ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದಿನಿಂದ ಗ್ರಾಮದೇವತೆ ಮೂರ್ತಿ ಪ್ರತಿಷ್ಠಾಪನೆ

Srinivasa Murthy VN
Updated On : 14 May 2013, 1:10 am

ಕನ್ನಡಪ್ರಭ ವಾರ್ತೆ, ಗದಗ, ಮೇ 13
ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ 26 ವರ್ಷಗಳಿಂದ ನಡೆಯದ ಗ್ರಾಮ ದೇವತೆಯಾದ ದ್ಯಾಮವ್ವದೇವಿ (ಕಾಳಿಕಾದೇವಿ)ಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮ ಮೇ 14ರಿಂದ 16ರ ವರೆಗೆ ನಡೆಯಲಿದೆ.
ದೇವಿಗೆ ಸಕಲ ವಾದ್ಯಗಳೊಂದಿಗೆ ಕುಂಭಪೂಜೆ ಜೊತೆಗೆ ಗ್ರಾಮದ ಚೌತಾಕಟ್ಟೆ(ಶಬಾರಕಟ್ಟೆ)ಗೆ ಬಂದು ಅಲ್ಲಿಂದ ತವರು ಮನೆಗೆ ಹೋಗಿ ಅಲ್ಲಿ ಉಡಿ ತುಂಬಿಸಿಕೊಂಡು ಮರಳಿ ಚೌತಾಕಟ್ಟೆಗೆ ಬರುವಳು. ಮೆರವಣಿಗೆಯೊಂದಿಗೆ ಉಡಿತುಂಬಿಸಿಕೊಳ್ಳುವ ಕಾರ್ಯ ನಡೆಯಲಿದೆ. ಬೆಳಗ್ಗೆ 8ಕ್ಕೆ ಗಂಗಾಪೂಜೆ ಮುಗಿಸಿ ನಂತರ ಉಡಿ ತುಂಬಿಸಿಕೊಳ್ಳುವ ಕಾರ್ಯಕ್ರಮ ಜರುಗಲಿದೆ.
ಚಳ್ಳೆ ಆಡುವುದು: ಗ್ರಾಮ ದೇವತೆ ದ್ಯಾಮವ್ವ(ಕಾಳಿಕಾ)ದೇವಿಯು ಗ್ರಾಮದಲ್ಲಿರುವ ಎಲ್ಲ ವಾದ್ಯ ಮೇಳಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಚಳ್ಳೆ ಆಡಿ(ದೇವಿಯ ಬೃಹತ್ ಮೆರವಣಿಗೆ) ಪುನಃ ದೇವಸ್ಥಾನಕ್ಕೆ ಬರುವಳು. ಈ ಕಾರ್ಯ ಅತ್ಯಂತ ಮಡಿಯಿಂದ ನಡೆಯುವುದು. ಗ್ರಾಮದ ಪ್ರಮುಖ ರಸ್ತೆಗಳನ್ನು ಶುಚಿಗೊಳಿಸಲಾಗುವುದು. ನಂತರ ಅಲ್ಲಿ ಗ್ರಾಮ ದೇವತೆಯು ಚಳ್ಳೆ ಆಡುವುದು. ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅಂದು ಯಾವುದೇ ವಾಹನಗಳು ಗ್ರಾಮದಲ್ಲಿ ಬರುವುದಿಲ್ಲ.
ಹೋಮ ಹವನಗಳು: ಗ್ರಾಮ ದೇವತೆಯ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತ ದೇವತಾ ಪೂಜೆ, ಹೋಮ, ದುರ್ಗಾ ಹೋಮ, ಚಂಡಿ ಹೋಮ, ಸಂಕ್ಷಿಪ್ತ ಪೂರ್ಣಾಹುತಿ ಸೇರಿದಂತೆ ವಿವಿಧ ರೀತಿಯ ವಿಶೇಷ ಪೂಜಾ ಕಾರ್ಯ, ಮಂಗಳಾರತಿ, ಪ್ರಸಾದ ಕಾರ್ಯ ನಡೆಯಲಿದೆ. ದೇವಿಯ ಚಳ್ಳೆ ಆಡುವ ದಿನದಂದು ಕುಂಭಮೇಳ ಕಾರ್ಯಕ್ರಮ ಜರುಗಲಿದೆ.
ಪ್ರಾಣ ಪ್ರತಿಷ್ಠಾನ ಪೂಜೆ: ವಿವಿಧ ಶ್ರೀಗಳ ಸಾನ್ನಿಧ್ಯದಲ್ಲಿ ಸುಪ್ರಭಾತ, ದೇವತಾ ಉದ್ದಾಪನೆ, ದೇವತಾ ಪೂಜೆಯೊಂದಿಗೆ ಗ್ರಾಮ ದೇವತೆ ಹಾಗೂ ನವಗ್ರಹ ಪ್ರಾಣ ಪ್ರತಿಷ್ಠಾಪನೆ, ನೇತ್ರೋನ್ಮಿಲನ, ಕಲಾವ್ಹಾನ ಕದಳಿ, ಕುಷ್ಮಾಂಡ, ಧೇನುದರ್ಶನ, ದಣರ್ಪಣದಲ್ಲಿ ಬಿಂಬ ದರ್ಶನ, ಕಲಾ ಹೋಮ, ಪ್ರಾಣ ಪ್ರತಿಷ್ಠಾ ಹೋಮ, ಬಲಿ ಹರಣ, ಪೂರ್ಣಾಹುತಿಯೊಂದಿಗೆ ಮಹಾ ಮಂಗಳಾರತಿ ಮತ್ತು ಭಕ್ತರಿಂದ ಹಣ್ಣು ಕಾಯಿ, ಕರ್ಪೂರ, ಉಡಿ ತುಂಬುವುದು ಮುಂತಾದ ಹತ್ತು ಹಲವು ಕಾರ್ಯ ನಡೆಯಲಿವೆ.
26 ವರ್ಷಗಳ ನಂತರ ಈ ಉತ್ಸವ ಮಂಗಳವಾರದಿಂದ 3 ದಿನಗಳ ಕಾಲ ನಡೆಯುತ್ತಿದೆ. ನಾಡಿನ ಹೆಸರಾಂತ ಹರ, ಗುರು, ಚರ ಮೂರ್ತಿಗಳು ಸೇರಿದಂತೆ ಸುತ್ತಮುತ್ತಲಿನ ಎಲ್ಲ ಗ್ರಾಮಗಳ ಸದ್ಭಕ್ತರು ಆಗಮಿಸುವರು.

ಬಸವಣ್ಣನವರ ತತ್ವ, ಚಿಂತನೆ ಅಳವಡಿಸಿಕೊಳ್ಳಿ
ರೋಣ: ಬಸವಣ್ಣನವರ ಆದರ್ಶ ವ್ಯಕ್ತಿತ್ವ, ಕಾಯಕ ತತ್ವ ಮತ್ತು ಚಿಂತನೆಗಳು ಎಂದೆಂದಿಗೂ ಮೌಲ್ಯಯುತವಾಗಿವೆ. ಅವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಪುರಸಭೆ ಸದಸ್ಯೆ ನಾಜಬೇಗಂ ಯಲಿಗಾರ ಹೇಳಿದರು.
ಅವರು ಸೋಮವಾರ ಪಟ್ಟಣದ ಪುರಸಭೆಯ ಆವರಣದಲ್ಲಿ ತಾಲೂಕು ಆಡಳಿತ, ತಾಪಂ ಮತ್ತು ಪುರಸಭೆ ಆಶ್ರಯದಲ್ಲಿ ನಡೆದ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 12ನೇ ಶತಮಾನದಲ್ಲಿಯೇ ಕಾಯಕ ತತ್ವ, ಸಮಾನತೆ, ಅಸ್ಪ್ರಶ್ಯತೆ, ಜ್ಯಾತೀಯತೆ ನಿವಾರಣೆ, ವಚನ ಸಾಹಿತ್ಯದ ಮೂಲಕ ಸಾಮಾಜಿಕ ಪರಿವರ್ತನೆಗೆ ಬಸವಣ್ಣನವರು ಹೋರಾಡಿದ್ದಾರೆ. ಇವರ ತತ್ವ ಸಂದೇಶಗಳು ಇಂದಿಗೂ ಅನನ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಎಂ.ಬಿ. ಪಾಟೀಲ್ ಮಾತನಾಡಿ, ಬಸವಣ್ಣನವರು ವಚನ ಮತ್ತು ಕಾಯಕದ ತತ್ವ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ್ದು, ಸಮಾಜದ ಒರೆ, ಕೊರೆಗಳನ್ನು ತಿದ್ದಲು ಶ್ರಮಿಸಿದ ಬಸವಣ್ಣನವರ ಆದರ್ಶಮಯ ವ್ಯಕ್ತಿತ್ವ ಇಂದಿಗೂ ದಾರಿ ದೀಪವಾಗಿದೆ ಎಂದರು.
ಬಸವೇಶ್ವರ ಜೀವನ ಚರಿತ್ರೆ ಮತ್ತು ಧರ್ಮದ ತತ್ವಗಳು ಕುರಿತು ಉಪನ್ಯಾಸಕ ಬಿ.ಎಸ್. ಮಾನೆ ಇವರಿಂದ ಉಪನ್ಯಾಸ ಹಾಗೂ ಬಿ.ಎಸ್. ಬಳ್ಳೂರ ಮತ್ತು ಸಂಗಡಿಗರಿಂದ ವಚನ ಗಾಯನ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಎನ್.ಎಸ್. ಕೂಡಲ, ಪುರಸಭೆ ಮುಖ್ಯಾಧಿಕಾರಿ ವಿ. ರಾಮಸ್ವಾಮಿ, ಸದಸ್ಯ ಮಂಜುನಾಥ ಹಾಳಕೇರಿ, ಖಾದಿರಸಾಬ ಸಂಕನೂರ, ಮಾಬುಸಾಬ ಚಿನ್ನೂರ, ಗೀತಾ ಕೊಪ್ಪದ, ಲಕ್ಷ್ಮೀ ಗಡಗಿ, ರತ್ನಾ ಕೊಳ್ಳಿಯವರ, ಶಿವಪ್ಪ ಕರಲಿಂಗಣ್ಣವರ, ಬಸನಗೌಡ ಪಾಟೀಲ್, ಶರಣಪ್ಪ ದೊಡ್ಡಮನಿ, ಪಿಎಸ್ಐ ಎಂ.ಎನ್. ಹತ್ತಿಕಟಗಿ, ಬಿಇಓ ಕೆ.ವಿ. ಪಾಟೀಲ್, ಅಶೋಕ ದೇಶಣ್ಣವರ, ಎಚ್.ಬಿ. ಹುಲಗಣ್ಣವರ,ಬಸವಣ್ಣೆಪ್ಪ ಗಡಿಯಪ್ಪನವರ ಮುಂತಾದವರು ಉಪಸ್ಥಿತರಿದ್ದರು. ಎಸ್.ವೈ. ಯಡಳ್ಳಿ ಸ್ವಾಗತಿಸಿ, ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement