ಕಾಂಗ್ರೆಸ್ ಸಾಧನೆ ಸಾಬೀತು ಮಾಡಲಿ: ಜೋಶಿ
ನರಗುಂದ: 5 ವರ್ಷಗಳಲ್ಲಿ ಬಿಜೆಪಿ ಸರ್ಕಾರ ಈ ಹಿಂದೆ ಯಾವ ಪಕ್ಷದ ಸರ್ಕಾರ ಮಾಡದ ಸಾಧನೆಗಳನ್ನು ಮಾಡಿದ್ದು, ನಾವು ದಾಖಲೆ ಮುಖಾಂತರ ತೋರಿಸುತ್ತೇವೆ. ಆದರೆ, ಕಾಂಗ್ರೆಸ್‌ನವರು ಏನು ಮಾಡಿದ್ದಾರೆ ಎನ್ನುವುದನ್ನು ಸಾಬೀತು ಮಾಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಸವಾಲು ಹಾಕಿದರು.
ಅವರು ಪಟ್ಟಣದ ನಂ.1 ಶಾಲೆಯ ಮೈದಾನದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ.ಪಾಟೀಲ ಪರ ಮತಯಾಚನೆ ಹಾಗೂ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಕಲ್ಲದ್ದಲು ಹಗರಣ, 2ಜಿ ಹಗರಣ, ಕಾಮನ್‌ವೆಲ್ತ್ ಹಗರಣ, ದೇಶದ ರೈತರ ಸಾಲ ಮನ್ನಾದಲ್ಲಿ ಹಗರಣ ಮಾಡಿದ್ದೇ ಇವರ ಸಾಧನೆ. ಇವರು ಇನ್ನೊಂದು ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಕಾಂಗ್ರೆಸ್ ಕುರಿತು ಕಟುವಾಗಿ ಟೀಕಿಸಿದರು. ಕಳಸಾ ಬಂಡೂರಿ ಯೋಜನೆಗೆ ಟ್ರಿಬುನಲ್ ಮಾಡುವ ಮುಂಚೆ ಕರ್ನಾಟಕ ರಾಜ್ಯದ ಪಾಲಿನ 7.5 ಟಿಎಂಸಿ ನೀರು ಕೊಡಬೇಕು ಎಂದು ನಾನು ಮತ್ತು ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಕೇಂದ್ರ ಸರ್ಕಾರಕ್ಕೆ ತಿಳಿಸಿದರೂ ಈ ಭಾಗದ ಜನರಿಗೆ ಉಪಯೋಗವಾಗುವ ಯೋಜನೆ ಜಾರಿಯಾಗಬಾರದು ಎಂದು ಕಾಂಗ್ರೆಸ್‌ನವರು ಟ್ರಿಬುನಲ್ ಮಾಡಿದ್ದಾರೆಂದು ದೂರಿದರು.
ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಸಿಎಂ ಮೇಲೆ ಹೆಚ್ಚಿನ ಪ್ರಭಾವ ಬೀರಿ, ಹೆಚ್ಚುವರಿಯಾಗಿ ರು. 600 ಕೋಟಿ ತಂದು ಅಭಿವೃದ್ಧಿ ಮಾಡಿದ್ದಾರೆ. ಅಭಿವೃದ್ಧಿ ಮಾನದಂಡದ ಮೇಲೆ ನಮ್ಮ ಪಕ್ಷದ ಅಭ್ಯರ್ಥಿ ಸಿ.ಸಿ. ಪಾಟೀಲರಿಗೆ ಮತ ಹಾಕಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಎಂ.ಎಸ್. ಕರಿಗೌಡರ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಬಿ.ಬಿ. ಐನಾಪುರ, ಸಿ.ವೈ. ದಂಡಿನ, ಸಿ.ಎಸ್. ಪಾಟೀಲ, ವಿ.ಎನ್. ಕೊಳ್ಳಿಯವರು, ಗುರಪ್ಪ ಆದಪ್ಪನವರು, ಅಜ್ಜಪ್ಪ ಹುಡೇದ, ಸಮೀದ ಮುಲ್ಲಾ, ಎಂ.ಬಿ. ಖಾಜಿ, ಬಾಬು ಹಿರೇಹೊಳಿ, ಉಮೇಶಗೌಡ ಪಾಟೀಲ, ಕೆಂಚನಗೌಡ್ರ, ಎಸ್.ಆರ್. ಹಿರೇಮಠ, ವಿ.ಎಸ್. ಡಾಣೆ, ಎಸ್.ಆರ್. ಯಲ್ಲಪಗೌಡ್ರ, ಬಿ.ಎಸ್. ಉಪ್ಪಾರ, ಬಿ.ಎಸ್. ಪಾಟೀಲ, ಸಂಗಣ್ಣ ಚವಡಿ, ಟಿ.ಎಸ್. ಚನ್ನಪ್ಪೌಡ್ರ, ಅನಿಲ ಧರಿಯಣ್ಣವರ, ಗೋವಿಂದರಡ್ಡಿ ಸಿದ್ನಾಳ, ಮಲ್ಲಪ್ಪ ಮೇಟಿ, ವಾಸು ಜೋಗಣ್ಣವರ, ಪ್ರಕಾಶ ಪಟ್ಟಣಶಟ್ಟಿ, ಚಂದ್ರಶೇಖರ ಕೋಟಿ, ಶೋಭಾ ಪಾಟೀಲ, ಚಂದ್ರು ಪವಾರ, ಸಾವಿರಾರು ಕಾರ್ಯಕರ್ತರಿದ್ದರು.
ಕಲಾವಿದರನ್ನು ಬೆಳೆಸಿ: ಅಬ್ಬಿಗೇರಿ
ಗದಗ: ತಂತ್ರಜ್ಞಾನದಿಂದ ಪ್ರಸ್ತುತ ಹಲವು ಕಲಾವಿದರು ಮರೆಯಾಗುತ್ತಿದ್ದಾರೆ. ಕಲಾವಿದರನ್ನು ಬೆಳೆಸುವುದು ಅಗತ್ಯ ಎಂದು ಮಂಜುನಾಥ ಅಬ್ಬಿಗೇರಿ ಹೇಳಿದ್ದಾರೆ.
ನಗರದ ವಿದ್ಯಾದಾನ ಸಮಿತಿ ಆವರಣದಲ್ಲಿ ವಿಜಯ ಲಲಿತ ಕಲಾ ಮಹಾವಿದ್ಯಾಲ, ಕರ್ನಾಟಕ ಲಲಿತಕಲಾ ಅಕಾಡೆಮಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಪ್ರತಿಷ್ಠಾಪನಾ ಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಲಾಕೃತಿಗಳಿಗೆ ಬೇಡಿಕೆ, ಉತ್ತಮ ಬೆಲೆ ಬರಬೇಕಾದರೆ ಮಾರ್ಕೆಟಿಂಗ್ ವಿಭಾಗ ಇರಬೇಕು ಎಂದರು.
ಅಭಿಯಂತ ಮಲ್ಲಿಕಾರ್ಜುನ ಐಲಿ ಮಾತನಾಡಿ, ಕಲೆ ಎಂಬುದು ಅಭಿವ್ಯಕ್ತಿ ಮಾಧ್ಯಮ. ಕಲಾವಿದ ಕಲ್ಲಿಗೂ, ಕಟ್ಟಿಗೆಗೂ, ಮಣ್ಣಿಗೂ ಪರಿಸರದ ಎಲ್ಲ ವಸ್ತುವಿಗೂ ಸುಂದರ ರೂಪ ನೀಡುವ ಸಾಮರ್ಥ್ಯ ಹೊಂದಿರುತ್ತಾನೆ. ಕಲಾವಿದ ಸೃಷ್ಟಿಕರ್ತನ 2ನೇ ರೂಪ ಎಂದರು.
ಕಲಾವಿದರಾದ ಧರ್ಮೇಂದ್ರ ಕಮಾಯತ್, ಈರಣ್ಣ ಬಡಿಗೇರ, ಪ್ರಿಯಾ ಅಂಗಡಿ, ಗ್ಯಾನಪ್ಪ ವಾಲಿಕಾರ, ಮೂರ್ತಿ ಇಂಚಿಗೇರಿ, ಆನಂದ ಯಲಿಗಾರ, ನಂದಾ, ಶರಣು ಹಡಪದ ರಚಿಸಿದ ವಿಭಿನ್ನ ಶೈಲಿಯ ಚಿತ್ರಗಳು ಮನಸೆಳೆದವು.
ಮಂಜುನಾಥ ಬೇಲೇರಿ ಉದ್ಘಾಟಿಸಿದರು. ವಿ.ಬಿ. ಪರ್ವತಗೌಡ, ಎನ್.ಎ. ಹರ್ಲಾಪುರ, ಪ್ರೇಮಾ ಹಂದಿಗೋಳ, ವಿ.ಬಿ. ಪರ್ವತಗೌಡ್ರ, ಶಿಬಿರದ ಸಂಚಾಲಕ ವಿ.ಎಫ್. ಕುಂದ್ರಳ್ಳಿ, ಶಿವರಾಜ ಕಮ್ಮಾರ ಇತರರಿದ್ದರು.