ಕನ್ನಡ ಬೆಳೆಸುವ ಕಾರ್ಯವಾಗಬೇಕಿದೆ: ದೊಡ್ಡಮನಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 2
ನಾಡು, ನುಡಿಯ ರಕ್ಷಣೆ ಮಾಡುವ ನಿಟ್ಟಿನಲ್ಲಿ ಹೊಸ ತಲೆಮಾರಿನ ಯುವ ಸಮುದಾಯವನ್ನು ಗಟ್ಟಿಯಾಗಿ ಕಟ್ಟುವ ಕೆಲಸ ಹಿರಿಯರಾದ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ಫೆ. 19ರಂದು ಹೆಬ್ಬಾಳ ಗ್ರಾಮದಲ್ಲಿ ನಡೆಯಲಿರುವ 3ನೇ ಶಿರಹಟ್ಟಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆಸುವ ಕುರಿತು ಶನಿವಾರ ಹೆಬ್ಬಾಳ ಗ್ರಾಮದ ಶಿವಯೋಗೀಶ್ವರ ಪ್ರೌಢ ಶಾಲೆಯ ಸಭಾಂಗಣದಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಶಾಸಕ ರಾಮಕೃಷ್ಣ ದೊಡ್ಡಮನಿ ಅವರನ್ನು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಜತೆಗೆ ವಿವಿಧ ಸಮಿತಿ ರಚನೆ ಮಾಡಿದ ನಂತರ ಮಾತನಾಡಿದರು.
ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆಯುವ 3ನೇ ತಾಲೂಕು ಸಾಹಿತ್ಯ ಸಮ್ಮೇಳನದ ಬಗ್ಗೆ ಬಹುತೇಕ ಗ್ರಾಮಗಳ ಜನರಿಗೆ ಗೊತ್ತಿಲ್ಲ. ಈ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಸಮ್ಮೇಳನ ಅರ್ಥಪೂರ್ಣ ಆಗಬೇಕು. ಸಣ್ಣಪುಟ್ಟ ಲೋಪಗಳಿಗೆ ಗಮನ ನೀಡದೇ ಜಾತಿ, ಮತ, ಭೇದಭಾವ ಮರೆತು ಒಂದಾಗಿ ತಮ್ಮ ಜವಾಬ್ದಾರಿ ನಿಭಾಯಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದರು.
ಜಿಪಂ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ, ಎನ್.ಆರ್. ಕುಲಕರ್ಣಿ, ತಾಪಂ ಸದಸ್ಯ ತಿಮ್ಮರಡ್ಡಿ ಅಳವಂಡಿ, ಜಿಪಂ ಮಾಜಿ ಸದಸ್ಯ ಶಿವಪ್ರಕಾಶ ಮಹಾಜನಶೆಟ್ಟರ ಮಾತನಾಡಿದರು. ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ ಪ್ರಾಸ್ತಾವಿಕ ಮಾತನಾಡಿದರು. ತಹಸೀಲ್ದಾರ್ ಆರ್.ಬಿ. ನಿಂಗನಗೌಡ್ರ, ತಿರಕಪ್ಪ ಮುಂಡವಾಡ, ಶೇಖಣ್ಣ ತೆಗ್ಗಿನಮನಿ, ಮಹೇಂದ್ರ ಮುಂಡವಾಡ, ಬಸಣ್ಣ ಮುಂಡವಾಡ, ತಾಪಂ ಸದಸ್ಯ ಶಿವನಗೌಡ ಕಂಠಿಗೌಡ್ರ, ಡಿ.ಎಚ್. ಮಲ್ಲೇಶ, ಸಂಗಮೇಶ ತಮ್ಮನಗೌಡ್ರ, ಎಫ್.ಎಸ್. ಅಕ್ಕಿ, ಎಂ.ಕೆ. ಲಮಾಣಿ, ಶಂಕರ ಶಿರೂರ, ಎಫ್.ಜಿ. ಪಾಟೀಲ, ವಿ.ಪಿ. ಮನಸೂರ, ಪಿ.ಬಿ. ಖರಾಟೆ, ಬಸವರಾಜ ಬಾಳೇಶ್ವರಮಠ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಎಂ.ಬಿ. ಹಾವೇರಿ ಸ್ವಾಗತಿಸಿದರು. ಗಿರೀಶ ಕೋಡಬಾಳ ನಿರೂಪಿಸಿ, ವಂದಿಸಿದರು.