ನು ಈ ಪರೀಕ್ಷಾ ಕೇಂದ್ರಗಳಿಗೆ ನಿಯೋಜಿಸಲಾಗಿದೆ. ಒಟ್ಟು 12,552 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅದರಲ್ಲಿ 8902 ವಿದ್ಯಾರ್ಥಿಗಳು ಹೊಸದಾಗಿ, 2991 ವಿದ್ಯಾರ್ಥಿಗಳು ಪುನರಾವರ್ತನೆ ಹಾಗೂ 659 ಖಾಸಗಿ ಅಭ್ಯರ್ಥಿಗಳಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಪರೀಕ್ಷೆಗಳು ಬೆಳಗ್ಗೆ 9ರಿಂದ ಸಂಜೆ 5.15ರ ವರೆಗೆ ನಡೆಯಲಿವೆ. ನಕಲು ಮಾಡುವುದು, ಬೇರೆಯವರು ಪರೀಕ್ಷೆಗೆ ಹಾಜರಾಗುವುದು ಮುಂತಾದ ಅವ್ಯವಹಾರ ತಡೆಗಟ್ಟಲು ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಶಿಸ್ತು, ಶಾಂತಿ, ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರದಿಂದ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವನ್ನಾಗಿ ಘೋಷಿಸಲಾಗಿದೆ. ಈ ವ್ಯಾಪ್ತಿಯ ಝರಾಕ್ಸ್ ಅಂಗಡಿ, ಬುಕ್ಸ್ಟಾಲ್, ಫೋಟೋ ಕಾಪಿಯರ್ಗಳನ್ನು ಬಂದ್ ಮಾಡಲು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿ ಪಾಂಡುರಂಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಹುಡ್ಕೋ ನಗರದ ಉಳಿದ ಭಾಗ, ಸಿದ್ರಾಮೇಶ್ವರ ನಗರ, ಖಾಜಿಯವರ ಲೈನ್, ಜಯಶ್ರೀ ಪವಾರ್ ಲೈನ್, ಬ್ಯಾಂಕರ್ಸ್ ಕಾಲನಿ, ಕಾರವರ ಓಣಿ, ಸೋನಾಬಾಯಿಯವರ ಲೈನ್, ಗಡ್ಡಿಯವರ ಲೈನ್, ರಾಧಾಕೃಷ್ಣ ನಗರದ ಉಳಿದ ಭಾಗ, ಲೋದಿಯವರ ಲೈನ್ ಈ ಭಾಗಗಳಲ್ಲಿ ಬುಧವಾರ ತುಂಗಭದ್ರಾ ನದಿನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಅಬಕಾರಿ ದಾಳಿ: 20 ಲೀ. ಕಳ್ಳಬಟ್ಟಿ ವಶ
ರೋಣ: ತಾಲೂಕಿನ ನೆಲ್ಲೂರ ತಾಂಡಾದಲ್ಲಿ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು ರು. 4 ಸಾವಿರ ಮೌಲ್ಯದ 20 ಲೀ. ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಸಾರಾಯಿ ಮಾರುತ್ತಿದ್ದ ಭೀಮಪ್ಪ ಚಂದ್ರಪ್ಪ ಲಮಾಣಿ ಮತ್ತು ಹೊಳೆಪ್ಪ (ಪುಟಾಣಿ) ಚಂದ್ರಪ್ಪ ಲಮಾಣಿ ಎಂಬುವರನ್ನು ಬಂಧಿಸಿ, ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ರೋಣ ಅಬಕಾರಿ ನಿರೀಕ್ಷಕ ಎ.ಬಿ. ಮಠಪತಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.
ಭಕ್ತಾಮರ ಸ್ತೋತ್ರ ಅಪ್ರತಿಮ: ಮುತ್ತಿನ
ಗದಗ: ಜೈನ ಧರ್ಮ ಅಹಿಂಸೆಯ ಪ್ರತೀಕವಾಗಿದ್ದು, ಭಕ್ತಾಮರ ಸ್ತೋತ್ರ ಅಪ್ರತಿಮವಾಗಿವೆ ಎಂದು ಅರ್ಪಿತಾ ಮುತ್ತಿನ ಅಭಿಪ್ರಾಯ ಪಟ್ಟರು. ಸ್ಥಳೀಯ ಹುಡ್ಕೋ ಕಾಲನಿಯ ಹೊಸಮನಿ ಅವರ ನಿವಾಸದಲ್ಲಿ ಗದಗ ಜಿಲ್ಲಾ ದಿಗಂಬರ ಜೈನ ಸಂಘದ ವತಿಯಿಂದ ಏರ್ಪಡಿಸಿದ್ದ ಧಾರ್ಮಿಕ ಚಿಂತನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿ ಭಕ್ತಾಮರ ಸ್ತೋತ್ರ ಕುರಿತು ಉಪನ್ಯಾಸ ನೀಡಿದರು. ಸತ್ಯ, ಧರ್ಮ, ನ್ಯಾಯ, ನೀತಿ, ಅಹಿಂಸೆ ತತ್ವಗಳನ್ನು ಒಳಗೊಂಡ ಭಕ್ತಾಮರ ಸ್ತೋತ್ರದ ಪ್ರತಿಯೊಂದು ಪದವೂ ವಿಶಿಷ್ಟವಾಗಿದೆ ಎಂದರು.
ಪಾರ್ಶ್ವನಾಥ ಹಾವೇರಿ, ಜೈನ ಧರ್ಮದ ತತ್ವ ಹಾಗೂ ಉಪದೇಶ ಕುರಿತು ಮಾತನಾಡಿದರು. ಸರೋಜಿನಿ ನಾವಳ್ಳಿ ಹಾಗೂ ಅನಂತರಾಜ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಪಿಡ್ಡಿ, ಅಶ್ವಿನಿ ಪಾಟೀಲ, ಲಲಿತಕ್ಕ ಕಾಸರ, ಗೋವಿಂದ, ಮನೋಜ ಹೊಸಮನಿ ಉಪಸ್ಥಿತರಿದ್ದರು. ಸುಮನ್ ಮುತ್ತಿನ, ಶಿಲ್ಪಾ ಹೊಸಮನಿ ಜೀನ ಭಕ್ತಿಗೀತೆಗಳನ್ನು ಪ್ರಸ್ತುತ ಪಡಿಸಿದರು. ಪ್ರಕಾಶ ಮುತ್ತಿನ ಸ್ವಾಗತಿಸಿದರು. ಧಾರ್ಮಿಕ ಚಿಂತನ ಮಾಲಿಕೆಯ ಸಂಚಾಲಕ ಪಿ.ಎ. ಕುಲಕರ್ಣಿ ನಿರೂಪಿಸಿದರು. ಲಕ್ಷ್ಮೀಬಾಯಿ ಹೊಸಮನಿ ವಂದಿಸಿದರು.