ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಬಕಾರಿ, ಲಾಟರಿ ನಿಷೇಧ ಕಚೇರಿ ಶೀಘ್ರದಲ್ಲೇ ಬಂದ್?

Srinivasa Murthy VN
Updated On : 23 Oct 2013, 12:38 pm

-ಶಿವಕುಮಾರ ಕುಷ್ಟಗಿ
ಕ.ಪ್ರ.ವಾರ್ತೆ ಗದಗ ಅ. 22
ಗ್ರಾಮೀಣ ಪ್ರದೇಶದಲ್ಲಿ ಜನರು ಕಳ್ಳಭಟ್ಟಿ ಮತ್ತು ಒಂದಂಕಿ(ಮಟ್ಕಾ) ಜೂಜಾಟ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೊಂದರಂತೆ ಸರ್ಕಾರ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಕಚೇರಿ ಸ್ಥಾಪಿಸಿದೆ. ಆದರೀಗ ಈ ಕಚೇರಿಗಳು ಪೊಲೀಸ್ ವರ್ಗಾವಣೆಯಲ್ಲಿ ಸೂಕ್ತ ಸ್ಥಳ ಸಿಗದೇ ಇರುವ ಅಧಿಕಾರಿಗಳ ಪುನರ್ವಸತಿ ಕೇಂದ್ರಗಳಾಗಿ ಮಾರ್ಪಟ್ಟಿವೆ. ಸ್ಥಾಪನೆ ಮಾಡಿದ ಉದ್ದೇಶ ಮಾತ್ರ ಕಿಂಚಿತ್ತು ಸಫಲವಾಗಿಲ್ಲ. ಹಾಗಾಗಿ ಸರ್ಕಾರ ಈ ವಿಭಾಗವನ್ನೇ ಮುಚ್ಚುವ ಸಾಧ್ಯತೆ ನಿಚ್ಚಳವಾಗಿದೆ. 2007ರಲ್ಲಿ ಅಂದಿನ ಸರ್ಕಾರ ಪ್ರತಿ ಜಿಲ್ಲೆಗೆ ಒಂದರಂತೆ ರಾಜ್ಯದ 30 ಕಡೆಗಳಲ್ಲಿ ಅಬಕಾರಿ ಮತ್ತು ಲಾಟರಿ ನಿಷೇಧ ವಿಭಾಗ ಸ್ಥಾಪಿಸಿತು. ಇದಕ್ಕಾಗಿ ಪೊಲೀಸ್ ಇಲಾಖೆಯ 30 ಸಿಪಿಐ ಹಾಗೂ 30 ಪಿಎಸ್‌ಐ ಹಾಗೂ ಪ್ರತಿ ತಾಲೂಕಿಗೆ ಇಬ್ಬರು ಕಾನ್‌ಸ್ಟೇಬಲ್ ಸೇರಿದಂತೆ ಒಟ್ಟು 518ಕ್ಕೂ ಹೆಚ್ಚು ಸಿಬ್ಬಂದಿ ಈ ವಿಭಾಗದಲ್ಲಿ ಸದ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ವಿಭಾಗ ಪ್ರಾರಂಭಿಸುವ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ಲೇವಿನ್ ಸೇರಿದಂತೆ ಆನ್‌ಲೈನ್ ಲಾಟರಿಗಳ ಪ್ರಭಾವ ಬಲು ಜೋರಾಗಿತ್ತು. ಇದರೊಟ್ಟಿಗೆ ಆಗತಾನೆ ಪ್ಯಾಕೆಟ್ ಸಾರಾಯಿಯನ್ನು ಸ್ಥಗಿತಗೊಳಿಸಿದ್ದರಿಂದ ರಾಜ್ಯದಲ್ಲಿ ವ್ಯಾಪಕವಾದ ಕಳ್ಳಭಟ್ಟಿ ದಂಧೆ ನಡೆಯುತ್ತಿತ್ತು. ಇದನ್ನೆಲ್ಲ ತಡೆಗಟ್ಟುವ ನಿಟ್ಟಿನಲ್ಲಿ ಈ ವಿಭಾಗ ಸ್ಥಾಪನೆಯಾಗಿತ್ತು.

ಕನಸಾಗಿಯೇ ಉಳಿದ ಆಶಯ
2011ರ ಡಿಸೆಂಬರ್ ಅಂತ್ಯದೊಳಗೆ ರಾಜ್ಯವನ್ನು ಕಳ್ಳಭಟ್ಟಿ ಮುಕ್ತವಾಗಿಸಬೇಕು ಎನ್ನುವ ಮಹತ್ತರ ಗುರಿಯನ್ನು ಈ ವಿಭಾಗ ಹೊಂದಿತ್ತು. ಅದಕ್ಕಾಗಿ ರಾಜ್ಯಾದ್ಯಂತ ಸಂಚರಿಸಿ ವಿಶೇಷ ಕಾರ್ಯಕ್ರಮವನ್ನು ಮಾಡಿತ್ತು. ಆದರೆ, ಅದ್ಯಾವುದೂ ಇಲ್ಲಿವರೆಗೂ ಈಡೇರಿಲ್ಲ. ಬದಲಾಗಿ ಮುಂಬರುವ ಮಾರ್ಚ್ ವೇಳೆಗೆ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿರುವ ಈ ವಿಭಾಗವನ್ನು ಮುಚ್ಚುವ ಚಿಂತನೆ ನಡೆಸಿದೆ. ಇದಕ್ಕೆ ಮುಖ್ಯ ಕಾರಣ ಪೊಲೀಸ್ ಅಧಿಕಾರಿಗಳಿಗೆ ತಮಗೆ ಬೇಕಾದ ಸೂಕ್ತ ಸ್ಥಳ ಸಿಗದೇ ಈ ವಿಭಾಗಕ್ಕೆ ಬರುತ್ತಾರೆ. ಸೂಕ್ತ ಸ್ಥಳ ಸಿಕ್ಕ ತಕ್ಷಣವೇ ಮತ್ತೆ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಹೀಗಾಗಿ, ಇದು ವರ್ಗಾವಣೆ ಸಿಗದೇ ಇರುವ ಅಧಿಕಾರಿಗಳ ನಿರಾಶ್ರಿತರ ತಾಣವಾಗಿದೆ ಎನ್ನುವುದನ್ನು ಇಲಾಖೆಯ ಮೂಲಗಳೇ ಹೇಳುತ್ತವೆ.

ಹೊಂದಾಣಿಕೆ ಇಲ್ಲ
ಈ ವಿಭಾಗ ಪ್ರಾರಂಭ ಆದಾಗಿನಿಂದಲೂ ರಾಜ್ಯ ಅಬಕಾರಿ ಇಲಾಖೆಗೂ ಪೊಲೀಸ್ ಇಲಾಖೆಯ ಈ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೂ ಹೊಂದಾಣಿಕೆಯಾಗಲೇ ಇಲ್ಲ. ಇವರಿಬ್ಬರ ನಡುವಿನ (ಎರಡು ಇಲಾಖೆ) ಗೊಂದಲದಿಂದ ಆರೋಪಿಗಳು ಮಾತ್ರ ಇಂದಿಗೂ ನಿರಂತರವಾಗಿ ತಮ್ಮ ದಂಧೆ ನಡೆಸುತ್ತಲೇ ಇದ್ದಾರೆ. ರಾಜ್ಯದಲ್ಲಿ ಸದ್ಯಕ್ಕಂತೂ ಅಬಕಾರಿ ಕಳ್ಳಸಾಗಾಟ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿದ್ದರೂ ಪರಸ್ಪರ ಒಬ್ಬರ ಮೇಲೊಬ್ಬರು ಬೊಟ್ಟು ಮಾಡುತ್ತಿದ್ದು, ಇದು ಆರೋಪಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದೆ.
ಬೇಡದ ಕೂಸು
ವಿಭಾಗ ಸ್ಥಾಪಿಸುವ ಸಂದರ್ಭದಲ್ಲಿ ಸರ್ಕಾರವೇನೂ ಈ ಕಚೇರಿಗಳ ನಿರ್ಮಾಣಕ್ಕೆ ಅನುದಾನ ನೀಡಿಲ್ಲ. ಬದಲಾಗಿ ಜಿಲ್ಲಾ ಕೇಂದ್ರದಲ್ಲಿರುವ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿಯೇ ಇದ್ದ ಖಾಲಿ ಕಟ್ಟಡಗಳನ್ನು ಬಳಸಿಕೊಂಡು ಕಳೆದ 5 ವರ್ಷಗಳಿಂದ ಕಚೇರಿಯನ್ನು ನಡೆಸಲಾಗುತ್ತಿದೆ. ಈ ವಿಭಾಗ ರಾಜ್ಯ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಬೇಡದ ಕೂಸಾಗಿದೆ. ಯಾವ ಕೆಲಸವನ್ನು ಮಾಡಿದರೂ ಇಲಾಖೆಯಿಂದ ಮೆಚ್ಚುಗೆಯ ಮಾತು ಸಿಗುವುದಿಲ್ಲ ಎನ್ನುವ ಮಾತುಗಳು ಪೊಲೀಸ್ ಇಲಾಖೆಯಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಅಬಕಾರಿ ಮತ್ತು ಲಾಟರಿ ನಿಷೇಧ ದಳ 2014ರ ಮಾರ್ಚ್‌ವರೆಗೂ ಕಾರ್ಯ ನಿರ್ವಹಿಸಲಿದೆ. ಮಾರ್ಚ್ ಬಳಿಕ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎನ್ನುವುದು ತಿಳಿದಿಲ್ಲ.
-ಬಸವರಾಜ್ ಮಾಲಗತ್ತಿ, ಅಬಕಾರಿ ಮತ್ತು ಲಾಟರಿ ನಿಷೇಧ ದಳ ಬೆಂಗಳೂರು ವಿಭಾಗದ ಎಸ್ಪಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement