ಧಾರವಾಡ: ನವೆಂಬರ್ ತಿಂಗಳಲ್ಲಿ ಕನ್ನಡ ಹಬ್ಬ
ಧಾರವಾಡ: ರಾಜ್ಯೋತ್ಸವದ ನಿಮಿತ್ತ ನವೆಂಬರ್ ತಿಂಗಳಾದ್ಯಂತ ಕರ್ನಾಟಕ ವಿದ್ಯಾವರ್ಧಕ ಸಂಘ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಸಂಘದ ಅಧ್ಯಕ್ಷ ನಾಡೋಜ ಪಾಟೀಲ ಪುಟ್ಟಪ್ಪ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕನ್ನಡ ಸಾಹಿತ್ಯ ಪರಿಷತ್ತು ಸಹ ವರ್ಷಪೂರ್ತಿ ಮಾಡದಷ್ಟು ಕಾರ್ಯಕ್ರಮಗಳನ್ನು ವಿದ್ಯಾವರ್ಧಕ ಸಂಘ ಹಮ್ಮಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ನವೆಂಬರ್ 1ರಿಂದ 30ರ ವರೆಗೂ ವಿಚಾರ ಸಂಕಿರಣ, ಸಂವಾದ, ಸಾಹಿತ್ಯ ಚೇತನಗಳ (ಬೀಚಿ, ಎನ್ಕೆ, ಕೊಡಗಿನ ಗೌರಮ್ಮ, ಎಚ್.ವಿ. ಸಾವಿತ್ರಮ್ಮ, ಶ್ಯಾಮಲಾದೇವಿ ಬೆಳಗಾಂವಕರ, ಸರಸ್ವತಿ ದೇವಿ ರಾಜವಾಡೆ, ಏಣಗಿ ಬಾಳಪ್ಪ) ಶತಮಾನೋತ್ಸವ ಸ್ಮರಣೆ, ನೃತ್ಯ, ನಾಡಗೀತೆಗಳ ಹಾಡುಗಾರಿಕೆ ಹಾಗೂ ಗೀತಗಾಯನ, ಪಿಯುಸಿ ವಿದ್ಯಾರ್ಥಿಗಳಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಜಾಗೃತಿ ಮೂಡಿಸುವ 'ಕನ್ನಡವೇ ಸತ್ಯ ಕನ್ನಡವೇ ನಿತ್ಯ' ಕಾರ್ಯಕ್ರಮ, ರಾಜ್ಯೋತ್ಸವ ಕವಿಗೋಷ್ಠಿ, ಮಕ್ಕಳ ರಾಜ್ಯೋತ್ಸವ, ಜನಪದ ಕಾರ್ಯಕ್ರಮಗಳು, ರಂಗಕಲಾ ಸನ್ಮಾನ, ದತ್ತಿ ಉಪನ್ಯಾಸಗಳು ನಡೆಯಲಿವೆ ಎಂದು ವಿವರಿಸಿದರು. ನವೆಂಬರ್ 30ರಂದು ಕನ್ನಡ ಹಬ್ಬದ ಸಮಾರೋಪದಲ್ಲಿ ಕನ್ನಡದ ಗುಡಿ ವಿದ್ಯಾವರ್ಧಕ ಸಂಘದ ನಿರ್ಮಾಪಕ ರಾ.ಹ. ದೇಶಪಾಂಡೆ ಅವರ ಕಂಚಿನ ಮೂರ್ತಿಯನ್ನು ಸಂಘದ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವುದು. ನಂತರ ಬಾರಿಸು ಕನ್ನಡ ಡಿಂಡಿಮವ ವಿದ್ಯಾರ್ಥಿಗಳ ಕನ್ನಡ ಜಾಗೃತಿ ಜಾಥಾ ನಡೆಯಲಿದೆ. ಅಲ್ಲದೆ, ಪ್ರೊ. ಬರಗೂರು ರಾಮಚಂದ್ರಪ್ಪ ಹಾಗೂ ಗೊ.ರು. ಚನ್ನಬಸಪ್ಪ ಭಾಗವಹಿಸಲಿದ್ದಾರೆ ಎಂದು ಪಾಪು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಮಾತನಾಡಿ, ನ. 1ರಂದು ಬೆಳಗ್ಗೆ 10ಕ್ಕೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅಧ್ಯಕ್ಷತೆಯಲ್ಲಿ ಕನ್ನಡ ಹಬ್ಬಕ್ಕೆ ಚಾಲನೆ ದೊರೆಯಲಿದೆ. ನ. 14ರಂದು ಆವಿಷ್ಕಾರ ಸಂಸ್ಥೆಯಿಂದ ಗಂಧದ ಗುಡಿ ಸಿನಿಮಾ ಪ್ರದರ್ಶನ ನಡೆಯಲಿದೆ. ಅಲ್ಲದೇ, ನ. 16 ರಿಂದ 30ರ ವರೆಗೆ ರಾಜ್ಯದ ವಿವಿಧ ಕಲಾ ತಂಡಗಳಿಂದ ಯಕ್ಷಗಾನ, ಗಿರಿಜಾ ಕಲ್ಯಾಣ, ತಂತಿ, ಕೇಳು ಜನಮೇ ಜಯ, ಶರಣಸತಿ ಲಿಂಗಪತಿ, ವಿಶ್ವಬಂಧು ಮರಳಸಿದ್ಧ, ಮಹಾ ಬೆಳಗು, ಫಕೀರೇಶ್ವರ ಮಹಾತ್ಮೆ, ಸ್ವಂತ ಸತ್ಕಾರ, ರಕ್ತರಾತ್ರಿ ಪೌರಾಣಿಕ ನಾಟಕ, ಶ್ರೀ ಕೃಷ್ಣ ಪಾರಿಜಾತ, ಮಂಟೆಸ್ವಾಮಿ ಕಥಾ ಪ್ರಸಂಗ, ಶ್ರೀಕೃಷ್ಣ ಸಂಧಾನ ದೊಡ್ಡಾಟ, ನಿಜಗುಣ ಶಿವಯೋಗಿ ಸಣ್ಣಾಟ ಹಾಗೂ ಸಂಕ್ರಾತಿ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಕಾರಿ ಸದಸ್ಯರಾದ ಮೋಹನ ನಾಗಮ್ಮವರ, ಶಿವಾನಂದ ಬಾವಿಕಟ್ಟಿ, ಬಸವಪ್ರಭು ಹೊಸಕೇರಿ, ವಿಶ್ವೇಶ್ವರಿ ಹಿರೇಮಠ ಇದ್ದರು.