ಬಸವಣ್ಣನವರ ಆದರ್ಶ ಸಾರ್ವಕಾಲಿಕ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಮೇ 13
ಸಮಾಜದಲ್ಲಿನ ಜಾತೀಯತೆ ತೊಲಗಿಸಿ, ವಚನ ಕಾಯಕ ತತ್ವದ ಮೂಲಕ ಸೌಹಾರ್ದ ಬದುಕಿಗೆ ದಾರಿ ತೋರಿಸಿದ ಬಸವಣ್ಣನವರ ಆದರ್ಶಗಳು ಸಾರ್ವಕಾಲಿಕ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು. ಅವರು ಸೋಮವಾರ ಸ್ಥಳೀಯ ಪುರಸಭೆ ಸಭಾಭವನದಲ್ಲಿ ಬಸವ ಜಯಂತಿ ಪ್ರಯುಕ್ತ ನಡೆದ ಸಮಾರಂಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಾತನಾಡಿದರು. ಸ್ವಾರ್ಥಕ್ಕಾಗಿ ಬಾಳದೆ ಸಮಾಜದ ಒಳಿತಿಗಾಗಿ ಶ್ರಮಿಸಿ, ಜಾತಿ ಭೇದ ತೊರೆದು, ಸಹಬಾಳ್ವೆಗೆ ಮುಂದಾಗಿ ಎಂದು ವಚನಗಳ ಸಾರದೊಂದಿಗೆ ವಿಶ್ವಕ್ಕೆ ಸಂದೇಶ ನೀಡಿದರು. ಕೀಳರಿಮೆ ತೊರೆದು ನಿಸ್ವಾರ್ಥ ಭಾವನೆಯ ಮಹತ್ವ ಅರಿತು ಬದುಕು ನಡೆಸಿದಾಗ ಮಾತ್ರ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದರು. ಪುರಸಭಾ ಸದಸ್ಯ ಎಂ.ಎಸ್. ಹಡಪದ ಮಾತನಾಡಿ, ಬಸವಣ್ಣನವರು ಭಕ್ತಿ ಭಾವಕ್ಕೆ ಮಹತ್ವ ನೀಡಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಮಹಾನ್ ಚೇತನರಾಗಿದ್ದಾರೆಂದರು. ಪುರಸಭಾ ಸದಸ್ಯ ಶೇಕಣ್ಣ ಇಟಗಿ, ರವಿ ಕಲಾಲ, ಸುಮಿತ್ರಾ ತೊಂಡಿಹಾಳ, ಕೆ.ಓ. ಮುಲ್ಲಾ, ಸಿ.ಕೆ. ಕುಲಕರ್ಣಿ, ಬಿ.ಜಿ. ಇಂಡಿ, ಎಂ.ಬಿ. ಒಂಟಿ, ಮಹೇಶ ನಿಡಶೇಸಿ, ಪಿ.ಎನ್. ದೊಡ್ಡಮನಿ, ಬಸವರಾಜ ಬಳಗಾನೂರ, ಸಿ.ಡಿ. ದೊಡ್ಡಮನಿ, ಜಿ.ಎನ್. ಕಾಳೆ, ಎನ್.ಬಿ. ಬೆಲೇರಿ, ಹೇಮಾ ಮಾದಗುಂಡಿ, ಉಮಾ ಕುರಹಟ್ಟಿ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.