ನಾಳೆಯಿಂದ ಜಿಲ್ಲಾ ಮಟ್ಟದ ಆಯುಷ್ ಆರೋಗ್ಯ ಮೇಳ
ಗದಗ: ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆ ಆವರಣದಲ್ಲಿ ಆಯುಷ್ ಇಲಾಖೆ, ಜಿಪಂ, ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ, ಅನಂತರಾವ್ ಬಿಳಗಿ ಸ್ಮಾರಕ ನಿಸರ್ಗ ಆಸ್ಪತ್ರೆ ಶಿರಸಿ ಇವುಗಳ ಆಶ್ರಯದಲ್ಲಿ ಗದಗ ಜಿಲ್ಲಾ ಮಟ್ಟದ ಆಯುಷ್ ಆರೋಗ್ಯ ಮೇಳ ಫೆ. 4ರಿಂದ 7ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಬಿ.ಜಿ. ಪಾಟೀಲ ಹೇಳಿದರು. ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ. 4ರಂದು ಬೆಳಗ್ಗೆ 11ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಕಾರ್ಯಕ್ರಮ ಉದ್ಘಾಟಿಸುವರು. ಸಂಜೆ 6ಕ್ಕೆ ಆರೋಗ್ಯಕ್ಕಾಗಿ ಹಾಸ್ಯ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ, ನರಸಿಂಹ ಜೋಷಿ ಕಾರ್ಯಕ್ರಮ ನೀಡಲಿದ್ದಾರೆ. 3 ದಿನಗಳ ಕಾಲ ಉಚಿತ ಚಿಕಿತ್ಸಾ ಶಿಬಿರ, ಆಯುಷ್ ಜಾಗೃತಿ ಶಿಬಿರ, ಮನೆ-ಮದ್ದು ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಮಧ್ಯಾಹ್ನ 2.30ರಿಂದ 5ರ ವರೆಗೆ ಜನರಿಗೆ ಉಚಿತವಾಗಿ ಆಯುಷ್ ವೈದ್ಯರು ಸಂದರ್ಶನಕ್ಕೆ ಲಭ್ಯವಿರುತ್ತಾರೆ. ಫೆ. 7ರಂದು ಮಧುಮೇಹ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು. ಶಿರಸಿ ನಿಸರ್ಗ ಟ್ರಸ್ಟ್‌ನ ಕಾರ್ಯದರ್ಶಿ ಡಾ. ಜಿತೇಶ, ಡಾ. ವೆಂಕಟರಮಣ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.