ರಿಕ್ರಿಯೇಶನ್ ಕ್ಲಬ್ನಿಂದ ರಸ್ತೆ ಅತಿಕ್ರಮಣ
ಹುಬ್ಬಳ್ಳಿ: ಡಾ. ದೇಶಪಾಂಡೆ ನಗರದ ನಾಡಗೌಡ ಆಸ್ಪತ್ರೆ ಬಳಿ ರಸ್ತೆ ಅತಿಕ್ರಮಿಸುವ ಕರ್ನಾಟಕ ಜಿಮಖಾನಾ ಕ್ಲಬ್ನ ಕುತಂತ್ರಕ್ಕೆ ತಡೆಯೊಡ್ಡಬೇಕು ಎಂದು ಉತ್ತರ ವಿಭಾಗ ಎಸಿಪಿ ಯಶೋದಾ ಒಂಟಗೋಡಿ ಅವರಿಗೆ ಗ್ರೌಂಡ್ ಬಚಾವೋ ಸಮಿತಿ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಮಹಾನಗರ ಪಾಲಿಕೆಗೆ ಸೇರಿರುವ ಜಾಗವನ್ನು ಕಬಳಿಸುವ ನಿಟ್ಟಿನಲ್ಲಿ ಕರ್ನಾಟಕ ಜಿಮಖಾನಾ ಅಸೋಸಿಯೇಷನ್ ಪದಾಧಿಕಾರಿಗಳು ಅಡಿಪಾಯ ಹಾಕುತ್ತಿದ್ದಾರೆ. ಜಿಮಖಾನಾ ಕ್ಲಬ್ ಪದಾಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ. ಕ್ಲಬ್ನ ಪಶ್ಚಿಮ ಭಾಗದಲ್ಲಿ ತಡೆಗೋಡೆ ಮತ್ತು ಗೇಟ್ ನಿರ್ಮಿಸುವುದಕ್ಕೆ ಅಡಿಪಾಯ ಹಾಕಲಾಗುತ್ತಿದ್ದು, ತಕ್ಷಣ ಕಾಮಗಾರಿ ಸ್ಥಗಿತಗೊಳಿಸಲು ಆದೇಶಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಕವಿವಿ ಯುವಜನೋತ್ಸವ
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿ ಕೂಟ ಪ್ರಸಕ್ತ ಸಾಲಿನ ಅಂತರ್ ವಲಯ ಯುವಜನೋತ್ಸವ ಅ. 30, 31ರಂದು ಕವಿವಿ ವಿವಿಧ ವೇದಿಕೆಯಲ್ಲಿ ಜರುಗಲಿದೆ. ಅ. 30ರ ಬೆಳಗ್ಗೆ 10ಕ್ಕೆ ಇಲಕಲ್ನ ವಿಜಯ ಮಹಾಂತೇಶ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಶಂಭು ಬಳಿಗಾರ ಯುವಜನೋತ್ಸವ ಉದ್ಘಾಟಿಸುವರು. ಮೌಲ್ಯಮಾಪನ ಕುಲಸಚಿವ ಡಾ. ಎಚ್.ಟಿ. ಪೋತೆ ಅಧ್ಯಕ್ಷತೆ ವಹಿಸುವರು. ಡಾ. ಜೆ.ಎಂ. ನಾಗಯ್ಯ ಭಾಗವಹಿಸುವರು. ಅ. 31ರ ಸಂಜೆ 5.30ಕ್ಕೆ ಗಾಂಧಿಭವನದಲ್ಲಿ ಸಮಾರೋಪ ಜರುಗಲಿದೆ.