ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಶೀಘ್ರ ಕೃಷಿ ಬೆಲೆ ಆಯೋಗ ರಚನೆ

Srinivasa Murthy VN
Updated On : 29 Oct 2013, 11:05 am

ಕ.ಪ್ರ.ವಾರ್ತೆ ಗದಗ ಅ. 28
ರಾಜ್ಯದ ರೈತರು ಬೆಳೆದ ಬೆಳೆಗಳ ಬೆಲೆಯನ್ನು ರೈತರೇ ನಿರ್ಧರಿಸುವಂತಾಗಬೇಕು. ಹಲವಾರು ವರ್ಷಗಳಿಂದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸದ್ಯದಲ್ಲಿಯೇ ಕೃಷಿ ಬೆಲೆ ಆಯೋಗವನ್ನು ರಚನೆ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸೋಮವಾರ ಗದಗ ಎಪಿಎಂಸಿಯ 70ನೇ ವರ್ಷಾಚರಣೆ, ಪುತ್ಥಳಿ ಅನಾವರಣ ಹಾಗೂ ಕೋನಶಿಲಾ ಸಮಾರಂಭದಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದು ಆರು ದಶಕ ಕಳೆದರೂ ರೈತರು ಬೆಳೆದ ಬೆಲೆಯ ವಿಷಯದಲ್ಲಿ ಅನ್ಯಾಯವಾಗುತ್ತಿದೆ. ಕೈಗಾರಿಕೆಗಳಲ್ಲಿ ಮಾತ್ರ ವಸ್ತುವನ್ನು ಸಿದ್ಧಪಡಿಸಿದವರೇ ಬೆಲೆ ನಿಗದಿ ಮಾಡುತ್ತಾರೆ. ಆದರೆ ರೈತರು ಬೆಳೆದ ಬೆಳೆಗಳಿಗೆ ಮಾತ್ರ ಬೇರೆಯವರು ಬೆಲೆ ನಿಗದಿ ಮಾಡುವ ದುಸ್ಥಿತಿ ಇದೆ. ಈಗಾಗಲೇ ಕೃಷಿ ಬೆಲೆ ಆಯೋಗ ರಚನೆಗೆ ಎಲ್ಲ ರೀತಿಯ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದು, ಅದರಲ್ಲಿ ನಾಡಿನ ಪ್ರಮುಖ ಕೃಷಿ ತಜ್ಞರು, ರೈತ ಪ್ರತಿನಿಧಿಗಳು, ಹೋರಾಟಗಾರರು ಸದಸ್ಯರಾಗಿದ್ದಾರೆ. ಅವರೆಲ್ಲ 6 ತಿಂಗಳು ಸುದೀರ್ಘ ಚರ್ಚೆ, ಅಧ್ಯಯನ ನಡೆಸಿ ವರದಿ ನೀಡಲಿದ್ದಾರೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರ ಕೃಷಿ ಆಯೋಗವನ್ನು ರಚಿಸಿದೆ. ಆದರೆ, ಇಲ್ಲಿ ಕೇವಲ ಬೆಂಬಲ ಬೆಲೆ ಮಾತ್ರ ನಿರ್ಧಾರವಾಗಲಿದೆ. ಆದರೆ ನಮ್ಮ ಸರ್ಕಾರ ರಾಜ್ಯದಲ್ಲಿ ಜಾರಿಗೆ ತರಲು ಹೊರಟಿರುವ ಕೃಷಿ ಬೆಲೆ ಆಯೋಗ ಬೆಳೆಗೆ ರೈತರೇ ಬೆಲೆ ನಿರ್ಧರಿಸುವಂಥ ಸ್ವಾತಂತ್ರ್ಯ ಅವರಿಗೆ ನೀಡುವ ನಿಟ್ಟಿನಲ್ಲಿ ದೇಶದಲ್ಲಿ ಇದು ಮೊದಲ ಕ್ರಾಂತಿಕಾರ ಹೆಜ್ಜೆಯಾಗಲಿದೆ ಎಂದರು.
ಕೃಷಿ ಮಾರುಕಟ್ಟೆ ನೀತಿ: ರಾಜ್ಯದಲ್ಲಿರುವ ಎಪಿಎಂಸಿಗಳಲ್ಲಿ ರೈತರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸುವ ನಿಟ್ಟಿನಲ್ಲಿ ಕೃಷಿ ಮಾರುಕಟ್ಟೆ ನೀತಿ 2013 ಜಾರಿಗೆ ತರಲಾಗುತ್ತಿದೆ. ಈ ಕುರಿತು ಈಗಾಗಲೇ ಕ್ಯಾಬಿನೇಟ್ನಲ್ಲಿ ಚರ್ಚೆಯಾಗಿದ್ದು ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ತಂತ್ರಜ್ಞಾನ ಸಾಕಷ್ಟು ಬೆಳೆದಿದ್ದು ಅದನ್ನು ರಾಜ್ಯದ ಎಪಿಎಂಸಿಗಳಲ್ಲಿ ಸಮರ್ಪಕವಾದ ರೀತಿಯಲ್ಲಿ ಬಳಕೆ ಮಾಡಿಕೊಂಡು ರೈತರಿಗೆ ವೈಜ್ಞಾನಿಕ ಬೆಲೆ ಮತ್ತು ಶೋಷಣೆ ಮುಕ್ತ ವಾತಾವರಣವನ್ನು ನಿರ್ಮಾಣ ಮಾಡುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ ಎಂದರು.
ರೈತರು ಮಾರಾಟ ಮಾಡಿದ ವಸ್ತುಗಳಿಗೆ ಆನ್ಲೈನ್ ಮೂಲಕ ಹಣ ಪಾವತಿ ಮಾಡುವುದರಿಂದ ರೈತರ ಶೋಷಣೆ ನಿಲ್ಲುತ್ತದೆ ಎನ್ನುವುದನ್ನು ಸರ್ಕಾರ ಮನಗಂಡಿದ್ದು, ಇದು ಕೂಡ ಸದ್ಯದಲ್ಲಿಯೇ ಜಾರಿಗೆ ಬರಲಿದೆ. ರಾಜ್ಯದಲ್ಲಿನ ಭೂ ಹಿಡುವಳಿದಾರರಲ್ಲಿ ಶೇ.85ರಷ್ಟು ಜನ ಸಣ್ಣ ಹಿಡುವಳಿದಾರರಿದ್ದು, ಅವರೆಲ್ಲ ಇಂದು ಕೃಷಿ ಲಾಭದಾಯಕವಲ್ಲ ಎನ್ನುವ ದೃಷ್ಟಿಕೋನದಿಂದ ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅವರನ್ನು ಮತ್ತೆ ಕೃಷಿಗೆ ತರುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.

3 ವರ್ಷದಲ್ಲಿ ವಿದ್ಯುತ್ ಸಮಸ್ಯೆ ನಿವಾರಣೆ
ಮುಂಬರುವ 3 ವರ್ಷದಲ್ಲಿ ರಾಜ್ಯದ ವಿದ್ಯುತ್ ಸಮಸ್ಯೆಯನ್ನು ಸಂಪೂರ್ಣ ನಿವಾರಿಸಲು ಸರ್ಕಾರ ಅಗತ್ಯ ಕ್ರಮ ತೆಗೆದುಕೊಂಡಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ಸೋಮವಾರ ಗದಗದ ಎಪಿಎಂಸಿ ಆವರಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರತಿ ದಿನ 9 ಸಾವಿರ ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಇದೆ. ಸದ್ಯ 6500 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, 2500 ಮೆಗಾವ್ಯಾಟ್ ವಿದ್ಯುತ್ ಕೊರತೆ ಎದುರಿಸುತ್ತಿದ್ದೇವೆ. ಇದರಿಂದಾಗಿ ಸರ್ಕಾರಕ್ಕೆ ಗ್ರಾಮೀಣ ಪ್ರದೇಶದಲ್ಲಿ ನಿರಂತರ ವಿದ್ಯುತ್ ಕೂಡಲು ಸಾಧ್ಯವಾಗುತ್ತಿಲ್ಲ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ವಿದ್ಯುತ್ ಉತ್ಪಾದನೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಜನಸಂಖ್ಯೆ ಬೆಳವಣಿಗೆ ಆಧಾರದಲ್ಲಿ ಚಿಂತನೆ ಮಾಡಿ ಕೇವಲ 2500 ಮೆಗಾವ್ಯಾಟ್ ಮಾತ್ರವಲ್ಲ ಹೆಚ್ಚುವರಿಯಾಗಿ 1500 ಮೆಗಾವ್ಯಾಟ್ (ಒಟ್ಟು 4 ಸಾವಿರ ಮೆವ್ಯಾ) ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ. ಇದರಲ್ಲಿ ಸೋಲಾರ್ ಬಳಕೆಗೆ ಉತ್ತೇಜನ ಹಾಗೂ ವಿದ್ಯುತ್ ಉತ್ಪಾದನೆಗೆ ಅವಶ್ಯವಿರುವ ಎಲ್ಲ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದೆ. ಇದಕ್ಕಾಗಿ ವಿಶೇಷ ಅನುದಾನವನ್ನು ಸರ್ಕಾರ ಮೀಸಲಿಟ್ಟಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement