ಜಿಎಸ್ಪಿಗೆ ಸಚಿವ ಸ್ಥಾನ ನೀಡಿ: ಆಗ್ರಹ
ರೋಣ: ರೋಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಿ.ಎಸ್. ಪಾಟೀಲಗೆ ಸಿಎಂ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂದು ಪುರಸಭೆ ಸದಸ್ಯ ಮಂಜುನಾಥ ಹಾಳಕೇರಿ ಆಗ್ರಹಿಸಿದ್ದಾರೆ. ಈ ಕುರಿತು ಭಾನುವಾರ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿ.ಎಸ್. ಪಾಟೀಲರು ಅನುಭವಿ ರಾಜಕಾರಣಿಗಳಾಗಿದ್ದು, 1989 ಮತ್ತು 1999ರಲ್ಲಿ ಶಾಸಕರಾಗಿ, 4 ವರ್ಷಗಳ ಕಾಲ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅಭಿವೃದ್ಧಿಪರ ಚಿಂತನಶೀಲತೆ ರಾಜ್ಯಕ್ಕೆ ಅಗತ್ಯವಾಗಿದೆ. 20 ವರ್ಷಗಳ ಕಾಲ ರಾಜಕೀಯ ಅನುಭವ ಹೊಂದಿದ ಶಾಸಕ ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನ ನೀಡಿದಲ್ಲಿ ಅದನ್ನು ಸಮರ್ಪಕವಾಗಿ ನಿಭಾಯಿಸುವ ಜಾಣ್ಮೆ ಅವರಲ್ಲಿದೆ. ನಾಡು ಮತ್ತು ಕ್ಷೇತ್ರದ ಅಭಿವೃದ್ಧಿಗಾಗಿ ಇಂತಹ ನಾಯಕರಿಗೆ ಸಚಿವ ಸ್ಥಾನ ನೀಡುವುದು ಅಗತ್ಯವಾಗಿದೆ ಎಂದರು. ಪುರಸಭೆ ಮಾಜಿ ಸದಸ್ಯ ಸುರೇಶ ಜಗ್ಗಲ. ಹನಮಂತ ರಜಪೂತ, ಪ್ರಕಾಶ ಹೊಸಳ್ಳಿ, ಮಜುರಪ್ಪ ಶಾಂತಗೇರಿ, ಪುರಸಭೆ ಸದಸ್ಯ ಖಾದಿರಸಾಬ ಸಂಕನೂರ, ಕೆ.ಕೆ. ಮುಲ್ಲಾ, ಯಮನವ್ವ ಜಮ್ಮನಕಟ್ಟಿ ಇದ್ದರು.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಪಿಎನ್ಟಿ ಕ್ವಾಟರ್ಸ್ ಹಾಗೂ ಕಳಸಾಪುರ ರಸ್ತೆಯ ಉಳಿದ ಭಾಗಗಳಲ್ಲಿ ಮಂಗಳವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಕೂಡ್ಲಮಠ ಶಾಲೆಗೆ ಶೇ. 83 ಫಲಿತಾಂಶ
ಲಕ್ಷ್ಮೇಶ್ವರ: ಸಮೀಪದ ಶಿಗ್ಲಿಯ ಗ್ರಾಮ ಭಾರತಿ ಶಿಕ್ಷಣ ಸಮಿತಿಯ ಎಸ್.ಎಸ್. ಕೂಡ್ಲಮಠ ಕನ್ನಡ ಮಾಧ್ಯಮ ಶಾಲೆಯ ಎಸ್ಎಸ್ಎಲ್ಸಿ ಪರೀಕ್ಷೆಯ ಒಟ್ಟು ಫಲಿತಾಂಶವು ಶೇ. 83 ರಷ್ಟಾಗಿದೆ. ಶಾಲೆಯ ವಿದ್ಯಾರ್ಥಿ ಅಕ್ಷಯಕುಮಾರ ಕುದರಿ ಶೇ 89.60, ದುದ್ದುಸಾಬ ಶಿರಬಡಗಿ ಶೇ 88.16, ಗಣೇಶ ಮಾದಾಪುರಮಠ ಶೇ 84.64, ಮುರಗೆಪ್ಪ ಬೆನಕನಹಳ್ಳಿ ಶೇ 84.16, ಲಕ್ಷ್ಮೀ ಪಾಟೀಲ ಶೇ 83.68, ಜರೀನಾಬೇಗಂ ನಧಾಪ ಶೇ 83.36, ಕಾವೇರಿ ಬಳ್ಳಾರಿ ಶೇ 82.72, ಸಂಗೀತಾ ಶಿರಹಟ್ಟಿಮಠ ಶೇ 80.32, ಸುಸ್ಮೀತಾ ಪಾಟೀಲ ಶೇ 91.16, ಗುರುರಾಜ ದಾಸಣ್ಣವರ ಶೇ 80.16, ವೀರೇಶ ಹೊಸಮನಿ ಶೇ 80.64, ಶೃತಿ ತಂಬ್ರಳ್ಳಿ ಶೇ 80 ಅಂಕಗಳನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.