ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗ್ಯಾಸ್ ನೋಂದಣಿಗೆ ಆಧಾರ್ ಕಡ್ಡಾಯವಲ್ಲ

Srinivasa Murthy VN
Updated On : 29 Oct 2013, 11:06 am

ಧಾರವಾಡ: ಸಿಲಿಂಡರ್ ನೋಂದಣಿ ಮಾಡಿಸಲು ಆಧಾರ್ ಕಡ್ಡಾಯವಲ್ಲ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಭಾರತ್, ಹಿಂದೂಸ್ತಾನ ಹಾಗೂ ಇಂಡಿಯನ್ ಪೆಟ್ರೋಲಿಯಂ ಕಂಪನಿ ಅಧಿಕಾರಿಗಳ, ಗ್ಯಾಸ್ ಸಿಲಿಂಡರ್ ಏಜೆನ್ಸಿಗಳ ಮಾಲೀಕರ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಧಾರ್ ನಂಬರ್ ನೀಡಿದರೆ ಮಾತ್ರ ಸಿಲಿಂಡರ್ ವಿತರಿಸುತ್ತೇವೆ ಎಂದು ಏಜೆನ್ಸಿಗಳು ಗ್ರಾಹಕರಿಗೆ ಕಿರಿಕಿರಿ ಮಾಡುವಂತಿಲ್ಲ. ಆಧಾರ್ ಸಂಪೂರ್ಣ ಕಡ್ಡಾಯವಾಗಿಲ್ಲ. ಈ ಕುರಿತು ಭಾರತ ಸರ್ಕಾರ ಮುಂಬರುವ ಜನವರಿ ಒಳಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅಲ್ಲಿ ವರೆಗೂ ಆಧಾರ್ ಕಡ್ಡಾಯವಲ್ಲ ಎಂದು ಜೋಶಿ ಮತ್ತೊಮ್ಮೆ ಸ್ಪಷ್ಟಪಡಿಸಿದರು.
ಗ್ರಾಹಕರ ಜೊತೆ ಏಜೆನ್ಸಿ ಸಿಬ್ಬಂದಿ ಅಸಹ್ಯಕರವಾಗಿ ವರ್ತಿಸುತ್ತಿರುವುದಾಗಿಯೂ ದೂರು ಬಂದಿದೆ. ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸುವುದನ್ನು ಸಿಬ್ಬಂದಿ ಕಲಿಯಬೇಕು. ಈ ಕುರಿತು ಕಂಪನಿ ವ್ಯವಸ್ಥಾಪಕರು ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಿದರು.
ಧಾರವಾಡ ಜಿಲ್ಲೆಯಲ್ಲಿ 2,90,691 ಸಿಲಿಂಡರ್ ಸಂಪರ್ಕ ಕೊಡಲಾಗಿದೆ. ಈ ಪೈಕಿ 1,24,382 (ಶೇ. 42) ಜನ ಮಾತ್ರ ಆಧಾರ್ ಕಾರ್ಡ್ ಮಾಡಿಸಿದ್ದಾರೆ. ಈ ಪೈಕಿ ಬರೀ 54,082 ಬ್ಯಾಂಕಿನೊಂದಿಗೆ ಲಿಂಕ್ ಮಾಡಿದ್ದಾರೆ ಎಂದು ಆಧಾರ್ ಯೋಜನೆ ಜಿಲ್ಲಾ ವ್ಯವಸ್ಥಾಪಕರು ಸಭೆಗೆ ಮಾಹಿತಿ ನೀಡಿದರು.
ಹುಬ್ಬಳ್ಳಿಯ ಹರಿವಾಣ ಏಜೆನ್ಸಿ ನಾಲ್ಕು ತಿಂಗಳಿಂದ ಸರಿಯಾಗಿ ಸಿಲಿಂಡರ್ ವಿತರಣೆ ಮಾಡುತ್ತಿಲ್ಲ. ಅಂದಾಜು ನಾಲ್ಕು ಸಾವಿರ ಸಿಲಿಂಡರ್ ಬಾಕಿ ಇವೆ. ಅಲ್ಲದೆ, ಗ್ರಾಹಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬೆಲ್ಲ ದೂರುಗಳಿಗೆ ಜಿಲ್ಲಾಧಿಕಾರಿ ಸಮೀರ ಶುಕ್ಲ ಪ್ರತಿಕ್ರಿಯಿಸಿ, ಈ ರೀತಿ ಬೇಜವಾಬ್ದಾರಿ ಕೆಲಸ ಮಾಡುವ ಏಜೆನ್ಸಿ ರದ್ದುಗೊಳಿಸಿ ಎಂದು ಹಿಂದೂಸ್ತಾನ ಪೆಟ್ರೋಲಿಯಂ ವ್ಯವಸ್ಥಾಪಕ ಮಹೇಶಗೆ ಸೂಚಿಸಿದರು.
ಏಜೆನ್ಸಿ ಮಾಲೀಕರು ಒಂದು ವಾರದೊಳಗೆ ಸಿಲಿಂಡರ್ ವಿತರಿಸುವ ಭರವಸೆ ನೀಡಿದ ಬಳಿಕ ಪರವಾನಗಿ ರದ್ದುಗೊಳಿಸುವುದನ್ನು ತಡೆಯಲಾಯಿತು. ಅಲ್ಲದೆ, ಏಳು ದಿನಗಳಲ್ಲಿ ನೂರಾರು ಸಿಲಿಂಡರ್ ವಿತರಿಸುವುದನ್ನು ಬಾಕಿ ಇಟ್ಟುಕೊಂಡ ಏಜೆನ್ಸಿ ಮಾಲೀಕರನ್ನು ಜಿಲ್ಲಾಧಿಕಾರಿ ತರಾಟೆಗೆ ತೆಗೆದುಕೊಂಡರು.
ಸಿಲಿಂಡರ್ ವಿತರಣೆ: ಆನ್ಲೈನ್ ನೋಂದಣಿ ಕುರಿತು ಸಾರ್ವಜನಿಕರಿಂದ ಹಲವು ದೂರುಗಳು ಬಂದವು. ಇವುಗಳನ್ನು ಆಲಿಸಿದ ಸಂಸದ ಜೋಶಿ ಹಾಗೂ ಜಿಲ್ಲಾಧಿಕಾರಿ ಶುಕ್ಲ, ಎಲ್ಲ ಪೆಟ್ರೋಲಿಯಂ ಕಂಪನಿಗಳು ತಿಂಗಳಲ್ಲಿ ಧಾರವಾಡ ಅಥವಾ ಹುಬ್ಬಳ್ಳಿಯಲ್ಲಿ ಎರಡು ಬಾರಿ ದೂರು ಸ್ವೀಕರಿಸಿ, ಪರಿಹಾರ ಒದಗಿಸಬೇಕೆಂದು ಸಲಹೆ ನೀಡಿದರು. ಇದಕ್ಕೆ ಕಂಪನಿ ವ್ಯವಸ್ಥಾಪಕರು ಒಪ್ಪಿಕೊಂಡರು.
ಸಭೆಯಲ್ಲಿ ಶಾಸಕ ಅರವಿಂದ ಬೆಲ್ಲದ, ಜಿಪಂ ಸಿಇಒ ಪಿ.ಎ. ಮೇಘಣ್ಣವರ, ಭಾರತ್ ಪೆಟ್ರೋಲಿಯಂನ ವ್ಯವಸ್ಥಾಪಕ ಮೋಹನ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಕೆ.ಎಸ್. ಕಲ್ಲನಗೌಡರ, ಆಧಾರ ಯೋಜನೆಯ ಮಲ್ಲಿಕಾರ್ಜುನಯ್ಯ ಇದ್ದರು.

ರೈತರ ಸಾಲ ಮನ್ನಾ ಹಣ ಸಹಕಾರಿಗೆ ಬಿಡುಗಡೆಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಧಾರವಾಡ, ಅ. 28
ಬೆಂಬಲ ಬೆಲೆ, ಹವಾಮಾನ ವೈಪರೀತ್ಯ ಹೀಗೆ ನಾನಾ ಕಾರಣಗಳಿಂದಾಗಿ ಪರಿತಪಿಸುತ್ತಿರುವ ರೈತರ ಸಾಲ ಮನ್ನಾ, ಬೆಳೆ ವಿಮೆ ಹಣ ಬಿಡುಗಡೆ ಮತ್ತಿತರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ ಸೋಮವಾರ ಪ್ರತಿಭಟಿಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ರೈತರ ಸಾಲ ಮನ್ನಾ ಹಣವನ್ನು ಸಹಕಾರಿ ಸೊಸೈಟಿಗಳಿಗೆ ಬಿಡುಗಡೆ ಮಾಡಬೇಕು. ರೈತರ ಹಿತದೃಷ್ಟಿಯಿಂದ ಬೆಳೆ ವಿಮೆಗೆ ತನ್ನ ಪಾಲಿನ ಹಣ ಬಿಡುಗಡೆ ಬಿಡುಗಡೆ ಮಾಡಬೇಕು. ಮೆಕ್ಕೆಜೋಳ ಕ್ವಿಂಟಲ್ಗೆ ರು. 1800, ಕಬ್ಬು ಟನ್ ಗೆ ರು. 3500 ಹಾಗೂ ಬತ್ತ ಕ್ವಿಂಟಲ್ಗೆ ರು. 2800 ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಒತ್ತಾಯಿಸಲಾಯಿತು.
ಕಳಪೆ ಬಿ.ಟಿ. ಹತ್ತಿ ಬೀಜದಿಂದ ಹಾನಿಗೊಳಗಾದ ರೈತರಿಗೆ ಕಂಪನಿಯಿಂದ ಸೂಕ್ತ ಪರಿಹಾರ ಕೊಡಿಸಬೇಕು. ತರಕಾರಿ ಮಾರುಕಟ್ಟೆ ವ್ಯವಸ್ಥೆ ಸುಧಾರಿಸುವುದು ಮತ್ತು ಶೋಷಣೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್. ಪಾಟೀಲ, ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಶಿಮೌಳಿ ಕುಲಕರ್ಣಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಲ್ಲನಗೌಡ ಪಾಟೀಲ, ಜಿ.ಪಂ. ಉಪಾಧ್ಯಕ್ಷ ಫಕ್ಕೀರಪ್ಪ ಜಕ್ಕಣ್ಣವರ, ಸದಸ್ಯ ಮಹಾಬಲೇಶ್ವರ ಅಣ್ಣಗೇರಿ, ಬಸವರಾಜ ಕರಡಿಕೊಪ್ಪ, ಮುಖಂಡರಾದ ಈರಣ್ಣ ಜಡಿ, ವಿಜಯ ನಾಡಜೋಶಿ, ಅಶೋಕ ಮಸೂತಿ, ಮಡಿವಾಳಪ್ಪ ಉಳವಣ್ಣವರ, ಈಶ್ವರ ಶಿವಳ್ಳಿ, ಸಿ.ಎನ್. ಶ್ಯಾಗೋಟಿ, ಸುನೀಲ ಗುಡಿ, ದಶರಥರಾವ್ ದೇಸಾಯಿ, ಡಾ. ಕಲ್ಮೇಶ ಹಾವೇರಿಪೇಟ, ಬಸಣ್ಣ ಬೆಳವಣಕಿ, ಗುರುಪಾದಗೌಡ ಹನಮಂತಗೌಡ್ರ, ಬಸವರಾಜ ಬೆಣ್ಣಿ ಇದ್ದರು.

ಪರವಾನಗಿ ರದ್ದು
ನೋಂದಣಿ ಮಾಡಿದ 48 ಗಂಟೆಗಳಲ್ಲಿ ಏಜೆನ್ಸಿಗಳು ಸಿಲಿಂಡರ್ ಪೂರೈಸಬೇಕು. ಯಾವುದೇ ಕಾರಣಕ್ಕೂ ಹೊಸ ಸಿಲಿಂಡರ್ ಸಂಪರ್ಕದ ಸಂದರ್ಭದಲ್ಲಿ ಚಹಾಪುಡಿ, ಕುಕ್ಕರ್ ಹಾಗೂ ಇನ್ನಿತರೆ ವಸ್ತುಗಳ ಕಿಟ್ ಅನ್ನು ಒತ್ತಾಯಪೂರ್ವಕವಾಗಿ ಕೊಡುವಂತಿಲ್ಲ. ಒಂದು ವೇಳೆ ಈ ಬಗ್ಗೆ ದೂರು ಬಂದರೆ ಅಂತಹ ಏಜನ್ಸಿ ಪರವಾನಗಿ ರದ್ದು ಮಾಡಬೇಕಾದೀತು.
- ಪ್ರಹ್ಲಾದ್ ಜೋಶಿ,
ಸಂಸದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement