ಕೆಸಿಸಿ ಬ್ಯಾಂಕ್ಗೆ ರು. 66 ಕೋಟಿ ಬೆಳೆವಿಮೆ ಜಮೆ: ಸಿ.ಎಂ. ಉದಾಸಿ
ಹಾನಗಲ್ಲ: ಕಳೆದ ವರ್ಷದ ರೈತರ ಬೆಳೆವಿಮೆ ಪರಿಹಾರದ ರು. 66 ಕೋಟಿ ಹಣ ಕೆಸಿಸಿ ಬ್ಯಾಂಕಿಗೆ ಜಮಾ ಆಗಿದ್ದು, ಶೀಘ್ರದಲ್ಲಿ ರೈತರ ಕೈಸೇರಲಿದೆ ಎಂದು ಮಾಜಿ ಸಚಿವ, ಕೆಜೆಪಿ ಮುಖಂಡ ಸಿ.ಎಂ. ಉದಾಸಿ ತಿಳಿಸಿದರು. ಸುದ್ದಿಗಾರರಿಗೆ ಸೋಮವಾರ ಈ ವಿವರ ನೀಡಿದ ಉದಾಸಿ, ಹಾವೇರಿ ಜಿಲ್ಲೆಯ ರೈತರ ರು. 60 ಕೋಟಿ, ಧಾರವಾಡ ಜಿಲ್ಲೆಯ ರೈತರ ರು. 8 ಕೋಟಿ ಕೆಸಿಸಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್ಗಳಿಗೆ ಬಂದಿದೆ. ಇನ್ನು 6-7 ದಿನಗಳಲ್ಲಿ ಎಲ್ಲ ವಿಎಸ್ಎಸ್ ಬ್ಯಾಂಕ್ಗಳಿಗೆ ಜಮಾ ಆಗಲಿದೆ. ಹಾವೇರಿ ಜಿಲ್ಲೆಯಲ್ಲಿ 1.18 ಲಕ್ಷ ರೈತರು ಹಾಗೂ ಗದಗ ಜಿಲ್ಲೆಯಲ್ಲಿ ಕೇವಲ 1700 ರೈತರು ಬೆಳೆವಿಮೆ ಮಾಡಿಸಿದ್ದರು. ಹಾವೇರಿ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದರಿಂದ ಹೆಚ್ಚು ರೈತರು ಬೆಳೆವಿಮೆ ಯೋಜನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು. ಆದರೆ ಕೆಲವರು ಸ್ವ-ಪ್ರತಿಷ್ಠೆಗಾಗಿ ಅನವಶ್ಯಕವಾಗಿ ಟೀಕೆ ಮಾಡುತ್ತಿದ್ದಾರೆ. ರೈತರ ಹಿತ ಕಾಪಾಡುವುದು ಜನಪ್ರತಿನಿಧಿಗಳ ಕರ್ತವ್ಯ. ಈ ಹಿನ್ನೆಲೆಯಲ್ಲಿ ಕರ್ನಾಟಕ ಜನತಾ ಪಕ್ಷದ ವತಿಯಿಂದ ತಾವು ಬೆಳೆವಿಮೆ ಪರಿಹಾರಕ್ಕಾಗಿ ಪ್ರತಿಭಟನೆ ನಡೆಸಿ, ಹಣ ಬಿಡುಗಡೆಗಾಗಿ ಒತ್ತಾಯಿಸಿದ್ದೆವು. ಅದರ ಫಲವಾಗಿ ಪರಿಹಾರ ಹಣ ರೈತರ ಕೈಸೇರುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಸೌಜನ್ಯಾ ಪ್ರಕರಣ ಸಿಬಿಐಗೆ ಒಪ್ಪಿಸಿ
ಗದಗ: ಧರ್ಮಸ್ಥಳದ ಸೌಜನ್ಯಾ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದ ಘಟನೆ ನಡೆದು ಅ. 9ಕ್ಕೆ 1 ವರ್ಷ ಗತಿಸಿದ್ದರೂ, ಸರಿಯಾದ ತನಿಖೆ ನಡೆಸದೇ ನಿಷ್ಕಾಳಜಿ ತೋರಿಸುತ್ತಿದ್ದು, ಈ ಕೂಡಲೇ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ತಪ್ಪಿತಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಜಿಲ್ಲಾ ಸಮಿತಿ ಒತ್ತಾಯಿಸಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಮಿತಿ ಜಿಲ್ಲಾಧ್ಯಕ್ಷ ಪೀರು ರಾಠೋಡ ಅವರು, ಕಳೆದ 10 ವರ್ಷಗಳಲ್ಲಿ ಧರ್ಮಸ್ಥಳ ಉಜಿರೆ ಗ್ರಾಮಗಳಲ್ಲಿ ನಡೆದ ಅಸಹಜ ಸಾವುಗಳ ಅಂಕಿ ಸಂಖ್ಯೆಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಪಡೆದಿದ್ದ ಮಾಹಿತಿ ಪ್ರಕಾರ ಈ ಭಾಗದಲ್ಲಿ 104 ಮಹಿಳೆಯರು ಸಾವಿಗೀಡಾದ ಪ್ರಕರಣ ದಾಖಲಾಗಿವೆ. ಇಷ್ಟು ಸಾವುಗಳ ಪ್ರಕರಣ ಮುಚ್ಚಿ ಹೋಗುತ್ತಿರುವುದು ವಿಪರ್ಯಾಸ ಎಂದು ತಿಳಿಸಿದ್ದಾರೆ. ಇಂತಹ ಅತ್ಯಾಚಾರ ನಡೆಸುತ್ತಿರುವವರನ್ನು ಪೊಲೀಸ್ ಇಲಾಖೆ ಕಂಡು ಹಿಡಿದು ಸೂಕ್ತ ಶಿಕ್ಷೆ ವಿಧಿಸಬೇಕು. ಅಂದಾಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗಲು ಸಾಧ್ಯ ಎಂದು ಶಿವಾನಂದ, ಸಾಗರ ಮಾಡಳ್ಳಿ, ಶರಣಯ್ಯ ಸೂಗಿರಯ್ಯನಮಠ ಮುಂತಾದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ಹೆನ್ರಿ ಪುಣ್ಯತಿಥಿ
ಗದಗ: ರೆಡ್ಕ್ರಾಸ್ ಸಂಸ್ಥೆಯ ಜನಕ ಹೆನ್ರಿ ಡೂನ್ಯಾಂಟ್ರವರ 103ನೇ ಪುಣ್ಯತಿಥಿಯನ್ನು ಸಂಸ್ಥೆಯ ಚೇರ್ಮನ್ ಶ್ರೀನಿವಾಸ ಹುಯಿಲಗೋಳ ಅಧ್ಯಕ್ಷತೆಯಲ್ಲಿ ಅ. 30ರ ಬೆಳಗ್ಗೆ 10 ಗಂಟೆಗೆ ನಗರದ ರೆಡ್ಕ್ರಾಸ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯ ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಆಗಮಿಸುವಂತೆ ಗೌರವ ಕಾರ್ಯದರ್ಶಿ ಡಾ. ಆರ್.ಎನ್. ಗೊಡಬೋಲೆ ತಿಳಿಸಿದ್ದಾರೆ.
ಶಾಶ್ವತ ಗಟಾರಕ್ಕೆ ಆಗ್ರಹ
ಧಾರವಾಡ: ನಗರದ ಸರ್ವಮಂಗಳಾ ವೃತ್ತದಲ್ಲಿಯ ಒಡ್ಡಿನ ಕೆರೆಗೆ ಶಾಶ್ವತ ಗಟಾರ ನಿರ್ಮಿಸಬೇಕೆಂದು ಒತ್ತಾಯಿಸಿ ಇಲ್ಲಿನ ತುಂಗಭದ್ರಾ ಮಹಿಳಾ ಮಂಡಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು. ಸಪ್ತಾಪುರ ಕೊನೆ ಕ್ರಾಸ್ನಿಂದ ಶ್ರೀನಗರದ ವರೆಗೆ ಇರುವ ಒಡ್ಡಿನ ಕೆರೆ ಸಂಪೂರ್ಣವಾಗಿ ಹಾಳಾಗಿದ್ದು, ಚರಂಡಿ ನೀರು ಮಿಶ್ರಣವಾಗುತ್ತಿದೆ. ಇದರಿಂದ ಅಲ್ಲಿಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಪಾಲಿಕೆ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಮಂಡಳದ ಪದಾಧಿಕಾರಿಗಳು ದೂರಿದರು. ಕೆಲ ದಿನಗಳ ಹಿಂದೆ ಕೆರೆಯಲ್ಲಿಯ ಹೂಳನ್ನು ತೆಗೆಸಲಾಗಿತ್ತು. ಹೂಳು ತೆಗೆಸಿದ ನಂತರ ಯಾವುದೇ ಕಾರ್ಯ ಮಾಡದೇ ಅರ್ಧಕ್ಕೆ ನಿಲ್ಲಿಸಿದ್ದಾರೆ. ಕೂಡಲೇ ಶಾಶ್ವತ ಗಟಾರ ನಿರ್ಮಿಸಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಬೇಕು ಎಂದು ಎಂ.ಎಸ್. ಕೊಪ್ಪಳ, ಎಸ್.ಆರ್. ಐರೋಜಿ, ಶಾಂತಾ ಕುರಿ, ಮಹಾದೇವಿ ಕೊಪ್ಪದ ಮತ್ತಿತರು ಒತ್ತಾಯಿಸಿದ್ದಾರೆ.
ಶೇ. 98ರಷ್ಟು ಫಲಿತಾಂಶ
ನವಲಗುಂದ: ಇಲ್ಲಿಯ ಶ್ರೀ ಜ.ಗು. ಅಜಾತ ನಾಗಲಿಂಗ ಮಹಾಸ್ವಾಮಿ ವಿದ್ಯಾಪೀಠದ ಕೈಗಾರಿಕಾ ತರಬೇತಿ ಸಂಸ್ಥೆಯು ಜುಲೈ 2013ರಲ್ಲಿ ನಡೆದ ಐಟಿಐ ಪರೀಕ್ಷೆಯಲ್ಲಿ ಶೇ. 98ರಷ್ಟು ಫಲಿತಾಂಶ ಪಡೆದಿದೆ. ಫಿಟ್ಟರ್, ಇಲೆಕ್ಟ್ರೀಷಿಯನ್, ಮೆಕ್ಯಾನಿಕ್ ಡಿಸೈಲ್ ಹಾಗೂ ಹೊಲಿಗೆ ತರಬೇತಿ ಘಟಕಗಳಲ್ಲಿ ತರಬೇತಾರ್ಥಿಗಳು ಶೇ. 100ಕ್ಕೆ 100ರಷ್ಟು ಫಲಿತಾಂಶ ಪಡೆದಿದ್ದಾರೆ. ಮೆಕ್ಯಾನಿಕ್ ಟ್ರ್ಯಾಕ್ಟರ್ ವೃತ್ತಿಯಲ್ಲಿ ಶೇ. 75ರಷ್ಟು ಫಲಿತಾಂಶ ಬಂದಿದೆ. ಕುಮಾರ ರವಿ ಹನಸಿ ಶೇಕಡಾ 88.28ರಷ್ಟು ಅಂಕ ಪಡೆದು ಸಂಸ್ಥೆ ಪರ ಪ್ರಥಮ ಸ್ಥಾನ ಪಡೆದಿದ್ದಾನೆ. ರವಿ ಹನಸಿ ಸಾಧನೆಗೆ ಆಡಳಿತ ಮಂಡಳಿ, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ರಿಕ್ರಿಯೇಶನ್ ಕ್ಲಬ್ ಕಟ್ಟಡ ನೆಲಸಮಗೊಳಿಸಿ: ಮನವಿ
ಧಾರವಾಡ: ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿನ ರಿಕ್ರಿಯೇಶನ್ ಕ್ಲಬ್ ಕಾನೂನು ಬಾಹಿರವಾಗಿದ್ದು, ನೆಲಸಮಗೊಳಿಸಬೇಕೆಂದು ಆಗ್ರಹಿಸಿ ಹುಬ್ಬಳ್ಳಿ ಸ್ಪೋರ್ಟ್ಸ್ ಗ್ರೌಂಡ್ ಬಚಾವೋ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಪಾಲಿಕೆಗೆ ಸೇರಿದ ಜಾಗೆಯಲ್ಲಿ ಕ್ಲಬ್ ಅತಿಕ್ರಮಣ ಕಟ್ಟಡಕ್ಕೆ ಅಡಿಪಾಯ ಹಾಕಲಾಗುತ್ತಿದೆ. ಸರ್ಕಾರ ಕೂಡ ಸೂಕ್ತ ಕ್ರಮ ಜರುಗಿಸಲು ಜಿಲ್ಲಾಧಿಕಾರಿಗೆ ಸೂಚಿಸಿದ್ದು, ಕೂಡಲೇ ಕಟ್ಟಡವನ್ನು ನೆಲಸಮಗೊಲಸಬೇಕು ಎಂದು ಮನವಿಯಲ್ಲಿ ಸದಸ್ಯರು ಒತ್ತಾಯಿಸಿದ್ದಾರೆ. ಮನವಿ ಸಲ್ಲಿಸುವ ಕುರಿತಂತೆ ತುಸು ಹೊತ್ತು ಗೊಂದಲ ಉಂಟಾದ ಸಂದರ್ಭವೂ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯಿತು. ಜಿಲ್ಲಾಧಿಕಾರಿಗಳೇ ಮನವಿ ಸ್ವೀಕರಿಸಬೇಕೆಂದು ಸಮಿತಿ ಸದಸ್ಯರು ಪಟ್ಟು ಹಿಡಿದರು. ಸಮೀರ ಶುಕ್ಲ ಆಗಮಿಸಿದಾಗ ಸಮಿತಿ ಪದಾಧಿಕಾರಿಗಳು ಕಟು ಮಾತಿನಿಂದ ಸರ್ಕಾರದ ಕ್ರಮ ಖಂಡಿಸಿದಾಗ, ಸರಿಯಾಗಿ ಮಾತನಾಡುವುದಿದ್ದರೆ ಮಾತನಾಡಿ, ಇಲ್ಲದಿದ್ದರೆ ಹೋಗ್ರಿ ಎಂದು ಗದರಿಸಿದ್ದೂ ಆಯ್ತು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಉತ್ಸವ ಮೂರ್ತಿಗಳಂತೆ ಕೂತಿದ್ದು, ಈ ಕುರಿತು ಬದ್ಧ ನಿರ್ಣಯ ಕೈಗೊಳ್ಳಲು ಆಗುತ್ತಿಲ್ಲ. 75 ದಿನಗಳಿಂದ ಹೋರಾಟ ನಡೆದಿದ್ದರೂ ಜಿಲ್ಲಾಡಳಿತ ಕ್ರಮ ವಹಿಸುತ್ತಿಲ್ಲ ಎಂದು ಸಮಿತಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಮನವಿ ಸ್ವೀಕರಿಸಿದ ಸಮೀರ ಶುಕ್ಲ, ಪರಿಶೀಲನೆ ನಡೆಸುವ ಭರವಸೆ ನೀಡಿದರು. ಸಮಿತಿ ಅಧ್ಯಕ್ಷ ಸಿ.ಬಿ.ಎಲ್. ಹೆಗಡೆ, ಮನೋಜ ಹಾನಗಲ್, ಕಾಡಯ್ಯ ಹಿರೇಮಠ, ಹೂವಪ್ಪ ದಾಯಗೋಡಿ, ವೆಂಕಟೇಶ ಸವದತ್ತಿ, ಶರದ ಭಗತ್, ಅನಿತಾ ಗುಂಜಾಳ, ಅಭಿಷೇಕ ಇಜಾರೆ ಇತರರಿದ್ದರು.
ಕಾಯಕ ನಿಷ್ಠೆ ಅವಶ್ಯ
ಲಕ್ಷ್ಮೇಶ್ವರ: ದಕ್ಷತೆ, ವೃತ್ತಿಪರತೆಯೊಂದಿಗೆ ಸಂಸ್ಥೆಯ ಅಭಿವೃದ್ಧಿಗೆ ಶ್ರಮಿಸಿ ಕೆಲಸ ಮಾಡುವುದು ಅವಶ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಿ.ವಿ. ಕೆರಿಮನಿ ಅಭಿಪ್ರಾಯಪಟ್ಟರು. ಅವರು ಪಟ್ಟಣದ ಕೃಷ್ಣಾ ಚಿತ್ರಮಂದಿರದಲ್ಲಿ ಶನಿವಾರ ಸಂಜೆ ನಡೆದ ಯೂನಿಯನ್ ಬ್ಯಾಂಕಿನ ವ್ಯವಸ್ಥಾಪಕ ವಿಜಯಕುಮಾರ ನಾಕೋಡ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಧುನಿಕ ಪೈಪೋಟಿಯ ಜಗತ್ತಿನಲ್ಲಿ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ ಸಂಸ್ಥೆಯನ್ನು ಅಭ್ಯುದಯದತ್ತ ಒಯ್ಯುವುದು ಸಾಮಾನ್ಯವಾದ ಕಾರ್ಯವಲ್ಲ. ಸಮಸ್ಯೆಗಳನ್ನು ಹೊತ್ತು ಬರುವ ಗ್ರಾಹಕರೊಂದಿಗೆ ನಗುಮೊಗದಿಂದ ಅವರ ಸಮಸ್ಯೆಗೆ ಪರಿಹಾರ ನೀಡಿ ಅಥವಾ ಸೂಚನೆಗಳನ್ನು ನೀಡಿ ಸ್ನೇಹದಿಂದ ವರ್ತಿಸಿ, ರೈತರ ಹಿತೈಷಿಯಾಗಿ ಬ್ಯಾಂಕಿನ ಅಭಿವೃದ್ಧಿಗೆ ದುಡಿಯುವ ವ್ಯವಸ್ಥಾಪಕರ ಕಾರ್ಯ ಸುಲಭವಲ್ಲ ಎಂದರು. ಸಾಹಿತಿ ಕೊತ್ತಲ ಮಹಾದೇವಪ್ಪ, ಎನ್.ಎಂ. ನದಾಫ್, ಎಂ.ವಿ. ವಾಲಿ, ವಿಠಲ್ ಸಿದ್ಲಿಂಗ್, ಚೆನ್ನಬಸಪ್ಪ ನರೇಗಲ್ಲ, ಪರಶುರಾಮಸಾ ಬದಿ ಮಾತನಾಡಿದರು. ಬಿ.ಎಂ. ಅಂಗಡಿ, ಲಕ್ಷ್ಮಣ ಬಡಿಗೇರ, ಸೋಮು ಲಮಾಣಿ, ಗದಗ ಮುಸ್ತಾಕ್ ಅಹ್ಮದ್ ಮುಂತಾದವರಿದ್ದರು. ಸಾಹಿತಿ ಬಿ.ಎಂ. ಕಾಳಗಿ ನಿರೂಪಿಸಿದರು. ಎಂ.ಆರ್. ಕೊತ್ತಲ ವಂದಿಸಿದರು.
ಬಸ್ ಡಿಕ್ಕಿ: ಬೈಕ್ ಸವಾರ ಸಾವು
ಕಲಘಟಗಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರನೊಬ್ಬ ಮೃತಪಟ್ಟಿರುವ ಘಟನೆ ಇಲ್ಲಿನ ಧಾರವಾಡ-ಕಲಘಟಗಿ ರಸ್ತೆಯ ಜೋಡಳ್ಳಿ ಕ್ರಾಸ್ ಬಳಿ ಭಾನುವಾರ ತಡರಾತ್ರಿ ನಡೆದಿದೆ. ನರಗುಂದ ತಾಲೂಕಿನ ಸಿದ್ದಾಪುರದ ಚನಬಸಪ್ಪ ಮಲ್ಲೇಶಪ್ಪ ಸಾತಣ್ಣವರ(24) ಸಾವನ್ನಪ್ಪಿದ ನತದೃಷ್ಟ. ತಾಲೂಕಿನ ಗಂಗಾಪುರದಿಂದ ಧಾರವಾಡಕ್ಕೆ ಹೊರಟಿದ್ದ ಬಸ್ ಹಾಗೂ ಧಾರವಾಡದಿಂದ ಜೋಡಳ್ಳಿಗೆ ಬರುತ್ತಿದ್ದ ಹಿರೋ ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಡಿಡಿಪಿಐ ರಾಜೇಂದ್ರ ಪ್ರಸಾದಗೆ ಸನ್ಮಾನ
ಗದಗ: ಜಿಲ್ಲೆಯ ಸರ್ವಾಂಗೀಣ ಶೈಕ್ಷಣಿಕ ಪ್ರಗತಿಗಾಗಿ, ವಿಶೇಷವಾಗಿ ಶೈಕ್ಷಣಿಕ ಗುಣಮಟ್ಟ ಹಾಗೂ ಪರೀಕ್ಷಾ ಫಲಿತಾಂಶ ಹೆಚ್ಚಿಸುವಲ್ಲಿ ಎಲ್ಲ ಶಿಕ್ಷಕರು ಪ್ರಾಮಾಣಿಕತೆ, ಶ್ರದ್ಧೆ ಹಾಗೂ ಅರ್ಪಣಾ ಮನೋಭಾವನೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ನೂತನ ಡಿಡಿಪಿಐ ರಾಜೇಂದ್ರ ಪ್ರಸಾದ ಹೇಳಿದರು. ಅವರು ಈಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಉತ್ತರ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ವೇದಿಕೆಯ ವತಿಯಿಂದ ಏರ್ಪಡಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಪ್ರಾಚಾರ್ಯ ಎಸ್.ವಿ. ಸಂಕನೂರ, ಪಿ.ಎಸ್. ಕಾಶಪ್ಪನವರ, ಎಸ್.ವೈ. ಚಿಕ್ಕಟ್ಟಿ ಮುಂತಾದವರು ಮಾತನಾಡಿದರು. ಎಸ್.ಡಿ. ಹೊಸಳ್ಳಿ, ಜೆ.ಎಸ್. ಕಲ್ಯಾಣಿ, ಯು.ವಿ. ಮಾಳೆಕೊಪ್ಪ, ಬಿ.ಎಫ್. ಕಾಕನೂರ, ಎಂ.ಎಸ್. ಕಲಕೋಟಿ, ಪಿ.ಎಸ್. ಲಕ್ಕುಂಡಿ, ಎಸ್.ವೈ. ಗುಗಲೋತರ, ಜಿ.ವಿ. ಗೆದಗೇರಿ, ಎಂ.ವಿ. ಹಿರೇಮಠ, ಎಂ.ಎಸ್. ಮಟ್ಟಿ, ದೇಶಪಾಂಡೆ, ಎನ್.ವಿ. ಜೋಷಿ, ವೆಂಕಟೇಶ್ವರ ಪ್ರೌಢಶಾಲೆಯ ಚೇರ್ಮನ್ ಬಿ.ಟಿ. ದಾಸರ, ಕಾರ್ಯದರ್ಶಿ ವಿ.ಬಿ. ಶೇಷಗಿರಿ, ಸಂಜೀವಸ್ವಾಮಿ ಮುಂತಾದವರು ಇದ್ದರು. ಎನ್.ವಿ. ಜೋಷಿ ವಂದಿಸಿದರು.