ಪುರಾಣ, ಹೋಮ-ಹವನದಿಂದ ಸಂಪತ್ತು ವೃದ್ಧಿಸಲ್ಲ: ಮುರುಘಾಶ್ರೀ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಫೆ. 2
ಪುರಾಣ, ಪುಣ್ಯಕಥೆಗಳು, ಪೂಜೆ, ಹೋಮ ಹವನಗಳಿಂದ ಆರ್ಥಿಕ ಸಂಪತ್ತು ವೃದ್ಧಿಸುವುದಿಲ್ಲ ಎಂದು ಚಿತ್ರದುರ್ಗ ಮುರುಘಾಮಠದ ಮುರುಘರಾಜೇಂದ್ರ ಶ್ರೀಗಳು ಅಭಿಪ್ರಾಯಪಟ್ಟರು.
ಅವರು ಪಟ್ಟಣದ ಸ್ಕೂಲ್ ಚಂದನದ ವಿದ್ಯಾರ್ಥಿಗಳು ಈಚೆಗೆ ನಡೆಸಿದ ವಿದ್ಯಾರ್ಥಿ ದಿವ್ಯ ಜೀವನ ಎಂಬ ವಿನೂತನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಕಾಯಕವೇ ಕೈಲಾಸವೆಂಬ ತತ್ವದಡಿಯಲ್ಲಿಯೇ ಇಡೀ ಮಾನವ ಸಮಾಜಕ್ಕೆ ಮಾದರಿಯಾದ ಶರಣರು ತಮ್ಮ ಜೀವನದುದ್ದಕ್ಕೂ ಶ್ರಮ ಸಂಸ್ಕೃತಿಯನ್ನೇ ಪ್ರಸ್ತುತಪಡಿಸಿದ್ದಾರೆ. ಶ್ರಮವಿಲ್ಲದ ಸಂಪತ್ತು ಎಂದಿಗೂ ಶಾಶ್ವತವಲ್ಲ. ದುಡಿಮೆಯೇ ದೇವರಾಗಿದ್ದರಿಂದ ಪ್ರತಿಯೊಬ್ಬರೂ ವಾಸ್ತವಿಕ ಮತ್ತು ದುಡಿಮೆಯ ಜೀವನಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ.
ಇಂದಿನ ವೈಜ್ಞಾನಿಕ ಜಗತ್ತಿನ ವಿಸ್ಮಯಕಾರಿ ಸಂಗತಿ ತಿಳಿಯಲು, ನಮ್ಮ ದೇಶದ ಆರ್ಥಿಕ, ಸಾಮಾಜಿಕ, ರಾಜಕೀಯ, ರಕ್ಷಣಾ ವ್ಯವಸ್ಥೆ, ಭೌಗೋಳಿಕ ಸಂಗತಿಗಳ ಜ್ಞಾನ ಹಾಗೂ ಮಾಹಿತಿಗಾಗಿ ಪತ್ರಿಕೆಗಳನ್ನು ಓದುವುದು, ಟಿವಿ ನೋಡುವುದು ತಪ್ಪಲ್ಲ. ಆದರೆ, ಅನಾವಶ್ಯಕವಾಗಿ ಬಂಗಾರದಂತಹ ವೇಳೆಯ ಅಪವ್ಯಯ ಮಾಡುವುದು ತಪ್ಪು. ವಿದ್ಯಾರ್ಥಿಗಳು ಕಲಿಕೆಯ ಸಂದರ್ಭದಲ್ಲಿ ಮನಸ್ಸಿನ ಚಂಚಲತೆ ನಿಗ್ರಹ ಮಾಡಿ ಗಮನ ಕೇಂದ್ರೀಕರಿಸಿ ನಿಷ್ಠೆಯಿಂದ ಆಲಿಸುವುದರಿಂದ ವಿಷಯದ ಸಮಗ್ರ ಜ್ಞಾನ ಹೊಂದಬಹುದಾಗಿದೆ. ಅಂದಾಗ ಮಾತ್ರ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಿ ಯಶಸ್ಸು ಗಳಿಸಲು ಸಾಧ್ಯ. ಪರೀಕ್ಷೆಗಳು ನೀವು ಪಡೆದ ಜ್ಞಾನದ ಪರಿಪೂರ್ಣತೆಯ ಅಭಿವ್ಯಕ್ತ ಸಾಮರ್ಥ್ಯವನ್ನು ತೋರಿಸುತ್ತವೆ ಎಂದರು.
ಇದೇ ಸಂದರ್ಭದಲ್ಲಿ 10 ವರ್ಷಗಳಿಂದ ಸ್ಕೂಲ್ ಚಂದನದಿಂದ ನಾಡಿನ ಮಹಾನ್ ಚೇತನಗಳಿಗೆ ನೀಡುತ್ತಾ ಬಂದಿರುವ ಚಂದನ ಶ್ರೀ ಗೌರವವನ್ನು ಚಿತ್ರದುರ್ಗ ಮುರಘಾಮಠದ ಮುರುಘರಾಜೇಂದ್ರ ಶ್ರೀಗಳಿಗೆ ನೀಡಿ ಗೌರವಿಸಲಾಯಿತು. ಮತ್ತು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀಗಳು ಚಂದನ ಸತ್ಕಾರ ಸ್ವೀಕರಿಸಿ ಮಾತನಾಡಿದರು.
ನಂತರ 2012-13ನೇ ಸಾಲಿನ ಭಾರತ ಸರ್ಕಾರದ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಈಶ್ವರ ಅರಳಿ ಅವರನ್ನು ಸನ್ಮಾನಿಸಲಾಯಿತು. ಹೂವಿನ ಶಿಗ್ಲಿ ವಿರಕ್ತಮಠದ ಚನ್ನವೀರ ಶ್ರೀಗಳು ಉಪಸ್ಥಿತರಿದ್ದರು. ಸಂಸ್ಥಾಪಕ ಅಧ್ಯಕ್ಷ ಟಿ. ಈಶ್ವರ ಅಧ್ಯಕ್ಷತೆ ವಹಿಸಿ ಮಾತನಾಡಿದರು.