ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಗದಗ-ಬೆಟಗೇರಿ ಸ್ವಚ್ಛತೆಗೆ ಆದ್ಯತೆ ಸಿಗುವುದೇ?

Srinivasa Murthy VN
Updated On : 3 Feb 2014, 11:51 am

ನಗರದ ಜನನಿಬಿಡ ಪ್ರದೇಶಗಳಾಗಿರುವ ಗದಗ ಕಾಯಿಪಲ್ಲೆ ಮಾರುಕಟ್ಟೆ, ಶಹಪುರ ಪೇಟೆ, ಭೀಷ್ಮಕೆರೆ, ಕಳಸಾಪುರ ರಸ್ತೆ, ಹುಡ್ಕೋ ಕಾಲೋನಿ, ಆಶ್ರಯ ಕಾಲೋನಿ, ಜವುಳಭಾಗ, ಶಹಪುರ ಪೇಟೆ, ವಿವೇಕಾನಂದ ನಗರ, ಎಪಿಎಂಸಿ, ಹಮಾಲರ ಕಾಲೋನಿಗಳು ಸೇರಿದಂತೆ ಹಲವು ಕಡೆಗಳಲ್ಲಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ಜನತೆ ನೆಮ್ಮದಿಯಿಂದ ಮಾರುಕಟ್ಟೆಗೆ ಹೋಗಿ ಮರಳಿ ಮನೆಗೆ ಮರಳುವಾಗ ಕೈಯಲ್ಲಿನ ಚೀಲಗಳನ್ನೇ ಕಿತ್ತು ಕೊಳ್ಳುತ್ತಿವೆ.
ಬೇಸಿಗೆ ಪ್ರಾರಂಭ: ನಗರದಲ್ಲಿ ಸಾವಿರಾರು ಹಂದಿಗಳು ದಿನೇ ದಿನೇ ಸಾರ್ವಜನಿಕರಿಗೆ ಕಿರುಕುಳ ಕೊಡುತ್ತಿರುವುದು ಒಂದೆಡೆಯಾದರೆ, ಹಂದಿಗಳು ಗಲೀಜು ವಾತಾವರಣದಲ್ಲಿಯೇ ವಾಸಿಸುವುದರಿಂದ ಸಾರ್ವಜನಿಕರಿಗೆ ಇದರಿಂದ ಹಲವು ಸಾಂಕ್ರಾಮಿಕ ರೋಗಗಳು ಬರುವ ಸಂಭವವಿದೆ. ಸದ್ಯದಲ್ಲಿಯೇ ಬೇಸಿಗೆ ಕಾಲ ಪ್ರಾರಂಭವಾಗುವುದರಿಂದ ನಗರಸಭೆಯ ಅಧಿಕಾರಿಗಳು ಅವಳಿ ನಗರದಲ್ಲಿನ ಸ್ವಚ್ಛತೆ ಮತ್ತು ಹೆಚ್ಚಾಗಿರುವ ಹಂದಿಗಳಿಗೆ ನಿಯಂತ್ರಣ ಹಾಕದೇ ಇದ್ದಲ್ಲಿ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಾಗುವ ಸಾಧ್ಯತೆ ಇದೆ.
ಹಂದಿ ಸಾಕಾಣಿಕೆ ಜೋರಾಗಿದೆ: ಗದಗ- ಬೆಟಗೇರಿ ಅವಳಿ ನಗರದಲ್ಲಿ ಹಂದಿ ಸಾಕಾಣಿಕೆ ಒಂದು ವೃತ್ತಿಯಾಗಿದೆ. ಆದರೆ ಸಾಕಿದ ಹಂದಿಗಳನ್ನು ಎಲ್ಲೆಂದರಲ್ಲಿ ಬಿಡುತ್ತಿದ್ದು, ಇದರಿಂದ ಕೇವಲ ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರಿಗೆ ಮಾತ್ರವಲ್ಲ ನಗರದ ಸುತ್ತಲೂ ಇರುವ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ಅದರಲ್ಲಿಯೂ ತೋಟಗಾರಿಕಾ ಬೆಳೆ ಬೆಳೆದ ರೈತರಂತೂ ಹಂದಿಗಳ ಹಾವಳಿಯಿಂದ ತತ್ತರಿಸಿದ್ದಾರೆ. ಕೂಡಲೇ ಅವುಗಳನ್ನು ಬೇರೆಡೆ ಸಾಗಾಟ ಮಾಡಬೇಕು ಎನ್ನುವ ಒತ್ತಾಸೆ ಇದೆ.

ನೀರಿನ ಸಮಸ್ಯೆ ನೀಗಿಸಲು ಕ್ರಮ ಕೈಕೊಳ್ಳಲಿ
ಬೇಸಿಗೆ ಪೂರ್ವದಲ್ಲಿಯೇ ಅವಳಿ ನಗರದಲ್ಲಿ ತುಂಗಭದ್ರಾ ನದಿ ನೀರನ್ನು 15 ದಿನಗಳಿಗೊಮ್ಮೆ ಪೂರೈಕೆ ಮಾಡಲಾಗುತ್ತಿದೆ. ಈಗಾಗಲೇ ಅವಳಿ ನಗರಕ್ಕೆ ನೀರು ಪೂರೈಕೆ ಮಾಡುವ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಜಿಲ್ಲಾಡಳಿತ ಕೂಡಲೇ ಗಮನ ಹರಿಸಿ, ಬೇಸಿಗೆಯಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ನೀಗಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕಿದೆ. ಅವಳಿ ನಗರದಲ್ಲಿ 351 ಕೊಳವೆಬಾವಿಗಳಲ್ಲಿ ಹಲವಾರು ಕೊಳವೆಬಾವಿಗಳು ಸ್ಥಗಿತಗೊಂಡಿದ್ದು, ಅವುಗಳ ಫ್ಲೆಶಿಂಗ್ ಕಾರ್ಯ ನಡೆಸಬೇಕಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಹೆಚ್ಚಿನ ಗಮನ ನೀಡಿದಲ್ಲಿ ಮಾತ್ರ ಸಾಧ್ಯ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಶುದ್ಧ ಕುಡಿವ ನೀರಿನ ಘಟಕ ಸ್ಥಾಪಿಸಿದಲ್ಲಿ ಅನುಕೂಲ
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸುವ ಮೂಲಕ ಉತ್ತಮ ಕಾರ್ಯವನ್ನೇ ಮಾಡಿದ್ದಾರೆ. ಇದರಿಂದ ಬೇಸಿಗೆಯಲ್ಲಿ ಜನತೆ ಅಶುದ್ಧವಾದ ನೀರನ್ನು ಸೇವಿಸಿ, ಎದುರಿಸುತ್ತಿದ್ದ ಹಲವಾರು ಕಾಯಿಲೆಗಳ ಸಂಖ್ಯೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಈ ಬೇಸಿಗೆ ಪ್ರಾರಂಭವಾಗುವ ಮೊದಲೇ ಅವಳಿ ನಗರದಲ್ಲಿ ಇನ್ನಷ್ಟು ಅದೇ ಮಾದರಿಯ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಿದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎನ್ನುವುದು ಅವಳಿ ನಗರದ ಜನತೆಯ ಆಶಯವಾಗಿದೆ.ಈ ಕುರಿತು ನಗರಸಭೆಯ ಪೌರಾಯುಕ್ತರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ, ಅವರು ಹೊರಗೆ ಹೋಗಿದ್ದಾರೆ ಎನ್ನುವ ಸಿದ್ಧ ಉತ್ತರವೇ ಲಭ್ಯವಾಗುತ್ತದೆ. ಇನ್ನು ದೂರವಾಣಿಗೆ ಕರೆ ಮಾಡಿದರೆ, ಕರೆಗಳನ್ನು ಸ್ವೀಕರಿಸುವುದಿಲ್ಲ. ಇದು ಕೂಡಾ ನಗರಸಭೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದರೆ ತಪ್ಪಾಗಲಾರದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement