ಚಟ ಮಾಡಲು ಯೋಚಿಸಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಫೆ. 2
ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಒಂದೊಂದು ಚಟಗಳ ದಾಸರಾಗಿದ್ದಾರೆ. ಆದರೆ ಚಟಗಳಿಗೆ ಅಂಟಿಕೊಂಡವರು ಇಂದು ಅದರಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಚಟಗಳನ್ನು ಮಾಡಲು ಯೋಚಿಸಿ, ಬಿಡುವುದಕ್ಕೆ ಎಂದೂ ಯೋಚಿಸಬೇಡಿ ಎಂದು ಬಾಲೆಹೊಸೂರಿನ ಜ. ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಅವರು ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಈಚೆಗೆ ದುರ್ಗುಣಗಳ ಭಿಕ್ಷೆ ಸದ್ಗುಣಗಳ ದೀಕ್ಷೆ ಎನ್ನುವ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಮನುಷ್ಯನನ್ನು ದುಶ್ಚಟಗಳು ಹಾಳು ಮಾಡುವದರ ಜತೆಯಲ್ಲಿ ಅವನ ಕುಟುಂಬವನ್ನು ಬೀದಿಗೆ ತರುವ ಕೆಲಸ ಮಾಡುತ್ತೇವೆ. ನಮ್ಮ ಬದುಕನ್ನು ಹಾಳು ಮಾಡುವ ದುರ್ಗುಣಗಳನ್ನು ದೂರ ಮಾಡಿ ಸದ್ಗುಣಗಳನ್ನು ನಮ್ಮ ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಯುವ ಶಕ್ತಿಯು ಚಟಗಳಿಂದ ಹೊರ ಬರುವ ಮೂಲಕ ಉತ್ತಮ ಜೀವನ ಸಾಗಿಸುವಲ್ಲಿ ಯಶಸ್ವಿಯಾಗಬೇಕು ಎಂದರು. ನಾವು ಮಾಡುವ ಕೆಟ್ಟ ಚಟಗಳಿಂದಾಗಿ ನಮ್ಮ ಭವಿಷ್ಯವನ್ನು ಹಾಗೂ ಹೆಂಡತಿ ಮಕ್ಕಳನ್ನು ಬೀದಿಗೆ ತಳ್ಳುವ ಸ್ಥಿತಿ ಬಂದೊದಗುತ್ತದೆ. ಹಣಕೊಟ್ಟು ಮರ್ಯಾದೆ ಕಳೆದುಕೊಳ್ಳವುದು ಸರಿಯಲ್ಲ. ಆದ್ದರಿಂದ ನಿಮ್ಮಲ್ಲಿರುವ ಯಾವುದೇ ಚಟಗಳನ್ನು ಹಿಂದೆ ಮುಂದೆ ನೋಡದೇ ನಮ್ಮ ಜೋಳಿಗೆಗೆ ಭಿಕ್ಷೆ ಹಾಕಿ ಸದ್ಗುಣಗಳನ್ನು ಹೊಂದಿ ಕುಟುಂಬಕ್ಕೂ ಒಳಿತಾಗಲಿದೆ ಎಂದರು.
ಪ್ರಾರಂಭದಲ್ಲಿ ಗ್ರಾಮದ ಯೋಗಿ ವೇಮನ್ ಪ್ರೌಢಶಾಲೆಯಿಂದ ಶ್ರೀಗಳು ಪಾದಯಾತ್ರೆ ನಡೆಸಿ ದಾರಿ ಮಧ್ಯೆದಲ್ಲಿ ತಮ್ಮ ಜೋಳಿಗೆ ಚಟಗಳನ್ನು ಹಾಕಿದರೆ ಅವುಗಳನ್ನು ಪಡೆಯುತ್ತ ಮೆರವಣಿಗೆಯಲ್ಲಿ ಸಾಗಿದರು.
ಹಮ್ಮಿಗಿ ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನವೀರಪ್ಪ ಯಲಿಗಾರ, ನಿಂಗಯ್ಯ ಕಲ್ಮಠ, ವೀರಯ್ಯ ಕಣವಿಮಠ, ಕರಿಯಪ್ಪ ಹಡಗಲಿ, ಮಲ್ಲಿಕಾರ್ಜುನ ಬಹದ್ದೂರ ದೇಸಾಯಿ, ವೀರಣ್ಣ ಭಜಂತ್ರಿ, ದ್ಯಾಮಣ್ಣ ಡೊಳ್ಳಿನ, ಈಶಪ್ಪ ವರದಾನಿ, ಈರಣ್ಣ ಮದ್ದೀನ, ಬಸವರಜ ಯಲಿಗಾರ ಮುಂತಾದವರು ಉಪಸ್ಥಿತರಿದ್ದರು. ಕಾಶಪ್ಪ ನೆಲೋವಿಗೆ ನಿರೂಪಿಸಿ, ವಂದಿಸಿದರು.