ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮತದಾನ ಹತ್ತಿರವಾದರೂ ಚಿತ್ರಣ ಅಸ್ಪಷ್ಟ

Srinivasa Murthy VN
Updated On : 3 May 2013, 1:12 am

- ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಮೇ 2
ಮತದಾನದ ದಿನ ಸಮೀಪಿಸುತ್ತಿದ್ದರೂ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಯಾವ ಪಕ್ಷ ಗೆಲ್ಲುತ್ತದೆ, ಯಾವ ಪಕ್ಷ ಸೋಲುತ್ತದೆ ಎನ್ನುವ ಸ್ಪಷ್ಟ ಚಿತ್ರಣ ಲಭ್ಯವಾಗುತ್ತಿಲ್ಲ. ಎಲ್ಲ ಪಕ್ಷಗಳ ಪ್ರಚಾರದ ವೇಳೆಯಲ್ಲಿಯೂ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವ ಮತದಾರರು ಮಾತ್ರ ಯಾವುದೇ ಪಕ್ಷಕ್ಕೆ ಗೆಲವಿನ ಸುಳಿವು ನೀಡದೇ ಇರುವುದು ಅಭ್ಯರ್ಥಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯ ರೋಣ ಮತ್ತು ನರಗುಂದ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದರೆ, ಗದಗ ಹಾಗೂ ಶಿರಹಟ್ಟಿಯಲ್ಲಿ ಚತುಷ್ಕೋನ ಸ್ಪರ್ಧೆ ಕಂಡು ಬರುತ್ತಿದೆ. ರೋಣದಲ್ಲಿ ಹಾಲಿ ಸಚಿವ ಕಳಕಪ್ಪ ಬಂಡಿ ಹಾಗೂ ಜಿ.ಎಸ್. ಪಾಟೀಲ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದ್ದು, ಇಂದಿಗೂ ಗೆಲವಿನ ಸುಳಿವು ಸಿಕ್ಕಿಲ್ಲ. ನರಗುಂದ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಸಿ.ಸಿ. ಪಾಟೀಲ ಹ್ಯಾಟ್ರಿಕ್ ಕನಸಿನಲ್ಲಿದ್ದು, ಇದಕ್ಕಾಗಿ ಅವರ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ನ ಬಿ.ಆರ್. ಯಾವಗಲ್ ಸಾಕಷ್ಟು ಪ್ರಚಾರ ಮಾಡಿದ್ದಲ್ಲದೆ ಬಿಜೆಪಿ ಸರ್ಕಾರದ ವೈಫಲ್ಯಗಳ ಆಧಾರದಲ್ಲಿ ಗೆಲವಿಗಾಗಿ ಹೋರಾಟ ನಡೆಸಿದ್ದಾರೆ. ಇಲ್ಲಿಯೂ ಕೂಡಾ ಫಲಿತಾಂಶ ಯಾರತ್ತ ಎನ್ನುವುದು ಅಸ್ಪಷ್ಟ.
ಚತುಷ್ಕೋನ ಸ್ಪರ್ಧೆ: ಮಾಜಿ ಸಚಿವ ಎಚ್.ಕೆ. ಪಾಟೀಲ ಸ್ಪರ್ಧೆಯಿಂದ ರಾಜ್ಯದ ಗಮನ ಸೆಳೆದಿರುವ ಗದಗ ಕ್ಷೇತ್ರದಲ್ಲಿ ಈ ಬಾರಿ ಚತುಷ್ಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆ ಕಂಡು ಬರುತ್ತಿದೆ. ಬಿಜೆಪಿಯ ಶ್ರೀಶೈಲಪ್ಪ ಬಿದರೂರ ಪೈಪೋಟಿ ನೀಡಿದ್ದು, ಕೆಜೆಪಿಯ ಎಸ್.ಬಿ. ಸಂಕಣ್ಣವರ ಹಾಗೂ ಬಿಎಸ್ಆರ್ನಿಂದ ಸ್ಪರ್ಧಿಸಿರುವ ಅನಿಲ ಮೆಣಸಿನಕಾಯಿ ಸಾಕಷ್ಟು ಪ್ರಚಾರದ ಮೂಲಕ ಗಮನ ಸೆಳೆದಿದ್ದು, ಗೆಲುವು ಯಾರಿಗೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಇನ್ನು ಶಿರಹಟ್ಟಿಯಲ್ಲಿಯೂ ಚತುಷ್ಕೋನ ಸ್ಪರ್ಧೆ ಕಂಡು ಬರುತ್ತಿದೆ. ಬಿಜೆಪಿಯ ರಾಮಣ್ಣ ಲಮಾಣಿ, ಕಾಂಗ್ರೆಸ್ನಿಂದ ರಾಮಕೃಷ್ಣ ದೊಡ್ಡಮನಿ, ಬಿಎಸ್ಆರ್ನಿಂದ ಜಯಶ್ರೀ ಹಳ್ಳೆಪ್ಪನವರ, ಕೆಜೆಪಿಯಿಂದ ಶೋಭಾ ಲಮಾಣಿ ಸ್ಪರ್ಧಿಸಿದ್ದು ಎಲ್ಲರೂ 3 ಸುತ್ತಿನ ಪ್ರಚಾರ ಮುಗಿಸಿ ಅಂತಿಮ ಹಂತಕ್ಕೆ ಬಂದಿದ್ದು, ಇಲ್ಲಿಯೂ ಫಲಿತಾಂಶದ ಸುಳಿವು ಸಿಗದ ಕಾರಣ ಅಭ್ಯರ್ಥಿಗಳಲ್ಲಿ ಗೊಂದಲ, ಆತಂಕ ಮನೆ ಮಾಡಿದೆ.
ಎಲ್ಲರಿಗೂ ಸಕಾರಾತ್ಮಕ ಸ್ಪಂದನೆ: ಪ್ರತಿಯೊಂದು ಪಕ್ಷಗಳ ಅಭ್ಯರ್ಥಿಗಳು ಹಾಗೂ ಹಿಂಬಾಲಕರು ಗ್ರಾಮಗಳಿಗೆ ಪ್ರಚಾರಕ್ಕೆ ತೆರಳಿದ ವೇಳೆಯಲ್ಲಿ ಜನರು ಉತ್ತಮವಾಗಿಯೇ ಸ್ಪಂದಿಸುತ್ತಾರೆ. ಕಾರ್ಯಕರ್ತರು, ಅಭ್ಯರ್ಥಿಗಳು ಹೇಳುವ ಮೊದಲೇ ಆಯಾ ಪಕ್ಷಗಳ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ. ಇದು ಈ ಬಾರಿ ಚುನಾವಣೆಯ ಮತ್ತೊಂದು ವಿಶೇಷತೆಯಾಗಿದೆ. ಇನ್ನು ಕೆಲ ಜನರು ನಿಮ್ಮದೇ ಗೆಲವು ಯಾಕೆ ತೆಲೆ ಕೆಡಿಸಿಕೊಳ್ಳುತ್ತೀರಿ ಎನ್ನುವ ಅಭಯ ನೀಡುತ್ತಿದ್ದಾರೆ. ಆದರೆ, ಈ ಅಭಯವನ್ನು ಎಲ್ಲ ಪಕ್ಷದವರಿಗೂ ಹೇಳುತ್ತಿದ್ದು ಇದು ಅಭ್ಯರ್ಥಿಗಳು ಹಾಗೂ ಅವರ ಹಿಂಬಾಲಕರಿಗೆ ದೊಡ್ಡ ತಲೆನೋವಾಗಿದೆ ಎಂದು ಪ್ರಮುಖ ಪಕ್ಷದ ಪದಾಧಿಕಾರಿಯೋರ್ವ 'ಕನ್ನಡಪ್ರಭ'ಕ್ಕೆ ತಿಳಿಸಿದರು.
ಸುಳಿವೇ ಸಿಗುತ್ತಿಲ್ಲ: ಅಭ್ಯರ್ಥಿಗಳ ಪ್ರಭಾವ, ಅವರ ಪಕ್ಷದ ಸಾಧನೆಗಳ ಆಧಾರದಲ್ಲಿ ಜನರ ಅಭಿಪ್ರಾಯ ಸಂಗ್ರಹವಾಗುತ್ತದೆ. ಅದರ ಆಧಾರದಲ್ಲಿಯೇ ಜನರ ಒಲವು ಯಾರತ್ತವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಆದರೆ, ಈ ಬಾರಿ ಸಾರ್ವಜನಿಕರು ಎಲ್ಲ ಪಕ್ಷಗಳ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನಾಡುತ್ತಾರೆ. ಎಲ್ಲ ಪಕ್ಷಗಳಲ್ಲಿನ ಭ್ರಷ್ಟಾಚಾರದ ಬಗ್ಗೆ, ಅಭ್ಯರ್ಥಿಗಳ ಕಾರ್ಯವೈಖರಿ ಅವರ ವೈಯಕ್ತಿಕ ವರ್ತನೆ, ಹಿಂಬಾಲಕರ ನಡೆಗಳ ಬಗ್ಗೆಯೂ ಚರ್ಚಿಸುತ್ತಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದಲ್ಲಿ ಮುಖ್ಯವಾಗಿ ಮತದಾರರಲ್ಲಿ ಇಂದಿಗೂ ಗೊಂದಲವಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗಾಗಿ ಗೆಲವಿನ ಸುಳಿವು ಸಿಗುತ್ತಿಲ್ಲ ಎಂದರೆ ತಪ್ಪಾಗಲಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement