ಕೆರೆ ಪುನಶ್ಚೇತನಕ್ಕೆ ಕ್ರಮ: ದೊಡ್ಡಮನಿ
ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಫೆ. 4
ಮಜ್ಜೂರು ಗ್ರಾಮದ ಹೊರವಲಯದಲ್ಲಿ ಸುಮಾರು 1,780 ಎಕರೆ ಪ್ರದೇಶದ ಜಮೀನುಗಳಿಗೆ ನೀರೊದಗಿಸುವ ಮಜ್ಜೂರು ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು.
ಅವರು ತಾಲೂಕಿನ ಮಜ್ಜೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ಸಂಜೆ ಅರಣ್ಯ ಇಲಾಖೆ ಏರ್ಪಡಿಸಿದ್ದ ವಿಶ್ವ ತರಿಭೂಮಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅರಣ್ಯ ನಾಶದಿಂದಾಗಿ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಕಡಿಮೆ ಮಾಡುವ ನಿಟ್ಟಿನಲ್ಲಿ ತರಿಭೂಮಿ ರಕ್ಷಣೆ ಪದ್ಧತಿ ಅಳವಡಿಕೆಗೆ ಜನ ಮುಂದಾಗಬೇಕು. ಇದರಿಂದ ಅಂತರ್ಜಲಮಟ್ಟ ಹೆಚ್ಚಾಗಲಿದ್ದು, ರೈತರು ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ತಾಲೂಕಿನಲ್ಲಿ ಒಟ್ಟು 62 ಕೆರೆಗಳಿದ್ದು, ಕೆರೆ ಪುನಶ್ಚೇತನಗೊಳಿಸಲು ಅರಣ್ಯ ಸಚಿವರೊಂದಿಗೆ ಚರ್ಚಿಸಿ ಶೀಘ್ರದಲ್ಲಿಯೇ ಯೋಜನೆ ರೂಪಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಹೆಚ್ಚುತ್ತಿರುವ ಜನಸಂಖ್ಯೆ, ಅಭಿವೃದ್ಧಿ ಮತ್ತು ಕೈಗಾರಿಕೀರಣಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಮಾಜದ ಪ್ರತಿ ವ್ಯಕ್ತಿಯಲ್ಲಿ ಪರಿಸರ ಪ್ರಜ್ಞೆ ಬೆಳೆಸಬೇಕಾಗಿದೆ. ಹರಿಯುವ ನೀರು ತಡೆಯುವ ಜತೆಗೆ ಅರಣ್ಯ ರಕ್ಷಣೆಗೆ ಹೆಚ್ಚು ಗಮನ ಹರಿಸಬೇಕು ಎಂದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎನ್. ಅಘೋರೆ, ವಲಯ ಅರಣ್ಯಾಧಿಕಾರಿ ಪಿ.ಸಿ. ಹಿರೇಮನಿ ಮಾತನಾಡಿದರು. ಅರಣ್ಯ ಸಮಿತಿ ಅಧ್ಯಕ್ಷ ಠಾಕ್ರಪ್ಪ ಲಮಾಣಿ, ತಾಪಂ ಸದಸ್ಯೆ ಫಕೀರವ್ವ ಮುಂಡವಾಡ, ಶಿವನಗೌಡ ಪಾಟೀಲ, ಗ್ರಾಪಂ ಸದಸ್ಯೆ ಶಹಜಾನಬಿ ಜಂಗಳಿ, ಹನುಮಂತಪ್ಪ ಕಿಳ್ಳಿಕ್ಯಾತರ, ರಮೇಶ ಲಮಾಣಿ, ಎಫ್.ಎಂ. ಹೊಂಗಲ, ಭಾರತಿ ಸೀತಿಮನಿ, ಎನ್.ಡಿ. ಮಹೇಂದ್ರಕರ, ಎಂ.ಎಚ್. ತಹಸೀಲ್ದಾರ, ರುದ್ರಗೌಡ ಪಾಟೀಲ, ಎಂ.ಎಸ್. ಗೋದಿ, ಗೂಡುಸಾಬ್ ಸಾಂಗಲಿ, ಬಿ.ಜಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಉಪ ಸಂರಕ್ಷಣಾಧಿಕಾರಿ ಎಸ್.ಬಿ. ಪೂಜಾರ ಸ್ವಾಗತಿಸಿದರು. ಗಣೇಶ ಹೆಗಡೆ ನಿರೂಪಿಸಿ, ವಂದಿಸಿದರು.
ಪದಾಧಿಕಾರಿಗಳ ಆಯ್ಕೆ
ಮುಂಡರಗಿ: ತಾಲೂಕಿನ ಜ್ಯಾಲವಾಡಗಿ ಗ್ರಾಮದ ವೀರಶೈವ ಪಂಚಮಸಾಲಿ ಯುವ ಘಟಕದ ಪದಾಧಿಕಾರಿಗಳನ್ನು ಈಚೆಗೆ ಆಯ್ಕೆಗೊಳಿಸಲಾಯಿತು. ಅಧ್ಯಕ್ಷರಾಗಿ ಮಹಾಂತೇಶ ಹಂಪಿಹೊಳಿ, ಉಪಾಧ್ಯಕ್ಷರಾಗಿ ಶರಣಪ್ಪ ಕಂತಿ, ಕಾರ್ಯದರ್ಶಿಯಾಗಿ ಮಲ್ಲೇಶ ಕಂತಿ, ಸಂಘಟನಾ ಕಾರ್ಯದರ್ಶಿಯಾಗಿ ಶರಣಪ್ಪ ಲಿಂಗಶೆಟ್ರ, ಖಜಾಂಚಿಯಾಗಿ ಶಿವಪ್ಪ ಅರವಟಿಗಿ ಅವರನ್ನು ತಾಲೂಕು ವೀರಶೈವ ಪಂಚಮಸಾಲಿ ಸಂಘದ ಅಧ್ಯಕ್ಷ ಕೋಟ್ರಗೌಡ ಪಾಟೀಲ, ತಾಲೂಕು ಯುವ ಘಟಕದ ಅಧ್ಯಕ್ಷ ಮಂಜುನಾಥ ಮುದೋಳ, ಕಾರ್ಯದರ್ಶಿ ಕುಮಾರ ಬನ್ನಿಕೊಪ್ಪ, ಖಜಾಂಚಿ ಮಂಜುನಾಥ ಗೋಡಿ, ಸಂ. ಕಾರ್ಯದರ್ಶಿ ಶಿದ್ದು ದೇಸಾಯಿ ಹಾಗೂ ಜ್ಯಾಲವಾಡಗಿ ಪಂಚಮಸಾಲಿ ಆಯ್ಕೆಗೊಳಿಸಲಾಯಿತು.
ಶಿಶುಮಂದಿರದ ವಾರ್ಷಿಕೋತ್ಸವ
ಹೊಳೆಆಲೂರು: ಸ್ಥಳೀಯ ಯಚ್ಚರೇಶ್ವರ ಬಾಲವಿಕಾಸ ವಿದ್ಯಾಮಂದಿರದ ಶಿಶು ಮಂದಿರ ವಾರ್ಷಿಕೋತ್ಸವ ಫೆ. 6ರ ಮಧ್ಯಾಹ್ನ 3ಕ್ಕೆ ಜರುಗಲಿದೆ. ಶಾಂತಾದೇವಿ ಹಿರೇಮಠಪಾಟೀಲ ಉದ್ಘಾಟಿಸುವರು. ಶಾಂತಾ ಐವಳ್ಳಿ ಅಧ್ಯಕ್ಷತೆ ವಹಿಸುವರು. ಕಮಲಾದೇವಿ ಪಾಟೀಲ ಆಗಮಿಸಲಿದ್ದು, ಎಸ್.ಬಿ. ಬಾಲನಗೌಡ್ರ ಬಹುಮಾನ ವಿತರಿಸುವರು. ಅಂದು 6.30ಕ್ಕೆ ಮನರಂಜನಾ ಕಾರ್ಯಕ್ರಮ ಹೇಮಲತಾ ಪಟೇಲ ಉದ್ಘಾಟಿಸಲಿದ್ದಾರೆ.