ಪುರಸಭೆ ನಿರ್ಲಕ್ಷ್ಯ: ಪೋಲಾಗುತ್ತಿರುವ ನೀರು
ಮುಂಡರಗಿ ಪಟ್ಟಣದಲ್ಲಿ ಹೋಗುತ್ತಿದ್ದರೆ ಸಾಕು, ದಾರಿಯುದ್ದಕ್ಕೂ ಎಲ್ಲೆಂದರಲ್ಲಿ ಅನೇಕ ಸಾರ್ವಜನಿಕ ನಲ್ಲಿಗಳು ಟ್ಯಾಪ್(ನಳ)ಗಳಿಲ್ಲದೇ ನೀರು ಖಾಲಿ ಹರಿದು ಹೋಗುತ್ತಿರುವುದನ್ನು ಕಾಣಬಹುದು.
ಈ ಕುರಿತು ಅನೇಕ ಪತ್ರಿಕೆಗಳಲ್ಲಿ ವರದಿಗಳನ್ನು ಮಾಡಿದರೂ ಪುರಸಭೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪಟ್ಟಣದ ಶಿರೋಳ ರಸ್ತೆಯಲ್ಲಿ ಪುರಸಭೆಯ ಒಂದು ಸಾರ್ವಜನಿಕ ನಲ್ಲಿ ದಿನದ 24 ಗಂಟೆಗಳ ಕಾಲ ತುಂಬಿ ಹರಿಯುತ್ತಲೇ ಇರುತ್ತದೆ. ಅದರಂತೆ ಎಸ್.ಎಸ್. ಪಾಟೀಲ ನಗರ, ಬನಶಂಕರಿ ದೇವಸ್ಥಾನದ ಹತ್ತಿರ, ಕೊಪ್ಪಳ ವೃತ್ತ, ಮಸೀದಿ ಓಣಿ ಸೇರಿದಂತೆ ಪಟ್ಟಣದ ಅನೇಕ ಕಡೆಗಳಲ್ಲಿ ಸಾರ್ವಜನಿಕ ನಳಗಳು ಟ್ಯಾಪ್(ನಲ್ಲಿ)ಗಳಿಲ್ಲದೇ ನಿತ್ಯ ಹೆಚ್ಚಿನ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ.
ಅದರಿಂದ ನಳಗಳ ಸುತ್ತಮುತ್ತ ನೀರು ನಿಂತು ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟು, ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಇದೀಗ ಬೇಸಿಗೆ ಕಾಲ ಸಮೀಪಿಸುತ್ತಿದ್ದು, ಅಲ್ಲಲ್ಲಿ ನೀರಿನ ಸಮಸ್ಯೆ ಸಾಕಷ್ಟು ಹೆಚ್ಚಿಸುವ ಸಾಧ್ಯತೆ ಇದೆ. ಆದ್ದರಿಂದ ಪುರಸಭೆ ಅಧಿಕಾರಿಗಳು ಈಗಲಾದರೂ ತಮ್ಮ ಸಿಬ್ಬಂದಿಯನ್ನು ಮುಂಡರಗಿ ಪಟ್ಟಣದ 23 ವಾರ್ಡ್‌ಗಳಲ್ಲಿ ಸಂಚರಿಸುವಂತೆ ಮಾಡಿ ಟ್ಯಾಪ್(ನಳ) ಕಿತ್ತಿರುವುದನ್ನು ಪತ್ತೆಹಚ್ಚಿಸಿ ಅವುಗಳನ್ನು ದುರಸ್ತಿಗೊಳಿಸಿ ನೀರು ಪೋಲಾಗುವುದನ್ನು ತಪ್ಪಿಸಬೇಕು.
- ಸಂತೋಷ ಹಿರೇಮನಿ, ಮುಂಡರಗಿ