ಪಾಶ್ಚಿಮಾತ್ಯ ಸಂಸ್ಕೃತಿ ಒಲವು: ವಿಷಾದಕರ
ಗದಗ: ನಮ್ಮ ದೇಶದ ಭವ್ಯ ಇತಿಹಾಸ, ಪರಂಪರೆ ಮರೆತು ಇಂದಿನ ಜನತೆ ಪಾಶ್ಚಿಮಾತ್ಯರನ್ನು ಅನುಸರಿಸುತ್ತಿರುವುದು ವಿಷಾದಕರ ಸಂಗತಿ ಎಂದು ತಾಪಂ ಸದಸ್ಯ ಪ್ರಹ್ಲಾದ ಹೊಸಳ್ಳಿ ಹೇಳಿದರು. ಅವರು ತಾಲೂಕಿನ ಅಡವಿಸೋಮಾಪುರ ಗ್ರಾಮದ ಗೋಣಿ ಬಸವೇಶ್ವರ ದೇವಸ್ಥಾನದಲ್ಲಿ ಗದಗನ ಕನಕದಾಸ ಶಿಕ್ಷಣ ಸಮಿತಿಯ ಕೆವಿಎಸ್ಆರ್ ಸಂಯುಕ್ತ ಪಪೂ ಕಾಲೇಜಿನ ವತಿಯಿಂದ ಜರುಗಿದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರದಲ್ಲಿ ರಾಷ್ಟ್ರನಿರ್ಮಾಣದಲ್ಲಿ ಯುವಕರ ಪಾತ್ರ ಕುರಿತು ಜರುಗಿದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇಶದ ಭವಿಷ್ಯ ಉಜ್ವಲವಾಗಬೇಕಾದರೆ ಯುವ ಜನತೆ ಎಚ್ಚರಗೊಳ್ಳಬೇಕು. ಜಾತೀಯತೆ, ಭ್ರಷ್ಟಾಚಾರ, ಅನ್ಯಾಯ ತಡೆಗಟ್ಟುವ ನಿಟ್ಟಿನಲ್ಲಿ ಯುವ ಜನತೆ ಜಾಗ್ರತವಾಗಿರಬೇಕು. ಯುವಕರು ಸಾಮಾಜಿಕ ಕಳಕಳಿ, ಭಕ್ತಿ, ನ್ಯಾಯ, ನಿಷ್ಠೆ, ವಿನಯತೆ, ಸೇವಾ ಮನೋಭಾವನೆ, ಹಿರಿಯರನ್ನು ಗೌರವದಿಂದ ಕಾಣುವ ಭಾವನೆ ಮೈಗೂಡಿಸಿಕೊಳ್ಳಬೇಕೆಂದು ಎಂದರು. ನೆಹರು ಯುವ ಕೇಂದ್ರದ ಸಮನ್ವಯಾಧಿಕಾರಿ ಗೋವಿಂದ ಭಟ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲರಿಗೂ ಶಿಕ್ಷಣ ನೀಡಿ ಜಾಗೃತ ಗೊಳಿಸಬೇಕಾಗಿದೆ. ಕಡ್ಡಾಯವಾಗಿ ಬಯಲು ಮಲ ವಿಸರ್ಜನೆಯನ್ನು ನಿಲ್ಲಿಸಿ, ಸರ್ಕಾರದ ವತಿಯಿಂದ ನಿರ್ಮಲ ಭಾರತ ಯೋಜನೆ ಅಡಿಯಲ್ಲಿ ಸಹಾಯ ಧನವನ್ನು ಪಡೆದು ಪ್ರತಿಯೊಂದು ಮನೆಯಲ್ಲಿ ಶೌಚಾಲಯವನ್ನು ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದರು. ಶಿಬಿರಾಧಿಕಾರಿ ಪ್ರೊ. ವಿ.ಎಸ್. ದಲಾಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಶಿಬಿರಾಧಿಕಾರಿ ಆರ್.ಎನ್. ಭಂಡಾರಿ, ಸಂಗಪ್ಪ ಮಂಚಗಲ್, ಅರವಿಂದಪ್ಪ ಚಿಕ್ರಣ್ಣವರ, ಈರಪ್ಪ ಮಾವರಿ, ವೀರಣ್ಣ ಅಂಗಡಿ ಮುಂತಾದವರು ಉಪಸ್ಥಿತರಿದ್ದರು. ಯಲ್ಲಪ್ಪ ಗುದಗಿ ಸ್ವಾಗತಿಸಿದರು. ಯಲ್ಲಪ್ಪ ಚಲವಾದಿ ನಿರೂಪಿಸಿದರು. ಶಬಿನಾಬಾನು ಪಠಾದ ವಂದಿಸಿದರು.
ರೇಲ್ವೆ: ಭೂಸ್ವಾಧೀನಕ್ಕೆ ಆಗ್ರಹಿಸಿ ಸಿಎಂಗೆ ಮನವಿ
ಕನ್ನಡಪ್ರಭ ವಾರ್ತೆ, ಗದಗ, ಅ. 28
2011-12, 2012-13ನೇ ಸಾಲಿನಲ್ಲಿ ಕೇಂದ್ರ ರೇಲ್ವೆ ಬಜೆಟ್ನಲ್ಲಿ ಮಂಡನೆಯಾದ ನೂತನ ರೈಲು ಮಾರ್ಗಗಳಾದ ಗದಗ-ವಾಡಿ, ಗದಗ-ಹಾವೇರಿ ಮಾರ್ಗಗಳಿಗೆ ರಾಜ್ಯ ಸರ್ಕಾರದಿಂದ ಭೂಸ್ವಾಧೀನಪಡಿಸಿಕೊಳ್ಳಲು ವಿಳಂಭವಾಗುತ್ತಿದ್ದು, ಕೂಡಲೇ ನೂತನ ರೈಲು ಮಾರ್ಗಗಳಿಗೆ ಕೇಂದ್ರ ರೈಲು ಮಂತ್ರಾಲಯಕ್ಕೆ ರಾಜ್ಯ ಸರ್ಕಾರ ಭೂಮಿ ಒದಗಿಸಬೇಕೆಂದು ಆಗ್ರಹಿಸಿ ರಾಜ್ಯ ರೇಲ್ವೆ ಅಭಿವೃದ್ಧಿ ವೇದಿಕೆ ವತಿಯಿಂದ ಸೋಮವಾರ ಜಿಲ್ಲೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಜಿಲ್ಲಾಧ್ಯಕ್ಷ ನಿಸ್ಸಾರಅಹ್ಮದ್ ಖಾಜಿ ಮಾತನಾಡಿ, ಉತ್ತರ ಕರ್ನಾಟಕವು ರೈಲು ಸೌಕರ್ಯಗಳಿಂದ ಬಹಳಷ್ಟು ವಂಚಿತಗೊಂಡಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ, ಪ್ರವಾಸೋದ್ಯಮದಿಂದ ಹಿಂದುಳಿದಿದ್ದು, ರೈಲು ಸೌಕರ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಕಲ್ಪಿಸುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಶೀಘ್ರದಲ್ಲಿ ನೂತನ ರೈಲು ಮಾರ್ಗಗಳಿಗೆ ಭೂಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ವಿಜಯ ಮುಳಗುಂದ, ಜಾವೇದ ಸುಂಕದ, ಬಸವಣ್ಣೆಯ್ಯ ಹಿರೇಮಠ, ಎನ್.ಕೆ. ಕೋರ್ಲಹಳ್ಳಿ, ಸಿ.ಜೆ.ಬಿ. ಹಿರೇಮಠ ಮುಂತಾದವರು ಉಪಸ್ಥಿತರಿದ್ದರು.
ಯೋಜನೆ ನಿರ್ಲಕ್ಷಿಸಿದರೆ ಉಗ್ರ ಹೋರಾಟ: ಕುಲಕರ್ಣಿ
ನರಗುಂದ: ಮಲಪ್ರಭಾ ಜಲಾಶಯಕ್ಕೆ ಕಳಸಾ ಬಂಡೂರಿ ನಾಲಾಗಳನ್ನು ಜೋಡಿಸಬೇಕೆಂದು ಸುಮಾರು 20 ವರ್ಷಗಳಿಂದ ಈ ಭಾಗದ ರೈತ ಸಮುದಾಯ ಹೋರಾಟ ಮಾಡಿದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಈ ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಳಸಾ ಬಂಡೂರಿ ಹೋರಾಟ ಸಮತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು. ಅವರು ಸೋಮವಾರ ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಕಳಸಾ ಬಂಡೂರಿ ಕಾಮಗಾರಿ ವಿಳಂಬ ಖಂಡಿಸಿ ಹಮ್ಮಿಕೊಂಡಿದ್ದ ಸಾಂಕೇತಿಕ ಧರಣಿಯಲ್ಲಿ ಮಾತನಾಡಿದರು. ಬಸವಗೌಡ ಚಿಕ್ಕನಗೌಡರ, ಚಳಪ್ಪ ನಾಯ್ಕರ, ಅಣ್ಣಪ್ಪಗೌಡ ಪಾಟೀಲ, ರುದ್ರಪ್ಪ ಗಾಣಿಗೇರ, ಅಲ್ಲಿಸಾಬ ನದಾಫ್, ಬಸವರಾಜ ಸಾಬಳೆ, ನೀಲಕ್ಕ ಹಸಿಬಿ, ಧಾರವಾಡದ ಶೋಭಾ ಚಲವಾದಿ, ರಮೇಶ ಗುಡದೇರಿ, ಉಮೇಶ ಲದ್ದಿ, ಅರ್ಜುನ ಮಾನೆ, ಕನಕಪ್ಪ ತಳವಾರ, ಆರ್.ಎ. ಅರಬಜಮಾದಾರ, ಶಂಕ್ರವ್ವ ತಿರಕನವರ, ವಿಕಾಸ ಸೊಪ್ಪಿನ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.