ಬಸವಣ್ಣನವರ ತತ್ವ ಇಂದಿಗೂ ಪ್ರಸ್ತುತ
ಕನ್ನಡಪ್ರಭ ವಾರ್ತೆ, ನರಗುಂದ, ಮೇ 13
12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವರು ಸಾರಿದ ತತ್ವ, ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು, ಇಂದಿನ ಯುವ ಜನಾಂಗ ಬಸವಣ್ಣನವರ ತತ್ವ, ಆದರ್ಶಗಳನ್ನು ಅರಿತುಕೊಳ್ಳುವ ಮೂಲಕ ನಾಡಿನ ಏಳ್ಗೆಗೆ ಶ್ರಮಿಸುವಂತೆ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ಸೋಮವಾರ ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿಯಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಈ ದೇಶದಲ್ಲಿ ಹಿಂದಿನ ದಿನಗಳಲ್ಲಿ ಕೆಲವು ಹಿತಾಸಕ್ತಿ ಜಾತಿಗಳ ಜನಾಂಗದವರು ತಮ್ಮ ಸ್ವಾರ್ಥಕ್ಕೆ ಕೆಳ ಜನಾಂಗವನ್ನು ಬಳಕೆ ಮಾಡಿಕೊಂಡು ಅವರನ್ನು ಮೂಲ ಸೌಲಭ್ಯಗಳಿಂದ ದೂರವಿಟ್ಟಿದ್ದರು.
12ನೇ ಶತಮಾನದಲ್ಲಿ ವಿಶ್ವ ಗುರು ಬಸವಣ್ಣ ಸಮಾಜದಲ್ಲಿ ಮೇಲು ಜಾತಿ, ಕೆಳಜಾತಿ ಎಂಬ ಭೇದ ಖಂಡಿಸಿ, ಸರ್ವ ಧರ್ಮದ ಶರಣರನ್ನು ಕೂಡಿಸಿ ಯಾವ ಧರ್ಮವೂ ಮೇಲಲ್ಲ, ಯಾವ ಧರ್ಮವೂ ಕೀಳಲ್ಲ ಎಂಬ ಮನೋಭಾವವನ್ನು ಜನರ ಮನಸ್ಸಿನಲ್ಲಿ ಬಿತ್ತುವಲ್ಲಿ ಶ್ರಮಿಸಿದರು. ಅಂತಹ ಮಹಾನ್ ಶರಣರ ಜೀವನಾದರ್ಶಗಳು ಇಂದಿನ ಯುವ ಸಮೂಹಕ್ಕೆ ಮಾದರಿಯಾಗಿದ್ದು, ಎಲ್ಲ ವರ್ಗದ ಜನರು ಸಮಾನರು ಎಂಬ ಅಂಶವನ್ನು ಅರಿತು ಈ ನಾಡಿನಲ್ಲಿ ಜೀವಿಸುವಂತಾಗಬೇಕು ಎಂದರು. ಬಿಜಾಪುರದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಅಮರೇಶ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು. ಡಿ.ಬಿ. ಇನಾಂದಾರ ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ತಹಸೀಲ್ದಾರ್ ವಿ.ಕೆ. ಪಾಟೀಲ, ತಾಪಂ ಅಧಿಕಾರಿ ಬಿ.ವಿ.ಪಾಟೀಲ, ಬಸವ ಸಮಿತಿ ತಾಲೂಕಾಧ್ಯಕ್ಷ ಚನ್ನಬಸಪ್ಪ ಕಂಠಿ, ಸಿ.ಎಚ್. ಕೋರಿ, ಶಿಮಣ್ಣ ಗೋವಶ್ವರ, ಕರವೇ ಅಧ್ಯಕ್ಷ ಚನ್ನು ನಂದಿ, ಆನಂದ ಬನಪ್ಪನವರ, ಪುರಸಭೆ ಅಧಿಕಾರಿ ಎಸ್. ರಾಜಶೇಖರ, ಸದಸ್ಯ ರಫೀಕ ಧಾರವಾಡ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಣಾಧಿಕಾರಿ ಮಂಗಳಾ ಪಾಟೀಲ ಸ್ವಾಗತಿಸಿದರು. ಶಾಂತಕುಮಾರ ಭಜಂತ್ರಿ ನಿರೂಪಿಸಿದರು.
ಖಾಲಿ ಕುರ್ಚಿ: ಪ್ರತಿ ವರ್ಷ ಸರ್ಕಾರದ ಮಟ್ಟದಲ್ಲಿ ವಿವಿಧ ಧರ್ಮ ಗುರುಗಳ ಮತ್ತು ವಿವಿಧ ಜಯಂತಿ ಕಾರ್ಯಕ್ರಮಗಳಿಗೆ ಸರ್ಕಾರಿ ರಜೆ ನೀಡಿ ಜಯಂತಿಗಳ ಆಚರಣೆ ಮಾಡಲು ನಿರ್ದೇಶನ ಕೊಟ್ಟಿರುತ್ತದೆ. ಆದರೆ, ಇಂತಹ ಕಾರ್ಯಕ್ರಮಗಳಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟೇ ಇದ್ದದ್ದು ವಿಪರ್ಯಾಸ.
ಜನರು ಕೂಡ ಇಂತಹ ಸಮಾರಂಭಗಳಿಗೆ ಹೆಚ್ಚು ಆಸಕ್ತಿ ವಹಿಸದೇ ಇರುವುದರಿಂದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಕುರ್ಚಿಗಳು ಖಾಲಿ ಖಾಲಿಯಾಗಿದ್ದು ಕಂಡು ಬಂದಿತು.