ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅಜ್ಞಾನ ತೊಲಗಿಸಿ ವಿಜ್ಞಾನ ಬೆಳಗಿಸಬೇಕು

Srinivasa Murthy VN
Updated On : 29 Oct 2013, 11:06 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 28
ಬೆತ್ತಲೆ ಸೇವೆ, ಮಗುವನ್ನು ಮೇಲಿಂದ ಕೆಳಕ್ಕೆ ಎಸೆಯುವುದು, ಪಲ್ಲಕ್ಕಿಯಲ್ಲಿ ಮನುಷ್ಯರನ್ನು ಹೊತ್ತು ತಿರುಗುವುದು, ಅರೆಬೆತ್ತಲೆ ಸೇವೆ ಮಾಡುವುದು ಇಂತಹ ಕೆಟ್ಟ ಹಾಗೂ ಮೂಢ ನಂಬಿಕೆಯನ್ನು ಕಿತ್ತೊಗೆಯುವ ಕಾನೂನು ರಾಜ್ಯ ಸರ್ಕಾರ ಜಾರಿಗೆ ತರುವ ಮೂಲಕ ಅಜ್ಞಾನವನ್ನು ತೊಲಗಿಸಿ ವಿಜ್ಞಾನವನ್ನು ಬೆಳಗಿಸಬೇಕೆಂದು ಗದಗ-ಡಂಬಳ ಸಂಸ್ಥಾನ ಮಠದ ಜ. ತೋಂಟದ ಡಾ. ಸಿದ್ಧಲಿಂಗ ಶ್ರೀಗಳು ಹೇಳಿದರು. ಅವರು ಈಚೆಗೆ ರು. 1.35 ಕೋಟಿ ವೆಚ್ಚದಲ್ಲಿ ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ತೋಂಟದಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕಟ್ಟಡಗಳ ಭೂಮಿಪೂಜೆ ಹಾಗೂ ಕಂಪ್ಯೂಟರ್ ಕೊಠಡಿಯ ಅಡಿಗಲ್ಲು ಸಮಾರಂಭದ ಸಾನ್ನಿಧ್ಯವಹಿಸಿ ಮಾತನಾಡಿದರು. ವಿಜ್ಞಾನ ಇಷ್ಟೊಂದು ಮುಂದುವರಿದಿರುವ ಇಂದಿನ ಕಾಲದಲ್ಲಿಯೂ ಸಹ ಜನರ ತಲೆಯಲ್ಲಿ ಮೂಢನಂಬಿಕೆಯನ್ನು ಬಿತ್ತುವವರ ವಿರುದ್ಧ ಈ ಕಾನೂನು ಅವಶ್ಯ. ಆಧುನಿಕ ಭಾರತದ ದೇವಾಲಯಗಳೆಂದರೆ ಪ್ರಾಥಮಿಕ, ಮಾಧ್ಯಮಿಕ ಹಾಗೂ ಕಾಲೇಜುಗಳು. ವಿಜ್ಞಾನ ಆಧುನಿಕ ಜಗತ್ತಿನ ಅದ್ಭುತ ಶಕ್ತಿ. ಇಂದು ವಿಜ್ಞಾನದ ಅಭಿವೃದ್ಧಿ ಬಹಳ ಮುಖ್ಯ. ಆದ್ದರಿಂದ ರೋಣ ಮತ್ತು ಶಿರಹಟ್ಟಿ ಶಾಸಕರು ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡಬೇಕು, ಶಿಕ್ಷಣದಿಂದ ಮಕ್ಕಳು ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯ ಎಂದರು. ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಸಿಎಂ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುತ್ತಿದೆ. ಮುಂಬರುವ ದಿನಗಳಲ್ಲಿ ಈ ತಾಲೂಕಿನಲ್ಲಿ ಅವಶ್ಯವಿರುವ ಎಲ್ಲ ಶಾಲಾ-ಕಾಲೇಜುಗಳ ಶಿಕ್ಷಕ ಹಾಗೂ ಸಿಬ್ಬಂದಿಯನ್ನು ಪೂರ್ಣಗೊಳಿಸುವ ಭರವಸೆಯನ್ನು ಸಿಎಂ ಸಿದ್ದರಾಮಯ್ಯನವರು ನೀಡಿದ್ದಾರೆ. ತಾವು ಹಾಗೂ ದೊಡ್ಡಮನಿಯವರು ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುವುದಾಗಿ ತಿಳಿಸಿದರು. ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿದರು. ಶಾಸಕ ರಾಮಕೃಷ್ಣ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸಲೀಂಅಹ್ಮದ್, ಕರಬಸಪ್ಪ ಹಂಚಿನಾಳ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಗೌತಮ್ಚಂದ್ ಚೋಪ್ರಾ, ಧ್ರುವಕುಮಮಾರ ಹೊಸಮನಿ, ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಈಶ್ವರಪ್ಪ ಬೆಟಗೇರಿ, ಪಾಲಾಕ್ಷಿ ಗಣದಿನ್ನಿ, ಕೊಟ್ರೇಶ ಅಂಗಡಿ, ಮೌನೇಶ ಬಡಿಗೇರ, ಡಿ.ಡಿ. ಮೋರನಾಳ, ಹೇಮಂತಗೌಡ ಪಾಟೀಲ, ಡಾ. ಬಿ.ಎಸ್. ಮೇಟಿ, ಇಓ ಡಿ. ಮೋಹನ್, ಬಿಇಓ ಎಂ.ಎ.ರಡ್ಡೇರ, ಎ.ಪಿ. ದಂಡಿನ, ಬಸವಂತಪ್ಪ ಮುದ್ದಿ, ಲೋಕೋಪಯೋಗಿ ಇಲಾಖೆ ಅಧಿಕಾರಿ ವಿ.ಆರ್. ಹುಬ್ಬಳ್ಳಿಮಠ, ಶೇಖರಾಜ ಹೊಸಮನಿ, ಶರಣಪ್ಪ ಕುಬಸದ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement