ಇಂದು ಗ್ರಾಮ ದೇವತೆ ಧ್ವಜಾರೋಹಣ
ಗದಗ: ತಾಲೂಕಿನ ಕೋಟುಮಚಗಿಯ ಗ್ರಾಮ ದೇವತೆಯಾದ ದ್ಯಾಮವ್ವ (ಕಾಳಿಕಾದೇವಿ)ಯ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಹಾಗೂ ಜಾತ್ರಾ ಮಹೋತ್ಸವ ಅಂಗವಾಗಿ ಮೇ 14ರ ಬೆಳಗ್ಗೆ 6ಕ್ಕೆ ಧ್ವಜಾರೋಹಣ ಜರುಗಲಿದೆ. ಶಿರಹಟ್ಟಿ ಸಂಸ್ಥಾನಮಠದ ಫಕೀರೇಶ್ವರ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ಫಕೀರಯ್ಯ ಹಿರೇಮಠ, ಗಂಗಾಧರಯ್ಯ ಹಿರೇಮಠ, ಟ್ರಸ್ಟ್ನ ಅಧ್ಯಕ್ಷ ಶಿವಪ್ಪ ನೇಗಲಿ ಉಪಸ್ಥಿತರಿರುವರು. ಬೆಳಗ್ಗೆ 8ಕ್ಕೆ ಗಿಣಗೇರಿಯ ದೇವೇಂದ್ರ ಶ್ರೀಗಳ ನೇತೃತ್ವದಲ್ಲಿ ಗಂಗಾಪೂಜೆ ಜರುಗಲಿದೆ. ಸಂಜೆ 5ಕ್ಕೆ ನಡೆಯುವ ಧರ್ಮಸಭೆ ಸಾನ್ನಿಧ್ಯವನ್ನು ನಿಡಗುಂದಿಕೊಪ್ಪದ ಶಾಖಾ ಶಿವಯೋಗ ಮಂದಿರದ ಶಿವಬಸವ ಶ್ರೀಗಳು, ಮುದ್ದಾಬಳ್ಳಿಯ ಏಕದಂಡಗಿಯ ಗುರುನಾಥ ಶ್ರೀಗಳು, ಮುತ್ತಪ್ಪಜ್ಜನವರು, ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರ ವಹಿಸುವರು. ಗ್ರಾಪಂ ಅಧ್ಯಕ್ಷೆ ಸುಮಂಗಲಾ ಜಗ್ಗಲ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕಳಕಪ್ಪ ಬಂಡಿ, ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ, ಉಪಾಧ್ಯಕ್ಷ ರಮೇಶ ಮುಂದಿನಮನಿ, ಚಂಬವ್ವ ಪಾಟೀಲ, ಎಪಿಎಂಸಿ ಸದಸ್ಯ ರಾಮಣ್ಣ ಶಿಂಗಟಾಲಕೇರಿ. ಹುಚ್ಚೀರಪ್ಪ ಬಡಿಗೇರ ಅತಿಥಿಗಳಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
ವಸತಿ ನಿಲಯಗಳಿಗೆ ಅರ್ಜಿ ಆಹ್ವಾನ
ನರಗುಂದ: 2013-14ನೇ ಸಾಲಿಗೆ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿಗೆ 5ರಿಂದ 10ನೇ ತರಗತಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಪಡೆದು ಹಿಂದಿನ ತರಗತಿ ಪಾಸಾದ ಅಂಕ ಪಟ್ಟಿ, ಜಾತಿ ಪ್ರಮಾಣಪತ್ರ, ಇತರೆ ಮಾಹಿತಿಯೊಂದಿಗೆ ಜೂನ್ 10 ರೊಳಗಾಗಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳಿಗೆ ಸಲ್ಲಿಸಬೇಕೆಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಬೈಕ್ ಡಿಕ್ಕಿ: ಸವಾರ ಸಾವು
ಗದಗ: ವೇಗವಾಗಿ ಬಂದ ಬೈಕ್ವೊಂದು ರಸ್ತೆಯ ತಿರುವಿನಲ್ಲಿದ್ದ ತಡೆ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯ ತಿರುವಿನಲ್ಲಿ ಸಂಭವಿಸಿದೆ. ಮೃತನನ್ನು ಲಕ್ಷ್ಮೇಶ್ವರ ಪಟ್ಟಣದ ನಿವಾಸಿ ಆಸೀಫ್ ಜಾಫರಸಾಬ ರಿತ್ತಿ (28) ಎಂದು ಗುರುತಿಸಲಾಗಿದೆ. ಬೈಕ್ ಲಕ್ಷ್ಮೇಶ್ವರ ಕಡೆಯಿಂದ ಶಿರಹಟ್ಟಿ ಕಡೆಗೆ ಹೋಗುವಾಗ ಈ ಘಟನೆ ಸಂಭವಿಸಿದೆ. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಹತ್ತುವಾಗ ಬಿದ್ದು ಚಾಲಕ ಸಾವು
ಗದಗ: ಚಾಲಕನೊಬ್ಬ ಲಾರಿ ಹತ್ತುವಾಗ ಮೇಲಿಂದ ಕೆಳಗೆ ಬಿದ್ದು, ರಕ್ತಸ್ರಾವ ಉಂಟಾಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಬಳಿ ಸಂಭವಿಸಿದೆ. ಚಂದಗಡ ನಿವಾಸಿ ಇಸ್ಮಾಯಿಲ್ ಕುತ್ಬುದ್ದೀನ್ ಖಾಜಿ (28) ಎಂದು ಗುರುತಿಸಲಾಗಿದ್ದು, ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.