ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಅವಹೇಳನ ಖಂಡಿಸಿ ಪ್ರತಿಭಟನೆ

Srinivasa Murthy VN
Updated On : 29 Oct 2013, 11:07 am

ಕನ್ನಡಪ್ರಭ ವಾರ್ತೆ, ಮುಂಡರಗಿ, ಅ. 28
ಕವಿ ರಾಘವಾಂಕ ವಿರಚಿತ ಸಿದ್ಧರಾಮ ಚರಿತೆ ವಿಕೃತಗೊಳಿಸಿರುವ ಪುಸ್ತಕ ಮುಟ್ಟುಗೋಲಿಗೆ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಕುರಿತ ಅವಹೇಳನ ಖಂಡಿಸಿ ಅನ್ನದಾನೀಶ್ವರ ಸೇವಾ ಸಮಿತಿ ಹಾಗೂ ವಿವಿಧ ಸಂಘಟನೆಗಳು ಕಪ್ಪು ಪಟ್ಟಿ ಕಟ್ಟಿಕೊಂಡು ಸೋಮವಾರ ಬೃಹತ್ ಮೌನಮೆರವಣಿಗೆ ನಡೆಸಿ, ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದವು.
ದೇವಪ್ಪ ಇಟಗಿ, ಮಂಜುನಾಥ ಇಟಗಿ ಮಾತನಾಡಿ, ಶರಣ-ಶರಣೆಯರ ಕುರಿತು ಅವಮಾನಕರವಾಗಿ ಗ್ರಂಥವನ್ನು ಪ್ರಕಟಿಸಿದ್ದು, ರಾಜ್ಯದ ಜನತೆಗೆ ನೋವುಂಟು ಮಾಡಿದೆ. ನಕಲಿ ಚರಿತೆ ಪ್ರಕಟಿಸಿದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಈಚೆಗೆ ಕೆಲವರು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಖಂಡನಾರ್ಹವಾಗಿದೆ. ಸೌಜನ್ಯಾ ಪ್ರಕರಣಕ್ಕೆ ಸಛಂಬಂಧಿಸಿದಂತೆ ಹೆಗ್ಗಡೆ ಅವರ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ಹೆಗ್ಗಡೆ ಅವರ ಮೇಲಿನ ಕಳಂಕ ಅಳಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದರು.
ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಸಮಾವೇಶಗೊಂಡ ಮೌನ ಪ್ರತಿಭಟನಾ ರ್ಯಾಲಿಯನ್ನು ಮುಂಡರಗಿ ಜ. ಡಾ. ನಾಡೋಜ ಅನ್ನದಾನೀಶ್ವರ ಶ್ರೀಗಳು ಚಾಲನೆ ನೀಡಿದರು. ಪ್ರತಿಭಟನಾ ರ್ಯಾಲಿ ಪಟ್ಟಣದ ಬಜಾರ್, ಹೊಸಬಸ್ ನಿಲ್ದಾಣ, ಬೃಂದಾವನ ವೃತ್ತದಿಂದ ಕೊಪ್ಪಳ ವೃತ್ತಕ್ಕೆ ಆಗಮಿಸಿ ಅಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. ಪುರಸಭೆ ಸದಸ್ಯ ಶಂಕರಗೌಡ ಪಾಟೀಲ ಮಾತನಾಡಿದರು.
ಕಾಂತರಾಜ ಹಿರೇಮಠ, ಕೊಟ್ರೇಶ ಅಂಗಡಿ, ಲಿಂಗರಾಜಗೌಡ ಪಾಟೀಲ, ನೀಲಕಂಠಪ್ಪ ಪತ್ತಾರ, ಎಚ್.ಎಸ್. ಪಾಟೀಲ, ಎ.ಕೆ. ಬೆಲ್ಲದ, ಶಿವು ಹಡಪದ, ದೇವು ಹಡಪದ, ವಿಜಯಕುಮಾರ ರಾಟಿ, ಪಾಲಾಕ್ಷಿ ಗನದಿನ್ನಿ, ಬಸವರಾಜ ರಾಮೇನಹಳ್ಳಿ, ಮಂಜು ಮುಧೋಳ, ಅನ್ನದಾನೀಶ್ವರ ಯುವಕ ಸಂಘ, ತಾಲೂಕು ಯುವಸೇವಾ ಸಂಘಟನೆ, ಕನ್ನಡಕ್ರಾಂತಿ ಸೇನೆ, ಕನ್ನಡ ಜನಾಭಿವೃದ್ಧಿ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ, ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಂಘ, ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಎ.ವೈ.ನವಲಗುಂದ, ಅಂದಪ್ಪ ಬೆಲ್ಲದ, ಎಸ್.ಎಂ. ಹೊಸಮಠ, ಡಿ.ಸಿ. ಮಠ, ಚನ್ನವೀರಯ್ಯ ಹಿರೇಮಠ, ಪ್ರಾ. ವಿ.ಎಫ್. ಅಂಗಡಿ, ಬಿ.ಕೆ.ಪಾಟೀಲ, ಆರ್.ಎಲ್. ಪೊಲೀಸ್ಪಾಟೀಲ, ವಿ.ಎಸ್. ಚವಡಿ, ವಿ.ಸಿ. ಹಂಚಿನಾಳ, ಪವನ್ ಚೋಪ್ರಾ, ಮಂಜುನಾಥ ಮುಧೋಳ, ಶಿವು ಬಾರಕೇರ, ಮಂಜುನಾಥ ಗೋಡಿ, ಪ್ರದೀಪ ಗುಡದಪ್ಪನವರ, ಮಹಾದೇವ ಡೊಣ್ಣಿ, ಎಸ್.ಎಸ್. ಇನಾಮತಿ, ವೀರೇಶ ಸಜ್ಜನರ, ಶಂಕರಗೌಡ ಪಾಟೀಲ, ಸುರೇಶ ಮಾಳೇಕೊಪ್ಪ, ಪ್ರಶಾಂತ ತಾವರಗೇರಿ, ಟಿ.ಬಿ. ಮೇಟಿ, ಪರಶುರಾಮ ರಾಮನಹಳ್ಳಿ, ಸುಭಾಷ ಗುಡಿಮನಿ, ಪರಶುರಾಮ ಕರಡಿಕೊಳ್ಳ, ಶಿವಪ್ಪ ಸಜ್ಜನರ, ವೀರೇಶ ಗೋಡಿ, ಎನ್.ಎಫ್. ಅಕ್ಕೂರ, ಸಿ.ಎಸ್. ಅರಸನಾಳ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.

ವೇತನಕ್ಕಾಗಿ ಗ್ರಾಪಂಗೆ ಬೀಗ
ಶಿರಹಟ್ಟಿ: 20 ತಿಂಗಳ ಬಾಕಿ ವೇತನ ನೀಡುವಂತೆ ಆಗ್ರಹಿಸಿ ತಾಲೂಕಿನ ಛಬ್ಬಿ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಸೋಮವಾರ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದರು.
ಸುಮಾರು 20 ತಿಂಗಳ ವೇತನ ನೀಡದೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯ ವರವಿ, ಮಜ್ಜೂರ, ಗುಡ್ಡದಪುರ, ಶಿವಾಜಿನಗರ ಗ್ರಾಮಗಳಲ್ಲಿ ನೀರು ಪೂರೈಕೆ ಹಾಗೂ ಸ್ವಚ್ಛತೆ ಕಾರ್ಯವನ್ನು ನಿಲ್ಲಿಸಿ ನೌಕರರು ಬಾಕಿ ವೇತನ ಮಂಜೂರು ಮಾಡಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಏಪ್ರಿಲ್ 2013ರಿಂದಲೇ ಹೊಸ ವೇತನ ಜಾರಿಗೆ ಬಂದಿದ್ದು, ತಾಲೂಕಿನ ಇನ್ನುಳಿದ 23 ಗ್ರಾಪಂಗಳಲ್ಲಿ ಹೊಸ ನಿಯಮದಂತೆ ವೇತನ ನೀಡುತ್ತಿದ್ದಾರೆ. ಆದರೆ, ಛಬ್ಬಿ ಗ್ರಾಪಂ ನೌಕರರಿಗೆ ಮಾತ್ರ ಹಳೆ ವೇತನವನ್ನೇ ಮುಂದುವರಿಸಿದ್ದಾರೆ. ಅನೇಕ ಬಾರಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಮನಕ್ಕೆ ತಂದರೂ ಬರೀ ಭರವಸೆಯ ಮಾತನ್ನೇ ಹೇಳುತ್ತಿದ್ದಾರೆ ಎಂದು ದೂರಿದರು.
ಗುಮಾಸ್ತ, ಕರವಸೂಲಿಗಾರ, ಗಣಕಯಂತ್ರ ಆಪರೇಟರ್ಗಳು, ಎಲೆಕ್ಟ್ರಿಷಿಯನ್, ನೀರಗಂಟಿ, ಸಿಪಾಯಿ ಇನ್ನಿತರ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ರಾಜ್ಯ ಸರ್ಕಾರ ತಮ್ಮ ಅನೇಕ ಬೇಡಿಕೆಗಳನ್ನು ಈಡೇರಿಸಿ ಆದೇಶಗಳನ್ನು ಹೊರಡಿಸಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಇದು ಜಾರಿಯಾಗದೆ ನೌಕರರು ಸೌಲಭ್ಯದಿಂದ ವಂಚಿತರಾಗಿದ್ದು, ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಗ್ರಾಪಂ ಕಾರ್ಯಾಲಯದ ಎದುರು ಪ್ರತಿಭಟನೆ ನಡೆಸುತ್ತಿದ್ದ ವಿಷಯ ತಿಳಿದ ಗ್ರಾಪಂ ಅಧ್ಯಕ್ಷ ಹನಮಂತಗೌಡ ಫಕೀರಗೌಡ ಪಾಟೀಲ, ಸದಸ್ಯ ದೇವಪ್ಪ ಲಮಾಣಿ ಸ್ಥಳಕ್ಕೆ ಆಗಮಿಸಿ ಪಿಡಿಒ ಹಾಗೂ ನೌಕರರ ಸಭೆ ಕರೆದು ಸಮಗ್ರ ಮಾಹಿತಿ ಪಡೆದರು. ಬಳಿಕ ಸಬೂಬ ಹೇಳದೆ ಒಂದು ವಾರದೊಳಗಾಗಿ ಬಾಕಿ ವೇತನ ನೀಡುವ ಭರವಸೆ ನೀಡದ್ದರಿಂದ ಪ್ರತಿಭಟನೆ ಹಿಂಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement