ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮೂಲ ಸೌಕರ್ಯ ಒದಗಿಸಿ: ಮನವಿ

Srinivasa Murthy VN
Updated On : 29 Oct 2013, 11:06 am

ಕನ್ನಡಪ್ರಭ ವಾರ್ತೆ, ಗದಗ, ಅ. 26
ಗದಗ-ಬೆಟಗೇರಿ ಅವಳಿ ನಗರದಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ಮೂಲ ಸೌಲಭ್ಯಕ್ಕಾಗಿ ಆಗ್ರಹಿಸಿ ಈಚೆಗೆ ಡಾ. ಬಿ.ಆರ್. ಅಂಬೇಡ್ಕರ್ ಕೊಳಚೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಗದಗ ಜಿಲ್ಲಾ ಘಟಕದ ವತಿಯಿಂದ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಬೆಟಗೇರಿ ಭಾಗದ ಬಿ.ಬಿ. ಬಣ್ಣದ ನಗರ ಹಾಗೂ ವಸಂತಸಿಂಗ್ ಜಮಾದಾರ ನಗರದ ಕೊಳಚೆ ಪ್ರದೇಶದಲ್ಲಿ ರಸ್ತೆ ಹಾಗೂ ಚರಂಡಿಗಳು ವ್ಯವಸ್ಥಿತ ರೀತಿಯಲ್ಲಿ ಇಲ್ಲದಿರುವುದರಿಂದ ತೊಂದರೆ ಅನುಭವಿಸುವಂತಾಗಿದೆ. ಸಮರ್ಪಕ ರಸ್ತೆ ಇಲ್ಲದೇ ಇರುವುದರಿಂದ ಇಲ್ಲಿ ಅಪಘಾತಗಳು ನಡೆಯುತ್ತಿವೆ. ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಈ ಕುರಿತು ನಗರಸಭೆ ಸೂಕ್ತ ಕ್ರಮ ಕೈಗೊಂಡು ಸಮರ್ಪಕ ಮೂಲ ಸೌಲಭ್ಯ ಕಲ್ಪಿಸಿ ಕೊಡಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಮನವಿ ಸ್ವೀಕರಿಸಿದ ಪೌರಾಯುಕ್ತರು ಅವಶ್ಯಕ ಮೂಲ ಸೌಲಭ್ಯಗಳ ಈಡೇರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಧರ್ಮಣ್ಣ ಹೊಸಮನಿ, ವಿನಾಯಕ ಬಳ್ಳಾರಿ, ಯುವರಾಜ ಬಳ್ಳಾರಿ, ಸುಭಾಸ ಕರ್ಣಿ, ರಾಷ್ಟ್ರೀನ್, ಕಮಲಾ ಕರ್ಣಿ, ಮಂಜುಳಾ ಅಂಗಡಿ, ಪಾರ್ವತೆವ್ವ ಲಡಾಲಿ, ಶಾಂತವ್ವ, ಭೀಮವ್ವ, ಬಿಬಿಜಾನ ತಹಸೀಲ್ದಾರ್, ಗಿರಿಜವ್ವ, ಶಾಂತವ್ವ ಮುಂತಾದವರು ಉಪಸ್ಥಿತರಿದ್ದರು.

ಕಟ್ಟಡಕ್ಕೆ ಉತ್ತಮ ಸಾಮಗ್ರಿ ಬಳಸಿ
ಗದಗ: ಮನೆ ಹಾಗೂ ವಾಣಿಜ್ಯ ಮಳಿಗೆ ಸೇರಿದಂತೆ ವಿವಿಧ ಕಟ್ಟಡಗಳನ್ನು ನಿರ್ಮಿಸುವಾಗ ಉತ್ತಮ ದರ್ಜೆಯ ಕಟ್ಟಡ ಸಾಮಗ್ರಿಗಳನ್ನು ಬಳಸಿ ದೀರ್ಘಕಾಲ ನಿಮ್ಮ ಕಟ್ಟಡ ಬಾಳುವಂತೆ ಪೂರ್ವ ಯೋಜನೆ ರೂಪಿಸಿಕೊಳ್ಳಿ ಎಂದು ಜೆಪಿ ಸಿಮೆಂಟ್ಸ್ನ ತಾಂತ್ರಿಕ ಅಧಿಕಾರಿ ಅರುಣಕುಮಾರ್ ಜಿ.ಆರ್. ತಿಳಿಸಿದರು. ಅವರು ಈಚೆಗೆ ನಗರದ ಕೇಶವ ಕ್ಲರ್ಕ್ಸ್ ಇನ್ ಸಭಾಂಗಣದಲ್ಲಿ ಕಟ್ಟಡ ಕಾರ್ಮಿಕರ ಸಂಘ ಹಾಗೂ ಸಿಮೆಂಟ್ ವಿತರಕರ ಸಂಘ, ಜೆಪಿ ಸಿಮೆಂಟ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ಕಟ್ಟಡಗಳ ನಿರ್ಮಾಣದಲ್ಲಿ ಗುಣಮಟ್ಟದ ವಸ್ತುಗಳ ಬಳಕೆ ಕುರಿತು ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ವಸ್ತುಗಳ ಬೆಲೆಯು ಗಗನಕ್ಕೇರಿದ ಇಂದಿನ ದಿನಗಳಲ್ಲಿ ಮನೆ ಮುಂತಾದ ಕಟ್ಟಡಗಳ ನಿರ್ಮಾಣ ಮಾಡುವಾಗ ತಂತ್ರಜ್ಞರ ಹಾಗೂ ಕಟ್ಟಡ ನಿರ್ಮಾಣ ಮೇಲ್ವಿಚಾರಕರ, ವಿನ್ಯಾಸಕಾರರ ಸಲಹೆ ಪಡೆದು ಉತ್ತಮ ವಸ್ತುಗಳನ್ನು ಬಳಸಿ ಪರಿಸರ ಸ್ನೇಹಿಯಾಗಿ, ಆರೋಗ್ಯಕ್ಕೆ ಪೂರಕ ರೀತಿಯಲ್ಲಿ ಕಟ್ಟಡಗಳನ್ನು ನಿರ್ಮಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ನವ ಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಎಸ್.ಎಸ್. ರಡ್ಡೇರ ಮಾತನಾಡಿ, ಉತ್ತಮ ಸಿಮೆಂಟ್, ಕಬ್ಬಿಣ ಹಾಗೂ ಉಪಕರಣಗಳನ್ನು ಗ್ರಾಹಕರು ಬಳಸಬೇಕು ಎಂದರು.  ವಿತರಕರಾದ ಶ್ರೀನಿವಾಸ ಸೊರಟೂರ, ಸಂಗಯ್ಯ ಹಿರೇಮಠ, ಜೆಪಿ ಸಿಮೆಂಟ್ ಮಾರುಕಟ್ಟೆ ವ್ಯವಸ್ಥಾಪಕ ಶಿವರಾಜ ಗೌರಿಪುರ, ಗದಗ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್.ಎನ್. ಕರಬಿಷ್ಟಿ, ಉಪಾಧ್ಯಕ್ಷ ಇಮಾಮಸಾಬ್ ಮುಜಾವರ, ಖಜಾಂಚಿ ಜಂದಿಸಾಬ ಬಳ್ಳಾರಿ, ಗೂಳಪ್ಪ ಹುಡೇದ, ಉಪಾಧ್ಯಕ್ಷ ಮುಜಾವರ ಸೇರಿದಂತೆ ಸದಸ್ಯರು ಹಾಗೂ ಗ್ರಾಹಕರು ಪಾಲ್ಗೊಂಡಿದ್ದರು.

ಸಂಸ್ಕಾರವಿರದ ಸಂಸಾರ ನಿರರ್ಥಕ: ಆದಿ
ಗದಗ: ಸಂಸ್ಕಾರವಿರದ ಸಂಸಾರ ನಿರರ್ಥಕ, ಸಂಸ್ಕಾರಭರಿತ ಜೀವನ ಸಾರ್ಥಕವಾಗುತ್ತದೆ ಎಂದು ಲಿಂಗಾಯತ ಪ್ರಗತಿಶೀಲ ಸಂಘದ ಶಿವಾನುಭವ ಸಮಿತಿ ಚೇರ್ಮನ್ ಎಸ್.ಎನ್. ಆದಿ ಹೇಳಿದರು. ಅವರು ಸ್ಥಳೀಯ ಜ. ತೋಂಟದಾರ್ಯ ಮಠದಲ್ಲಿ ಈಚೆಗೆ ಕುಮಾರೇಶ್ವರ ಧಾರ್ಮಿಕ ಪಾಠಶಾಲೆ ಸಂಚಾಲಕ ಗಂಗಾಧರದೇವರ ನೇತೃತ್ವದಲ್ಲಿ ಜರುಗಿದ 2142ನೇ ಶಿವಾನುಭವದಲ್ಲಿ ಸಂಸಾರ ಮತ್ತು ಸಂಸ್ಕಾರ ಕುರಿತು ಉಪನ್ಯಾಸ ನೀಡಿದರು. ಲಿಂಗಾಯತ ಧರ್ಮದಲ್ಲಿ ಸತಿಪತಿಗಳ ಆದರ್ಶ ಸಂಸಾರಕ್ಕೆ ಸನ್ಯಾಸದಷ್ಟೇ ಪ್ರಾಮುಖ್ಯ ನೀಡಲಾಗಿದೆ. ಕೌಟುಂಬಿಕ ಮೌಲ್ಯಗಳು ಸರಿಯಾಗಿದ್ದರೆ ಮಾತ್ರ ಸಾಮಾಜಿಕ ಮೌಲ್ಯಗಳು ಗಟ್ಟಿಗೊಳ್ಳಲು ಸಾಧ್ಯ. ತನುಮನ ಶುದ್ಧಿ, ಅರಿಷಡ್ವರ್ಗಗಳ ಮೇಲೆ ನಿಯಂತ್ರಣ, ಪರಧನ-ಪರಸ್ತ್ರೀ, ಕಾಯಕ, ಪ್ರತಿನಿತ್ಯ ಇಷ್ಟಲಿಂಗ ಪೂಜೆ, ವಿಭೂತಿ ಧಾರಣೆ, ಊಟವನ್ನು ಪ್ರಸಾದವೆಂದು ಸ್ವೀಕರಿಸುವ ಮನೋಭೂಮಿಕೆ ಹಿರಿಯರಿಗೆ ಗೌರವ ನೀಡುವ ಪರಿಪಾಠಗಳು ನಡೆದುಬಂದರೆ ಒಂದು ಸಂಸಾರ ಇಡಿ ಸಮಾಜದ ಒಳಿತಿಗೆ ದಾರಿದೀಪವಾಗುವ ಅರ್ಹತೆ ಪಡೆಯುತ್ತದೆ ಎಂದರು. ಸಂಘದ ಉಪಾಧ್ಯಕ್ಷ ಮೃತ್ಯುಂಜಯ ಸಂಕೇಶ್ವರ, ಸಂಘದ ಕಾರ್ಯದರ್ಶಿ ಈರಣ್ಣ ಹೊನಗಣ್ಣವರ, ಸಹಕಾರ್ಯದರ್ಶಿ ಗುರುಬಸವಲಿಂಗ ತಡಸದ, ಉಪಾಧ್ಯಕ್ಷೆ ಶಿವಲೀಲಾ ಕುರಡಗಿ, ಕೋಶಾಧ್ಯಕ್ಷ ಪ್ರಭಯ್ಯ ಹಿರೇಮಠ ಮುಂತಾದವರು ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಕಾಶ ಕರಿಸೋಮನಗೌಡ್ರ ಸ್ವಾಗತಿಸಿದರು. ಶಂಕ್ರಣ್ಣ ಅಂಗಡಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement