ಗದಗದಲ್ಲಿ ಇಂದಿರಾ ಆವಾಸ್ ಚೆಕ್ ಬೌನ್ಸ್
ಆಡಳಿತಾರೂಢ ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ರಾಜ್ಯವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಘೋಷಣೆ ಮಾಡಿತ್ತು.
ಕ.ಪ್ರ. ವಾರ್ತೆ, ಗದಗ, ಮಾ.22-
ಆಡಳಿತಾರೂಢ ಬಿಜೆಪಿ ಸರ್ಕಾರ ತನ್ನ ಅಧಿಕಾರಾವಧಿಯಲ್ಲಿ ರಾಜ್ಯವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿ ಮಾಡುವುದಾಗಿ ಘೋಷಣೆ ಮಾಡಿತ್ತು. ಆದರೆ, ಗದಗ ಜಿಲ್ಲೆಯ ಅಸುಂಡಿ ಗ್ರಾಮದಲ್ಲಿ ಇಂದಿರಾ ಆವಾಸ್ ಯೋಜನೆಯಡಿ ಮನೆ ಕಟ್ಟಿಕೊಂಡ ಫಲಾನುಭವಿಗಳಿಗೆ ಸರ್ಕಾರ ನೀಡಿದ ಚೆಕ್ಗಳೇ ಬೌನ್ಸ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಗದಗ ತಾಲೂಕಿನ ಅಸುಂಡಿ ಗ್ರಾಪಂ ವ್ಯಾಪ್ತಿಯಲ್ಲಿ ಇಂಥ ಎಡವಟ್ಟು ನಡೆದಿದೆ. 2012-13ನೇ ಸಾಲಿನ ಇಂದಿರಾ ಆವಾಸ್ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಲು ಸರ್ಕಾರ ಗ್ರಾಪಂ ಮೂಲಕ ಕಂತಿನ ರೂಪದಲ್ಲಿ 75 ಸಾವಿರ ನೀಡಲಾಗುತ್ತದೆ. ಮೊದಲು ಪ್ಲಿಂತ್ ಮಟ್ಟದ ಮನೆ ನಿರ್ಮಾಣ ಮಾಡಿದ ಬಳಿಕ 15 ಸಾವಿರ ನೀಡಲಾಗುತ್ತದೆ. ಇದೇ ಮಾದರಿಯಲ್ಲಿಯೇ ಅಸುಂಡಿ ಗ್ರಾಪಂ ವ್ಯಾಪ್ತಿಯ ಮಲ್ಲಸಮುದ್ರ, ಅಸುಂಡಿ ಗ್ರಾಮದಲ್ಲಿ ಆಯ್ಕೆಯಾದ ಫಲಾನುಭವಿಗಳು ಅಲ್ಲಲ್ಲಿ ಸಾಲ ಮಾಡಿ ಮನೆಗಳನ್ನು ನಿರ್ಮಿಸಿದ್ದಾರೆ. ಆದರೆ, ಚೆಕ್ಗಳನ್ನು ಬ್ಯಾಂಕ್ಗಳಿಗೆ ಹಾಕಿದ ವೇಳೆ ಫಲಾನುಭವಿಗಳಿಗೆ ನೀಡಿದ ಚೆಕ್ಗಳು ಬೌನ್ಸ್ ಆಗಿವೆ. ಪಂಚಾಯ್ತಿ ಖಾತೆ ಖಾಲಿಯಾಗಿದೆ ಎಂದು ತಿಳಿದು ಬಂದಿದ್ದು, ಹೀಗಾಗಿ ಫಲಾನುಭವಿಗಳಿಗೆ ನೀಡಿದ ಚೆಕ್ಗಳು ಬೌನ್ಸ್ ಆಗುತ್ತಿವೆ. ಇದರಿಂದ ಫಲಾನುಭವಿಗಳು ಕಂಗಾಲಾಗಿದ್ದಾರೆ.
ಮನೆ ಕಟ್ಟಿ ನೋಡು: ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕೃಷಿಕರೇ ವಾಸವಾಗಿದ್ದು, ತಮ್ಮ ಅಲ್ಪ ದುಡಿಮೆಯಲ್ಲಿಯೇ ಕಷ್ಟದ ಜೀವನ ಸಾಗಿಸುತ್ತಾರೆ. ಆದರೆ, ಸರ್ಕಾರ ತಮ್ಮ ಯಾವುದೋ ಯೋಜನೆ ಜಾರಿ ನೆಪದಲ್ಲಿ ಬಡವರಿಗೆ ಶಾಶ್ವತ ಸೂರು ಕಲ್ಪಿಸುತ್ತೇವೆ ಎಂದು ಹೇಳುತ್ತಾ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಈ ಮಧ್ಯೆ ಸಾಲ ಶೂಲ ಮಾಡಿ ಬಡವರು ಮನೆ ಕಟ್ಟಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಸರ್ಕಾರ ನೀಡುವ ಸಹಾಯಧನ ಚೆಕ್ಗಳು ಕ್ಲೀಯರ್ ಆಗಿ ಬಡವರ ಕೈಗೆ ದುಡ್ಡು ತಲುಪಬೇಕು. ಆದರೆ, ಹಾಗಾಗದಿರುವುದರಿಂದ ಬಡವರ ತೆಲೆಯ ಮೇಲೆ ಕಲ್ಪು ಬಿದ್ದಂತಾಗಿದ್ದು, ಮನೆ ಕಟ್ಟಿ ನೋಡು.. ಎನ್ನುವ ಗಾದೆ ಮಾತು ಗ್ರಾಮಸ್ಥರನ್ನು ಅಣಕಿಸುವಂತೆ ಮಾಡಿದೆ.
ದೇವರು ಕೊಟ್ರು ಪೂಜಾರಿ ಕೊಡಲ್ಲ
ಸರ್ಕಾರ ಹಾಕಿಕೊಂಡ ಯೋಜನೆ ಕನಸು ಬಡವರನ್ನು ಮತ್ತಷ್ಟು ಸಾಲದ ದವಡೆಗೆ ಸಿಲುಕಿಸುವ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ. ಸರ್ಕಾರ ನಿಗದಿತ ಸಮಯದಲ್ಲಿ ನೀಡಿದ ಅನುದಾನವನ್ನು ಬಳಕೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು. ಆದರೆ, ಜಿಲ್ಲೆಯಲ್ಲಿನ ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಹೀಗಾಗಿ ಹಣ ವಾಪಸ್ ಸರ್ಕಾರಕ್ಕೆ ಹೋಗುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಸುಂಡಿ ಗ್ರಾಪಂ ವ್ಯಾಪ್ತಿಯಲ್ಲಿ ಇಂದಿರಾ ಆವಾಸ್ ಯೋಜನೆಯಡಿ ನೀಡಲಾಗಿದ್ದ 4 ಲಕ್ಷ ಸರ್ಕಾರಕ್ಕೆ ವಾಪಸ್ಸಾಗಿದೆ. ಇದರಿಂದಾಗಿ ದೇವರು ಕೊಟ್ರು ಪೂಜಾರಿ ಕೊಡಲಿಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರದ ನಿಯಮದಂತೆಯೇ ನಾನು ಮನೆ ನಿರ್ಮಿಸಿಕೊಳ್ಳುತ್ತಿದ್ದೇನೆ. ಮೊದಲು ಪ್ಲಿಂಥ್ ಪೂರ್ಣಗೊಳಿಸಿದ ನಂತರ ಅವರ ವಿವರವನ್ನು ಗ್ರಾಪಂ ಮೂಲಕ ಸಲ್ಲಿಸಿದ್ದೇನೆ. ನನಗೆ 15 ಸಾವಿರ ಚೆಕ್ ನೀಡಿದ್ದರು. ಅದನ್ನು ಬ್ಯಾಂಕ್ಗೆ ಹಾಕಿದ್ದು, ಸರ್ಕಾರದ ಖಾತೆಯಲ್ಲಿ ಹಣವಿಲ್ಲ ಎಂದು ಚೆಕ್ ಮರಳಿ ಬಂದಿದ್ದು, ಪದೇ ಪದೇ ಬ್ಯಾಂಕ್ಗೆ ಅಲೆಯುವಂತಾಗಿದೆ. ಇದರಿಂದಾಗಿ ನಮಗೆ ದಾರಿ ತೋಚದಂತಾಗಿದೆ.
-ರೇಣುಕಾ, ಫಲಾನುಭವಿ
- ಶಿವಕುಮಾರ ಕುಷ್ಟಗಿ