ಆರ್ಸಿಪಿ ಉಪವಾಸ ಸತ್ಯಾಗ್ರಹ 6ನೇ ದಿನಕ್ಕೆ
ಕನ್ನಡಪ್ರಭ ವಾರ್ತೆ, ಗದಗ, ಫೆ. 4
ಗದಗ-ಬೆಟಗೇರಿ ಅವಳಿ ನಗರದ ಮೂಲ ಸೌಲಭ್ಯಗಳ ಈಡೇರಿಕೆಗೆ ಆಗ್ರಹಿಸಿ ಕಳೆದ ಜ. 29ರಂದು ಗದಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ರಾಣಿ ಚನ್ನಮ್ಮ ಪಾರ್ಟಿ ವತಿಯಿಂದ ನಡೆದಿರುವ ಉಪವಾಸ ಸತ್ಯಾಗ್ರಹ ಸೋಮವಾರ 6ನೇ ದಿನಕ್ಕೆ ಕಾಲಿರಿಸಿದೆ. ಧರಣಿ ಶಿಬಿರಕ್ಕೆ ಸೋಮವಾರ ಭೇಟಿ ನೀಡಿದ್ದ ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಶೋಕ ಮ್ಯಾಗೇರಿ ಹಾಗೂ ಪದಾಧಿಕಾರಿಗಳು ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಅಶೋಕ ಮ್ಯಾಗೇರಿ ಮಾತನಾಡಿ, ಹೋರಾಟಕ್ಕೆ ಕೊಳಚೆ ನಿವಾಸಿಗಳ ಸಂಘದ ಬೆಂಬಲವಿದೆ. ಸರ್ಕಾರ ಕೂಡಲೇ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಭರವಸೆ ನೀಡದೆ ಇದ್ದರೆ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಹೋರಾಟ ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.
ಸಮಿತಿಯ ಕಾರ್ಯದರ್ಶಿ ಇಮ್ತಿಯಾಜ ಮಾನ್ವಿ ಮಾತನಾಡಿ, ಗದಗ-ಬೆಟಗೇರಿ ಅವಳಿ ನಗರದ ಅಮೂಲ್ಯ ವಕಾರಸಾಲು ಮಾರಾಟ ಠರಾವು ರದ್ದತಿಗಾಗಿ ಈ ಹಿಂದೆ ನಡೆದ ಆರ್ಸಿಪಿ ಕಾರ್ಯಕರ್ತರ ಹೋರಾಟ ಸ್ಮರಣೀಯ. ಈ ಬಾರಿ ಅವಳಿ ನಗರದ ಹಾಗೂ ಗದಗ ಜಿಲ್ಲೆಗೆ ಸಂಬಂಧಿಸಿದ 12 ಬೇಡಿಕೆ ಈಡೇರಿಕೆಗೆ ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಾದವರು ಬೇಗನೆ ಗಮನ ಹರಿಸಬೇಕೆಂದು ಆಗ್ರಹಿಸಿದರು. ಸಮಿತಿಯ ಪದಾಧಿಕಾರಿ ಉಮಾದೇವಿ ಕಾತರಕಿ, ತಿಪ್ಪವ್ವ ಮುಟಗಾರ, ಶರೀಫ ಬಿಳೆಯಲಿ, ಯಲ್ಲಪ್ಪ ರಾಮಗಿರಿ, ಪರಶುರಾಮ ಕಾಳೆ, ಅನಿಲ ಕಾಳೆ, ರಾಜು ಕಣಗಿನಹಾಳ, ಸಲೀಂ ಬಳ್ಳಾರಿ, ಬಸವರಾಜ ಬಣಗಾರ, ಆರ್.ಪಿ. ರವಿಕುಮಾರ, ಫಾತೀಮಾ, ಪುಷ್ಪಾ, ವಂದನಾ ಶ್ಯಾವಿ, ಕವಿತಾ ನಾಗಾವಿ, ಅರುಣಾ, ಸರೋಜಾ, ಸುವರ್ಣಾ ಕೋಳುರು, ಪ್ರಕಾಶ ಪಾಟೀಲ, ವೆಂಕಟೇಶ ಇನಾಮದಾರ ಮುಂತಾದವರು ಕೆಲಕಾಲ ಧರಣಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಹೋರಾಟಕ್ಕೆ ಬೆಂಬಲಿಸಿದ ಸಂಘಟನೆ ಪದಾಧಿಕಾರಿಗಳು, ಸದಸ್ಯರನ್ನು ಆರ್ಸಿಪಿ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ದೇಸಾಯಿ ಸ್ವಾಗತಿಸಿದರು.