ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಸಮಾಜ ಕಟ್ಟುವ ಕಾರ್ಯ ಯುವ ಕವಿಗಳಿಂದಾಗಲಿ

Srinivasa Murthy VN
Updated On : 3 Feb 2014, 11:51 am

ಕನ್ನಡಪ್ರಭ ವಾರ್ತೆ, ಗದಗ, ಫೆ. 2
ಭಾರತವು ಆಧುನಿಕತೆಯ ಜೀವನದಲ್ಲಿ ಹಲವು ತಂತ್ರಜ್ಞಾನಗಳ ಮೂಲಕ ಮುನ್ನಡೆ ಸಾಧಿಸಿದೆಯಾದರೂ ಪರಿಪೂರ್ಣ ಬದುಕು ಕಟ್ಟಿಕೊಡುವಲ್ಲಿ ವಿಫಲವಾಗುತ್ತಿದ್ದು, ಈ ಕುರಿತು ಯುವ ಕವಿಗಳು ಜಾಗ್ರತರಾಗಿ ಪರಿಪೂರ್ಣ ಸುಂದರ ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾಗಲಿ ಎಂದು ಧಾರವಾಡ ಕವಿವಿ ಮೌಲ್ಯಮಾಪನದ ಕುಲಸಚಿವ ಡಾ. ಎಚ್.ಟಿ. ಪೋತೆ ಹೇಳಿದರು.
ಅವರು ಭಾನುವಾರ ನಗರದ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ದಲಿತ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ, ದಲಿತ ಸಾಹಿತ್ಯ ಪರಿಷತ್‌ನ 17ನೇ ವಾರ್ಷಿಕೋತ್ಸವ ಹಾಗೂ ಚೇತನ ಸೊಲಗಿ ಅವರ ಸಾಫ್ಟ್ ಜಗತ್ತಿನಲ್ಲಿ ಎಂಬ ಕವನ ಸಂಕಲನ ಲೋಕಾರ್ಪಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬುದ್ಧ-ಬಸವ-ಅಂಬೇಡ್ಕರರು ಬಾಳಿ, ಬದುಕಿದ ನಮ್ಮ ದೇಶದಲ್ಲಿ ಇಂದಿಗೂ ಹಿಂದುಳಿದ ಜನಾಂಗದವರಿಗೆ ಬಹಿಷ್ಕಾರ, ಅಪಮಾನಗಳಂತಹ ಕೃತ್ಯಗಳು ಜರುಗುತ್ತಿರುವುದು ನೋವಿನ ಸಂಗತಿ. ಈ ಮೂವರನ್ನು ದೇಶದಲ್ಲಿ ಆರಾಧಿಸುವವರನ್ನು ಕಾಣುತ್ತಿವೆ. ಆದರೆ, ಅವರ ತತ್ವ, ಆದರ್ಶಗಳ ಪಾಲನೆ ಇಂದಿಗೂ ಕಡಿಮೆ ಹಂತದಲ್ಲಿರುವುದು ನಾವು ಇಂದಿಗೂ ಕಾಣಬಹುದಾಗಿದೆ ಎಂದರು.
ಸಮಾಜ ಪರಿವರ್ತನೆಗೆ ಶ್ರಮಿಸಿ: ರಾಜ್ಯ ದಲಿತ ಸಾಹಿತ್ಯ ಪರಿಷತ್ ಯುವ ಕವಿಗಳನ್ನು ಗುರುತಿಸಿ ಅವರಲ್ಲಿನ ಕಲೆಯನ್ನು ಪ್ರೋತ್ಸಾಹಿಸಿ ಬೆಳೆಸುತ್ತಿರುವ ಕಾರ್ಯ ಇತರೇ ಸಂಘ, ಸಂಸ್ಥೆ, ಸಂಘಟನೆಗಳಿಗೆ ಮಾದರಿ. ಇತಿಹಾಸ ಮರೆತವರು ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ ಎಂಬ ನಾಣ್ಣುಡಿಯಂತೆ ಒಬ್ಬ ಕವಿ ಬೆಳೆಯಬೇಕಾದಲ್ಲಿ ತನ್ನನ್ನು ಬೆಳೆಸಿದ, ಪ್ರೋತ್ಸಾಹಿಸಿದ ಹಿರಿಯರನ್ನು ಹಾಗೂ ತಂದೆ-ತಾಯಿಯ ಶ್ರಮವನ್ನು ಎಂದಿಗೂ ಮರೆಯಬಾರದು. ಅಲ್ಲದೇ ತನ್ನ ಜತೆ ತಮ್ಮ ಕುಟುಂಬದ, ಸ್ನೇಹಿತರ ಏಳ್ಗೆ ಬಯಸುವವನೇ ನಿಜವಾದ ಕವಿ. ಇಂದಿನ ಸಾಫ್ಟ್‌ವೇರ್ ಜಗತ್ತು ಪರಿಪೂರ್ಣ ಬದುಕು ಕಟ್ಟಿಕೊಡಲು ಸಾಧ್ಯವಿಲ್ಲ. ಕಾರಣ ಈ ಕುರಿತು ಯುವ ಕವಿಗಳು ಚಿಂತನೆ ನಡೆಸಿ ಸಮಾಜ ಪರಿವರ್ತಿಸುವ ಬರಹಗಳನ್ನು ನೀಡುವ ಮೂಲಕ ಸಮಾಜ ಪರಿವರ್ತನೆಗೆ ಶ್ರಮಿಸುವಂತೆ ಕರೆ ನೀಡಿದರು.
ಕೇಳು ಪುಸ್ತಕ ಲೋಕಾರ್ಪಣೆಗೊಳಿಸಿದ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, ಸಾಹಿತ್ಯ ಎಂಬುದು ಯಾರೊಬ್ಬರ ಆಸ್ತಿಯಲ್ಲ, ಅದು ಪ್ರತಿಯೊಬ್ಬರ ಸ್ವತ್ತು. ಪ್ರತಿಯೊಬ್ಬರಲ್ಲಿಯೂ ತನ್ನದೆಯಾದ ವಿಶೇಷ ಕಲೆ ಇದ್ದೇ ಇರುತ್ತದೆ. ಆದರೆ, ಅದನ್ನು ಹೊರಹಾಕುವ ಶಕ್ತಿ, ಸಾಮರ್ಥ್ಯ ಕೆಲವರಲ್ಲಿ ಕಾಣಬಹುದಾಗಿದೆ. ಇಂದು ಲೋಕಾರ್ಪಣೆಗೊಂಡ ಯುವಕವಿ ಚೇತನ ಸೊಲಗಿ ಅವರ ಸಾಫ್ಟ್ ಜಗತ್ತಿನಲ್ಲಿ ಕವನ ಸಂಕಲನ ಯುವ ಪೀಳಿಗೆಯಲ್ಲಿ ಹೊಸ ಸಂಚಲನ ಮೂಡಿಸುವಲ್ಲಿ ಸಹಕಾರಿಯಾಗಿದ್ದು, ಇದೇ ರೀತಿ ಕವನ ಸಂಕಲನಗಳು ಮುಂದೆಯೂ ಬಿಡುಗಡೆಯಾಗಿ ಸಮಾಜ ಸುಧಾರಿಸುವ ಕಾರ್ಯವಾಗಲಿ ಎಂದು ಹಾರೈಸಿದರು.
ಭಾವ ಚೇತನ ಬ್ಲಾಗ್ ಬಿಡುಗಡೆ ಮಾಡಿದ ದೀಪಾ ಸಾಲೋಟಗಿ ಹಾಗೂ ಡಾ. ಎಚ್.ಬಿ. ಕೋಲ್ಕಾರ, ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯದರ್ಶಿ ವೀರಣ್ಣ ಬೇವಿನಮರದ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಲಿತ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಡಾ. ಅರ್ಜುನ ಗೊಳಸಂಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಯುವಕವಿ ಚೇತನ ಸೊಲಗಿ ಅವರನ್ನು ಸನ್ಮಾನಿಸಲಾಯಿತು. ಹಲವು ಕವಿಗಳಿಂದ ಕಾವ್ಯ-ಕುಂಚ-ಗಾಯನ ಕಾರ್ಯಕ್ರಮ ಜರುಗಿತು. ದಲಿತ ಸಾಹಿತ್ಯ ಪರಿಷತ್‌ನ ಉಪಾಧ್ಯಕ್ಷ ಡಾ. ವೈ.ಎಂ. ಭಜಂತ್ರಿ, ಕಾರ್ಯದರ್ಶಿ ಡಾ. ಎಚ್.ಬಿ. ಪೂಜಾರ, ಡಾ. ನಿಂಗು ಸೊಲಗಿ, ಶಂಕರ ಹಲಗತ್ತಿ, ಎಚ್.ಆರ್. ಚಿಗರಿ, ಬಿ.ಬಾಬು, ಶಂಕರ ಕುಕನೂರು ಮುಂತಾದವರು   ಉಪಸ್ಥಿತರಿದ್ದರು.
ಪ್ರಾ. ಎಂ.ಸಿ. ಕಟ್ಟಿಮನಿ ಸ್ವಾಗತಿಸಿದರು. ಪ್ರಿಯಾಂಕಾ ಹಿರೇಮಠ ಹಾಗೂ ಸುಷ್ಮಾ ಚಿಟ್ಟಿ ನಿರೂಪಿಸಿದರು. ಡಾ. ರಾಮಚಂದ್ರ ಹಂಸನೂರ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement