ಮತಪಟ್ಟಿಯಲ್ಲಿ ಹೆಸರು ನಾಪತ್ತೆ: ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ರೋಣ, ಮೇ 3
ಮೇ 5ರಂದು ನಡೆಯುವ ಚುನಾವಣೆಯ ಮತದಾರರ ಯಾದಿಯಲ್ಲಿ 491 ಮತದಾರರ ಹೆಸರು ನಾಪತ್ತೆಯಾಗಿದ್ದು, ಇದೊಂದು ವ್ಯವಸ್ಥಿತ ತಂತ್ರವಾಗಿದೆ. ಕ್ಷೇತ್ರದ ಹಾಲಿ ಶಾಸಕರ ಮತ್ತು ಇದರಲ್ಲಿ ಅಧಿಕಾರಿಗಳ ಕೈವಾಡವಿದೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಅಡಗಿದೆ ಎಂದು ಆರೋಪಿಸಿ ತಾಲೂಕಿನ ಹಾಲಕೇರಿ ಗ್ರಾಮಸ್ಥರು ಶುಕ್ರವಾರ ತಹಸೀಲ್ದಾರ್ ಎಂ.ಬಿ. ಪಾಟೀಲರನ್ನು ಗ್ರಾ.ಪಂ ಕಚೇರಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದರು.
ಮತಗಟ್ಟೆ ವೀಕ್ಷಣೆಗೆಂದು ಹಾಲಕೇರಿ ಗ್ರಾಮಕ್ಕೆ ಆಗಮಿಸಿದ ರೋಣ ತಹಸೀಲ್ದಾರ್ ಎಂ.ಬಿ. ಪಾಟೀಲ ಅವರನ್ನು ಗ್ರಾಮಸ್ಥರು ವಿಚಾರಿಸಿದಾಗ, ನಾವು ಈ ಹಿಂದೆ ಸರ್ವೆ ಮಾಡಿದ ಪ್ರಕಾರ ಭಾವಚಿತ್ರ ಕೊಡದವರು, ಮಾಹಿತಿ ಸರಿಯಾಗಿ ನೀಡದವರು, ಮೃತಪಟ್ಟವರು ಮತ್ತು ಗ್ರಾಮದಲ್ಲಿ ಇಲ್ಲದವರ ಸುಮಾರು 491 ಹೆಸರನ್ನು ತೆಗೆಯಲಾಗಿದೆ ಎಂದರು.
ಅದರಿಂದ ಕೆರಳಿದ ಗ್ರಾಮಸ್ಥರು, ನಾವು ಗ್ರಾಮದಲ್ಲಿಯೇ ಇದ್ದವೆ ಸರಿಯಾಗಿ ಸಮಿಕ್ಷೆ ಮಾಡಿಲ್ಲ. ಯಾದಿಯಲ್ಲಿ ಇಲ್ಲದವರು ಜೀವಂತವಾಗಿದ್ದಾರೆ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ. ನಮಗೆ ಮತದಾನ ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಇಲ್ಲದಿದ್ದರೆ ನಮಗೆ ಮರಣ ಉತಾರ ಕೊಡಿ ಎಂದು ಆಕ್ರೋಶಗೊಂಡು ತಹಸೀಲ್ದಾರರನ್ನು ಗ್ರಾಪಂ ಕಚೇರಿಯಲ್ಲಿ ಕೂಡಿ ಹಾಕಿದರು.
20 ವರ್ಷಗಳಿಂದ ಮತದಾನ: 20 ವರ್ಷಗಳಿಂದ ವೋಟು ಹಾಕುತ್ತ ಬಂದಿದ್ದೇವೆ. ಈಗ ಮನೆ ಮನೆಗೆ ಬಂದು ಮತದಾರರ ಗುರುತಿನ ಚೀಟಿ ನೀಡುತ್ತಿದ್ದಾಗ ನಮಗೆ ಗೊತ್ತಾಗಿದ್ದು, ನಮ್ಮ ಹೆಸರು ಡಿಲೀಟ್ ಆಗಿದೆ. ಪೋತಿಯಾದವರ ಅನೇಕ ಹೆಸರು ಯಾದಿಯಲ್ಲಿವೆ. ಜೀವಂತ ಇದ್ದವರ ಹೆಸರುಗಳೇ ನಾಪತ್ತೆಯಾಗಿವೆ. ನಾವು ರೈತರು ಈ ರೀತಿಯಾದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕನ್ನು ಕಸಿದುಕೊಂಡಿದ್ದು ಖಂಡನೀಯವಾಗಿದೆ. ಯಾವುದಕ್ಕೂ ನಮಗೆ ಮತದಾನಕ್ಕೆ ಅವಕಾಶ ನೀಡಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಚುನಾವಣೆ ಬಹಿಷ್ಕಾರ: ಸುದ್ದಿ ತಿಳಿದ ಸ್ಥಳಕ್ಕಾಗಮಿಸಿದ ನರೇಗಲ್ ಪಿಎಸ್ಐ ಎಚ್.ಎಂ. ಪಾಟೀಲ ಗ್ರಾಮಸ್ಥರನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ಗ್ರಾಮಸ್ಥರು ಕಿವಿಗೊಡಲಿಲ್ಲ. ಮತದಾನಕ್ಕೆ ಅವಕಾಶ ಕಲ್ಪಿಸದಿದ್ದರೆ ಗ್ರಾಮಸ್ಥರೆಲ್ಲರೂ ಕೂಡಿ ಒಮ್ಮತದ ನಿರ್ಧಾರ ತೆಗೆದುಕೊಂಡು ಮೇ 5ರಂದು ನಡೆಯುವ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಸಿದರು. ಆಗ ಗ್ರಾಮಸ್ಥರು ಶನಿವಾರ ಯಾವುದಕ್ಕೂ ನ್ಯಾಯ ಸಿಗಬೇಕು ಎಂದು ಎಚ್ಚರಿಸಿ ಪ್ರತಿಭಟನೆಯಿಂದ ಹಿಂದೆ ಸರಿದರು.
ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಬಾಬಣ್ಣ ಹಳ್ಳಿ, ಅಂದಪ್ಪ ಮ್ಯಾಗೇರಿ, ಹಮನಂತಪ್ಪ ತೊಂಡಿಹಾಳ, ಸಂಗಪ್ಪ ಮುಂದಿನಮನಿ, ಕರಚನ್ನಬಸಪ್ಪ ಮುಂದಿನಮನಿ, ರಾಮಣ್ಣ ಬೂದಿಹಾಳ, ಶಿವಪ್ಪ ಪ್ರಭಣ್ಣವರ, ದುರ್ಗಪ್ಪ ದೊಡ್ಡಮನಿ, ರೇಣವ್ವ ಮುಂದಿಮನಿ, ಬಸಮ್ಮ ಹೊನ್ನವಾಡ, ಕಸ್ತೂರೆವ್ವ ಕೆಂಚರಡ್ಡಿ, ಅನ್ನಕ್ಕ ಬಾರಕೇರ, ಲಕ್ಷ್ಮವ್ವ ಕಮರತ, ಗೀತಾ ಕರಡಿ, ಅಂದಮ್ಮ ಕುರಿ, ನೀಲವ್ವ ಕರಡಿ, ಸಾವಿತ್ರೆವ್ವ ಬಾಗಲಬ್ಬಿ, ಹನಮವ್ವ ಮುಂದಿನಮನಿ ಮುಂತಾದವರು ಪಾಲ್ಗೊಂಡಿದ್ದರು.