ಸಿಡಿಲಿಗೆ ಮೂವರು ರೈತರು ಬಲಿ
ಗದಗ/ಕೊಪ್ಪಳ/ಯಾದಗಿರಿ: ಗದಗ, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಮಂಗಳವಾರ ತಲಾ ಒಬ್ಬರಂತೆ ಸಿಡಿಲಿಗೆ ಒಟ್ಟು ಮೂವರು ರೈತರು ಬಲಿಯಾಗಿದ್ದಾರೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮುಕ್ತುಂಪುರ ಗ್ರಾಮದ ಹೊಲದಲ್ಲಿ ಮಂಗಳವಾರ ಸಂಜೆ ಕೆಲಸ ಮಾಡುತ್ತಿದ್ದ ಅಂದಪ್ಪ ತಿಪ್ಪನ್ನವರ (30) ಸಿಡಿಲು ಬಡಿದು ಅಸುನೀಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಪ್ಪಳ ಜಿಲ್ಲೆಯ ಕಾರಟಗಿಯ ಜಮಾಪುರ ಗ್ರಾಮದ ಮಹಾಂತೇಶ ಹೂನೂರು (24) ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾನೆ. ಕಾರಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿಗೆ ಸಮೀಪದ ಮುಸ್ಲಾಪುರ ಗ್ರಾಮದಲ್ಲಿ ಒಂದು ಎತ್ತು ಸತ್ತಿದ್ದು, ಗಾಯಗೊಂಡಿರುವ ಎತ್ತಿನ ಮಾಲೀಕ ರುಸಬೇಂದ್ರಗೌಡರು ಗಂಗಾವತಿಯ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಾದೇವಪ್ಪ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬೈರಿಮಡ್ಡಿ ಗ್ರಾಮದಲ್ಲಿ ಅಸುನೀಗಿದೆ.
ಅಲ್ಲಲ್ಲಿ ಮಳೆ: ಗದಗ ಜಿಲ್ಲೆಯಾದ್ಯಂತ ಮಂಗಳವಾರ ಬೆಳಗ್ಗೆಯಿಂದಲೇ ತೀವ್ರ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಸ್ವಲ್ಪ ಮಳೆಯಾಗಿದೆ. ಆಗಾಗ್ಗೆ ತುಂತುರು ರೂಪದಲ್ಲಿ ಬರುವ ಮಳೆ ರೈತರ ಹಿಂಗಾರು ಬಿತ್ತನೆಗೆ ಅನುಕೂಲಕರವಾಗಿದ್ದರೆ, ಕಟಾವು ಹಂತಕ್ಕೆ ಬಂದಿರುವ ಶೇಂಗಾ ಮತ್ತು ಈರುಳ್ಳಿ ಬೆಳೆದ ರೈತರಿಗೆ ಮಳೆ ಕೊಂಚ ಆತಂಕ ಸೃಷ್ಟಿಸಿದೆ.